ನವದೆಹಲಿ: ದೇಶದಲ್ಲಿ ಸಹಕಾರಿ ವಲಯವನ್ನು ಸದೃಢಗೊಳಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ದೇಶಾದ್ಯಂತ ೫ ವರ್ಷದಲ್ಲಿ ೨ ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (PACS)ಗಳು, ಡೇರಿ ಹಾಗೂ ಮೀನುಗಾರಿಕೆ ಸಹಕಾರಿಗಳನ್ನು ಸ್ಥಾಪಿಸಲು ಕೇಂದ್ರ ಸಂಪುಟ ಸಭೆ (Union Cabinet) ಬುಧವಾರ ಅನುಮೋದನೆ ನೀಡಿದೆ. ಇದರಿಂದ ಗ್ರಾಮೀಣ ರೈತರು ಹೆಚ್ಚಿನ ಅನುಕೂಲ ಪಡೆಯಲಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವು ೪,೮೦೦ ಕೋಟಿ ರೂ. ವ್ಯಯಿಸಲಿದೆ.
ದೇಶದ ಪ್ರತಿಯೊಂದು ಗ್ರಾಮ ಪಂಚಾಯಿತಿ, ಗ್ರಾಮಗಳಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಸದ್ಯ, ದೇಶಾದ್ಯಂತ ೬೩ ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿದ್ದು, ಮುಂದಿನ ಐದು ವರ್ಷದಲ್ಲಿ ಇವುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ. ಗ್ರಾಮೀಣ ಮಟ್ಟದಲ್ಲಿ ಸಣ್ಣ ಸಾಲ ಸೌಲಭ್ಯ, ಕೃಷಿ ಉತ್ಪನ್ನ ಮಾರಾಟ ಸೇರಿ ಹಲವು ದಿಸೆಯಲ್ಲಿ ಸಹಕಾರಿ ಸಂಘಗಳು ರೈತರಿಗೆ ಅನುಕೂಲವಾಗಲಿವೆ.
ಇದನ್ನೂ ಓದಿ: Union Cabinet | ರಾಷ್ಟ್ರ ಮಟ್ಟದ 3 ಸಹಕಾರ ಸಂಘಗಳ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆ ಅಸ್ತು, ಬಿತ್ತನೆ ಬೀಜ ರಫ್ತಿಗೆ ಉತ್ತೇಜನ
ಹಾಗೆಯೇ, ದೇಶದಲ್ಲಿ ಸುಮಾರು 1,99,182 ಪ್ರಾಥಮಿಕ ಡೈರಿ ಸಹಕಾರಿ ಸಂಘಗಳಿದ್ದು, 1.5 ಕೋಟಿ ಸದಸ್ಯರನ್ನು ಹೊಂದಿವೆ. ರೈತರಿಂದ ಹಾಲು ಸಂಗ್ರಹಣೆ, ಹಾಲಿನ ಪರೀಕ್ಷಾ ಸೌಲಭ್ಯಗಳು, ಜಾನುವಾರು ಆಹಾರ ಮಾರಾಟ, ವಿಸ್ತರಣೆ ಇತ್ಯಾದಿ ಸೇವೆಗಳನ್ನು ಸದಸ್ಯರಿಗೆ ಒದಗಿಸುತ್ತಿವೆ. ಅಲ್ಲದೆ, 25,297 ಪ್ರಾಥಮಿಕ ಮೀನುಗಾರಿಕಾ ಸಹಕಾರ ಸಂಘಗಳಿದ್ದು, ಸುಮಾರು 38 ಲಕ್ಷ ಸದಸ್ಯರನ್ನು ಹೊಂದಿವೆ. ಸರ್ಕಾರದ ನಿರ್ಧಾರದಿಂದ ಇವುಗಳ ಸಂಖ್ಯೆಯೂ ಹೆಚ್ಚಾಗಲಿದೆ.
ಲಡಾಕ್‌ನಲ್ಲಿ ಭದ್ರತೆ ಹೆಚ್ಚಿಸಲು ಮಹತ್ವದ ನಿರ್ಧಾರ
ಚೀನಾ ಉಪಟಳ ಮಾಡುವ ಲಡಾಕ್‌ನಲ್ಲಿ ಭದ್ರತೆ ಹೆಚ್ಚಿಸುವ ದಿಸೆಯಲ್ಲೂ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಲಡಾಕ್‌ನಲ್ಲಿ ಏಳು ಹೊಸ ಬೆಟಾಲಿಯನ್ ನಿಯೋಜನೆ ಹಾಗೂ ೯,೪೦೦ ಐಟಿಬಿಪಿ ಪೊಲೀಸರ ನೆಲೆ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆಯು ಅನುಮೋದನೆ ನೀಡಿದೆ. ಇದರಿಂದ ಲಡಾಕ್ ಗಡಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಸಾಧ್ಯವಾಗಲಿದೆ.