ನವ ದೆಹಲಿ: ಕೇಂದ್ರ ಸರ್ಕಾರ ಫೆಬ್ರವರಿ 1ರಂದು ಬಹು ನಿರೀಕ್ಷಿತ 2023-24ರ ಸಾಲಿನ ಕೇಂದ್ರ ಬಜೆಟ್ ಅನ್ನು ಬುಧವಾರ ಮಂಡಿಸಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗ್ಗೆ 11 ಗಂಟೆಗೆ ಮುಂಗಡಪತ್ರ ಮಂಡಿಸಲಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ಜನಪರ ಘೋಷಣೆಗಳನ್ನು ನಿರೀಕ್ಷಿಸಲಾಗಿದೆ.
ಜನ ಸಾಮಾನ್ಯರ ಆಶೋತ್ತರ ಈಡೇರಿಸಲಿದೆ: ಪ್ರಧಾನಿ ಮೋದಿ
ಬಜೆಟ್ ಜನ ಸಾಮಾನ್ಯ ಆಶೋತ್ತರಗಳನ್ನು ಈಡೇರಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಸಂಸತ್ತಿನ ಜಂಟಿ ಅಧಿವೇಶನಕ್ಕೆ (Budget 2023) ಮುನ್ನ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ವಿಶ್ವ ಈಗ ಭಾರತದ ಕಡೆಗೆ ಸಕಾರಾತ್ಮಕ ದೃಷ್ಟಿಕೋನದಿಂದ ಎದುರು ನೋಡುತ್ತಿದೆ. ವಿಶ್ವ ಸಮುದಾಯದಲ್ಲಿ ಭಾರತ ವಿಶ್ವಾಸಾರ್ಹ ತಾಣವಾಗಿದೆ ಎಂದು ಹೇಳಿದರು.
ಬಸವಣ್ಣನವರ ಕಾಯಕವೇ ಕೈಲಾಸ ನೀತಿಯನ್ನು ಸ್ಮರಿಸಿದ ರಾಷ್ಟ್ರಪತಿ
ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಟ್ಟಿದ್ದು, ಜಾಗತಿಕವಾಗಿ ಏಳಿಗೆ ಹೊಂದುತ್ತಿದೆ. ಇನ್ನಷ್ಟು ಆತ್ಮನಿರ್ಭರ ಸಾಧಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಅವಶ್ಯಕತೆ ಇದ್ದು, ಎಲ್ಲರೂ ಒಗ್ಗೂಡಿ ದೇಶದ ಏಳಿಗೆ ದೃಷ್ಟಿಯಿಂದ ಶ್ರಮಿಸೋಣ. ಮುಂದಿನ ವರ್ಷಗಳಲ್ಲಿ ಭಾರತದ ಏಳಿಗೆ ಮತ್ತೊಂದು ಹಂತ ತಲುಪಲಿದೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Budget 2023) ಹೇಳಿದರು. ದ್ರೌಪದಿ ಮುರ್ಮು ಅವರು ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದರು. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಅಂದರೆ, ಕೆಲಸ ಮಾಡುವುದರಲ್ಲೇ ದೇವರನ್ನು ಕಾಣುವುದು ಎಂಬುದು ಅವರ ಮಾತಿನ ತಾತ್ಪರ್ಯವಾಗಿದೆ. ಹಾಗಾಗಿ, ಸರ್ಕಾರ ಹಾಗೂ ದೇಶದ ಜನ ಬಸವಣ್ಣನವರ ತತ್ವವನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು” ಎಂದು ಕರೆ ನೀಡಿದರು. “ದೇಶದಲ್ಲೀಗ ಭ್ರಷ್ಟಾಚಾರ ನಿಗ್ರಹವಾಗಿದ್ದು, ಜಿಎಸ್‌ಟಿಯಂತಹ ತೆರಿಗೆ ಸುಧಾರಣೆ ಜಾರಿಗೆ ತರಲಾಗಿದೆ. ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ದೇಶದ ಚಹರೆ ಬದಲಾಗಿದೆ” ಎಂದರು.
