ಹೊಸದಿಲ್ಲಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ ವಿಡಿಯೋ (Deepfake video) ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Union Minister Rajeev Chandrasekhar) ಪ್ರತಿಕ್ರಿಯಿಸಿದ್ದಾರೆ. ʼಇಂಥ ಅಪಾಯಕಾರಿ ಮತ್ತು ಹಾನಿಕಾರಕ ತಪ್ಪು ಮಾಹಿತಿಗಳನ್ನು ಈ ವೇದಿಕೆಗಳ ಮೂಲಕ ಎದುರಿಸಬೇಕಾಗಿದೆʼ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ʼಎಕ್ಸ್ʼನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವರು, “ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಇಂಟರ್ನೆಟ್ ಬಳಸುವ ಎಲ್ಲಾ ಡಿಜಿಟಲ್ ನಾಗರಿಕರ ಸುರಕ್ಷತೆ ಮತ್ತು ವಿಶ್ವಾಸವನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ” ಎಂದಿದ್ದಾರೆ.
2023ರ ಏಪ್ರಿಲ್‌ನಲ್ಲಿ ಸೂಚಿಸಲಾದ ಐಟಿ ನಿಯಮಗಳನ್ನು ತಿಳಿಸುತ್ತಾ ಅವರು, “ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಕಾನೂನು ಬಾಧ್ಯತೆಯಿದೆ. ಯಾವುದೇ ಬಳಕೆದಾರರು ಯಾವುದೇ ತಪ್ಪು ಮಾಹಿತಿಯನ್ನು ಪೋಸ್ಟ್ ಮಾಡದಂತೆ ಖಚಿತಪಡಿಸಿಕೊಳ್ಳಬೇಕು. ಮತ್ತು ಯಾವುದೇ ಬಳಕೆದಾರರು ಅಥವಾ ಸರ್ಕಾರ ಈ ಬಗ್ಗೆ ವರದಿ ಮಾಡಿದಾಗ 36 ಗಂಟೆಗಳಲ್ಲಿ ತಪ್ಪು ಮಾಹಿತಿಯನ್ನು ತೆಗೆದುಹಾಕಬೇಕು. ಪ್ಲಾಟ್‌ಫಾರ್ಮ್‌ಗಳು ಇದನ್ನು ಅನುಸರಿಸದಿದ್ದರೆ ನಿಯಮ 7ರ ಪ್ರಕಾರ ಮತ್ತು IPCಯ ನಿಬಂಧನೆಗಳ ಅಡಿಯಲ್ಲಿ ಬಾಧಿತ ವ್ಯಕ್ತಿಯು ಆನ್‌ಲೈನ್ ವೇದಿಕೆಗಳನ್ನು ನ್ಯಾಯಾಲಯಕ್ಕೆ ಎಳೆಯಬಹುದು. ಡೀಪ್‌ಫೇಕ್‌ಗಳು ಇತ್ತೀಚಿನ ಹೆಚ್ಚು ಅಪಾಯಕಾರಿ ಮತ್ತು ಹಾನಿಕರವಾದ ತಪ್ಪು ಮಾಹಿತಿ ಮೂಲಗಳಾಗಿವೆ” ಎಂದಿದ್ದಾರೆ.
ನಟಿ ರಶ್ಮಿ ಮಂದಣ್ಣ ಅವರಂತೆ ತೋರುವ ವೀಡಿಯೊವನ್ನು ಶೇರ್ ಮಾಡಿದ ಅಭಿಷೇಕ್ ಕುಮಾರ್ ಎಂಬ ಪತ್ರಕರ್ತರಿಗೆ ಕೇಂದ್ರ ಸಚಿವರು ಪ್ರತ್ಯುತ್ತರವಾಗಿ ಟ್ವೀಟ್ ಮಾಡಿದ್ದಾರೆ. “ದೇಶದಲ್ಲಿ ಡೀಪ್‌ಫೇಕ್ ಘಟನೆಗಳನ್ನು ಎದುರಿಸಲು ಕಾನೂನು ಮತ್ತು ನಿಯಂತ್ರಕ ಚೌಕಟ್ಟಿನ ತುರ್ತು ಅವಶ್ಯಕತೆ ಇದೆʼʼ ಎಂದಿರುವ ಕುಮಾರ್ ಅವರು ಮೂಲ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ನಟಿ ಝರಾ ಪಟೇಲ್ ಅವರ ವೀಡಿಯೊ ಆಗಿದ್ದು, ಅಕ್ಟೋಬರ್ 9ರಂದು ಅಪ್‌ಲೋಡ್ ಮಾಡಲಾಗಿತ್ತು. ಅದಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಜೋಡಿಸಿ ವ್ಯತ್ಯಾಸವೇ ಕಾಣದಂತೆ ವಿಡಿಯೋ ಮಾಡಿ ಪೋಸ್ಟ್ ಮಾಡಲಾಗಿದೆ. ಝರಾ ಪಟೇಲ್ ಬ್ರಿಟಿಷ್ ಇಂಡಿಯನ್ ಪ್ರಜೆಯಾಗಿದ್ದು, Instagramನಲ್ಲಿ 4.15 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.
— Liz/Barsha (@debunk_misinfos) November 5, 2023
‘ಗುಡ್ ಬೈ’ ಚಿತ್ರದಲ್ಲಿ ಮಂದಣ್ಣನ ತಂದೆಯ ಪಾತ್ರದಲ್ಲಿ ನಟಿಸಿದ್ದ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಕೂಡ ನಟಿಯ ಬೆಂಬಲಕ್ಕೆ ಬಂದಿದ್ದು, ಈ ಬಗ್ಗೆ ಕಾನೂನು ಕ್ರಮಕ್ಕೆ ಕರೆ ನೀಡಿದ್ದಾರೆ.
ಡೀಪ್‌ಫೇಕ್ ಅಂದರೇನು?
‘ಡೀಪ್‌ಫೇಕ್’ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಿದ ವೀಡಿಯೊಗಳು. ಇವು ನೈಜವಾಗಿಯೇ ಕಾಣಿಸುತ್ತವೆ. ಡೀಪ್‌ಫೇಕ್ ವೀಡಿಯೊದಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ವ್ಯಕ್ತಿಗಳ ದೇಹ ಮತ್ತು ಮುಖವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಿ ಜೋಡಿಸಿ ಒರಿಜಿನಲ್ ಆಗಿ ಕಾಣುವಂತೆ ಮಾಡಲಾಗುತ್ತದೆ.