Site icon Vistara News

Savitri Thakur: ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಬರೆಯಲು ಬಾರದೆ ಕೇಂದ್ರ ಸಚಿವೆ ಪರದಾಟ; ನೆಟ್ಟಿಗರಿಂದ ‘ಕ್ಲಾಸ್’‌

Savitri Thakur

Union minister Savitri Thakur incorrectly writes 'Beti Padhao, Beti Bachao' slogan; opposition questions

ಭೋಪಾಲ್:‌ ದೇಶದಲ್ಲಿ ಸಿ ದರ್ಜೆ, ಡಿ ದರ್ಜೆ ನೌಕರರನ್ನು ನೇಮಿಸಿಕೊಳ್ಳಲು ಕೂಡ ಮಾನದಂಡ ಇದೆ. ಕನಿಷ್ಠ ಇಷ್ಟೇ ಶಿಕ್ಷಣ ಪಡೆದಿರಬೇಕು ಎಂಬ ನಿಯಮವಿದೆ. ಆದರೆ, ದೇಶದ ಭವಿಷ್ಯ ರೂಪಿಸಬೇಕಾದ ರಾಜಕಾರಣಿಗಳಿಗೆ ಯಾವುದೇ ಶೈಕ್ಷಣಿಕ ಹಿನ್ನೆಲೆಯ ಕಟ್ಟುಪಾಡುಗಳಿಲ್ಲ. ಇದೇ ಕಾರಣಕ್ಕೆ, 10ನೇ ಕ್ಲಾಸು ಫೇಲಾದವರು ಗ್ರಂಥಾಲಯ ಸಚಿವರಾಗುತ್ತಾರೆ, ಓದಲು ಬರದವರೂ ಶಿಕ್ಷಣ ಸಚಿವರಾಗುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಕೇಂದ್ರ ಸಚಿವೆ ಸಾವಿತ್ರಿ ಠಾಕೂರ್‌ (Savitri Thakur) ಅವರು ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ (Beti Bachao Beti Padhao) ಅಭಿಯಾನವನ್ನು ಹಿಂದಿಯಲ್ಲಿ ಬರೆಯಲು ಪರದಾಡಿದ್ದಾರೆ. ಅವರು ಅಭಿಯಾನದ ಹೆಸರನ್ನು ತಪ್ಪಾಗಿ ಬರೆದ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಹೌದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಹಾಯಕ ಸಚಿವೆಯಾಗಿರುವ ಸಾವಿತ್ರಿ ಠಾಕೂರ್‌ ಅವರು ಮಧ್ಯಪ್ರದೇಶದ ಧಾರ್‌ನಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ ನಡೆದ ಸ್ಕೂಲ್‌ ಚಲೋ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಅವರು ಬೋರ್ಡ್‌ ಮೇಲೆ ಬೇಟಿ ಬಚಾವೋ ಬೇಟಿ ಪಡಾವೋ ಎಂಬುದಾಗಿ ಬರೆಯಲು ಮುಂದಾಗಿದ್ದಾರೆ. ಆದರೆ, ಅಭಿಯಾನದ ಹೆಸರು ಬರೆಯಲು ಅವರಿಗೆ ಬಂದಿಲ್ಲ. ಅವರು “ಬೇಡಿ ಪಡಾವೋ ಬಚ್ಚಾವ್”‌ ಎಂಬುದಾಗಿ ತಪ್ಪಾಗಿ ಬರೆದಿದ್ದಾರೆ.

ಸಾವಿತ್ರಿ ಠಾಕೂರ್‌ ಅವರು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ ಮಾಹಿತಿ ಪ್ರಕಾರ, 12ನೇ ತರಗತಿವರೆಗೆ ಓದಿದ್ದಾರೆ. ಪಿಯುಸಿ ಓದಿದರೂ ಅವರಿಗೆ ಸರಿಯಾಗಿ ಬರೆಯಲು ಬರದಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸಚಿವೆಗೇ ಬರೆಯಲು ಬರದಿದ್ದರೆ, ಆ ಖಾತೆಯನ್ನು ಹೇಗೆ ನಿಭಾಯಿಸುತ್ತಾರೆ? ಅವರು ಮಕ್ಕಳ ಕಲ್ಯಾಣಕ್ಕಾಗಿ ಯಾವ ಯೋಜನೆಗಳನ್ನು ತರಲು ಸಾಧ್ಯ” ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ರಾಜಕಾರಣಿಗಳಿಗೆ ಶೈಕ್ಷಣಿಕ ಮಿತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ಪ್ರಕರಣವು ರಾಜಕೀಯ ಸ್ವರೂಪ ಪಡೆದಿದೆ. “ಸಾಂವಿಧಾನಿಕವಾಗಿ ಉನ್ನತ ಜವಾಬ್ದಾರಿಯಲ್ಲಿ ಇರುವವರು, ದೊಡ್ಡ ದೊಡ್ಡ ಖಾತೆ ನಿಭಾಯಿಸುವವರಿಗೇ ತಮ್ಮ ಮಾತೃಭಾಷೆಯಲ್ಲಿ ಬರೆಯಲು ಆಗದಂತಹ ಪರಿಸ್ಥಿತಿ ಇದ್ದರೆ, ಅದು ಪ್ರಜಾಪ್ರಭುತ್ವದ ದೊಡ್ಡ ಅಣಕ. ಅವರು ಹೇಗೆ ಖಾತೆಯನ್ನು ನಿಭಾಯಿಸುತ್ತಾರೆ” ಎಂಬುದಾಗಿ ಕಾಂಗ್ರೆಸ್‌ ಹಿರಿಯ ನಾಯಕ ಕೆ.ಕೆ.ಮಿಶ್ರಾ ಪ್ರಶ್ನಿಸಿದ್ದಾರೆ. ಹಾಗೆಯೇ, ರಾಜಕಾರಣಿಗಳಿಗೂ ಶೈಕ್ಷಣಿಕ ಮಿತಿ ನಿಗದಿಪಡಿಸುವ ಕುರಿತು ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Vaishnavi Gowda: ಸೀತಮ್ಮಗೆ ಕಿಡಿಗೇಡಿಗಳ ಕಾಟ; ವೈರಲ್ ಆಗ್ತಿದೆ ಡೀಪ್ ಫೇಕ್ ಫೋಟೊ!

Exit mobile version