ಆರ್ಥಿಕ ಸಮೀಕ್ಷೆ ಸಕಾರಾತ್ಮಕ, ಆಶಾದಾಯಕ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಗಳವಾರ ಮಂಡಿಸಿರುವ 2023ರ ಆರ್ಥಿಕ ಸಮೀಕ್ಷೆಯು ಭಾರತದ ಆರ್ಥಿಕತೆ ಕೋವಿಡ್ ಬಿಕ್ಕಟ್ಟಿನಿಂದ ಸಂಪೂರ್ಣ ಚೇತರಿಸಿದೆ. ಜಗತ್ತಿನಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ. ಹಾಗೂ ಜಿಡಿಪಿ ಬೆಳವಣಿಗೆ 2022-23ರಲ್ಲಿ 7%ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ನೇತೃತ್ವದ ತಂಡ ಸಿದ್ಧಪಡಿಸಿರುವ ಆರ್ಥಿಕ ಸಮೀಕ್ಷೆ ಪ್ರಕಾರ, ಜಾಗತಿಕ ಬಿಕ್ಕಟ್ಟಿನ ಹೊರತಾಗಿಯೂ 2023ರಲ್ಲಿ ಭಾರತ ಪ್ರಬಲ ಹಾಗೂ ವೇಗವಾಗಿ ಬೆಳೆಯುತ್ತಿರುವ ಎಕಾನಮಿಯಾಗಿ ಹೊರಹೊಮ್ಮಲಿದೆ. ಹೀಗಿದ್ದರೂ, ಭಾರತದ ಸಾಲದ ಬಡ್ಡಿ ದರ ಏರುಗತಿಯಲ್ಲಿ ಮುಂದುವರಿಯಬಹುದು ಹಾಗೂ ಹಣದುಬ್ಬರ ಸವಾಲು ಕೂಡ ಇರಬಹುದು ಎಂದು ತಿಳಿಸಿದೆ.
ಆದಾಯ ತೆರಿಗೆ ವಿನಾಯಿತಿ ಮಿತಿ ವಿಸ್ತರಣೆ ನಿರೀಕ್ಷೆ:
ಆದಾಯ ತೆರಿಗೆ ದರಗಳು ಮತ್ತು ಆದಾಯ ತೆರಿಗೆ ಶ್ರೇಣಿಗಳಲ್ಲಿ ಕೆಲ ಬದಲಾವಣೆಗಳು, ತೆರಿಗೆ ವಿನಾಯಿತಿ ಮಿತಿಯ ವಿಸ್ತರಣೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ವಿಸ್ತರಣೆಯ ನಿರೀಕ್ಷೆ ಜನ ಸಾಮಾನ್ಯರಲ್ಲಿದೆ.
ಬೆಲೆ ಏರಿಕೆಯಿಂದ ಸಿಗಲಿದೆಯೇ ರಿಲೀಫ್?
ವಿದ್ಯುತ್ ಬಿಲ್‌ಗೆ ಸಬ್ಸಿಡಿ, ಬೆಲೆ ಏರಿಕೆಯಿಂದ ರಿಲೀಫ್ ಅನ್ನು ಜನ ಸಾಮಾನ್ಯರು ಬಯಸುತ್ತಿದ್ದಾರೆ. ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಇರುವುದರಿಂದ ಬಿಸಿನೆಸ್ ಸಮುದಾಯ ಅನಿಶ್ಚಿತತೆ ಎದುರಿಸುತ್ತಿದೆ. ಹೀಗಾಗಿ ಉದ್ದಿಮೆ ಸ್ನೇಹಿ ಉಪಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯೂ ಇದೆ.
ವೇತನದಾರರ ನಿರೀಕ್ಷೆ ಏನು?
ವೇತನದಾರರು ಆದಾಯ ತೆರಿಗೆ ವಿನಾಯಿತಿಯ ಮಿತಿ ವಿಸ್ತರಣೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಈಗಿನ 50,000 ರೂ.ಗಳಿಂದ 1 ಲಕ್ಷ ರೂ.ಗೆ ಏರಿಕೆ ನಿರೀಕ್ಷಿಸುತ್ತಿದ್ದಾರೆ. ಈ ನಡುವೆ ಸಣ್ಣ ತೆರಿಗೆದಾರರಿಗೆ ರಿಲೀಫ್ ನೀಡಬೇಕು ಎಂದು ಕೈಗಾರಿಕಾ ವಲಯದ ಸಂಘಟನೆ ಫಿಕ್ಕಿ ಒತ್ತಾಯಿಸಿದೆ.
ಐಎಂಎಫ್ ನುಡಿದ ಭವಿಷ್ಯ: ಭಾರತ ಮತ್ತು ಚೀನಾ 2023ರಲ್ಲಿ ಪ್ರಬಲ ಆರ್ಥಿಕತೆಗಳಾಗಿ ನಿರ್ಣಾಯಕ ಪಾತ್ರ ವಹಿಸಲಿದೆ. ಜಾಗತಿಕ ಬೆಳವಣಿಗೆಯಲ್ಲಿ 50% ಪಾಲನ್ನು ವಹಿಸಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ (IMF) ತನ್ನ ವರದಿಯಲ್ಲಿ ತಿಳಿಸಿದೆ. ಅಮೆರಿಕ ಮತ್ತು ಯುರೋಪ್ ಕೇವಲ 10ರಲ್ಲಿ ಒಂದು ಭಾಗವನ್ನು ಮಾತ್ರ ವಹಿಸಲಿವೆ ಎಂದಿರುವುದು ಗಮನಾರ್ಹ.
ಇದನ್ನೂ ಓದಿ: Budget 2023: ದಿನಾಂಕ, ಸಮಯ, ನಿರೀಕ್ಷೆಗಳು, ಯಾವಾಗ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ವಿವರ