Site icon Vistara News

ಸಾವಿರ ಸುಳ್ಳು ಹೇಳಿ ಒಂದು ಮದುವೆ ಅಲ್ಲ; ಸಾಮೂಹಿಕ ಮದುವೆಯೇ ಸುಳ್ಳು! ಹೇಗಂತೀರಾ?

UP Community Wedding

UP Fake Community Wedding Event Busted In Ballia; Brides Seen Garlanding Themselves, 15 Held

ಲಖನೌ: ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಮಾತಿದೆ. ಆದರೆ, ಉತ್ತರ ಪ್ರದೇಶದಲ್ಲಿ (Uttar Pradesh) ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ (Community Wedding) ನಡೆದ ಮದುವೆಗಳೇ ನಕಲಿಯಾಗಿದೆ. ಹೌದು, ಸರ್ಕಾರದ ಸಹಾಯಧನಕ್ಕಾಗಿ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ವರರು ಇಲ್ಲದೆ, ವಧುಗಳ ವೇಷದಲ್ಲಿರುವವರೇ ಹಾರ ಬದಲಾಯಿಸಿಕೊಂಡಿರುವ ಪ್ರಕರಣ ಬಯಲಾಗಿದೆ.

ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ಮದುವೆಯಾದವರಿಗೆ ಉತ್ತರ ಪ್ರದೇಶ ಸರ್ಕಾರವು ಸಹಾಯಧನ ನೀಡುತ್ತದೆ. ಸಹಾಯಧನದ ಆಸೆಗಾಗಿ ಬಲಿಯಾ ಜಿಲ್ಲೆಯಲ್ಲಿ ಜನವರಿ 25ರಂದು ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಒಂದಷ್ಟು ಜೋಡಿಗಳು ನಕಲಿ ಎಂಬುದು ಗೊತ್ತಾಗಿದೆ. ವರಗಳು ಇಲ್ಲದೆ, ವಧುಗಳೇ ಹಾರ ಬದಲಾಯಿಸಿಕೊಂಡಿರುವ, ಬಾಡಿಗೆ ವರಗಳನ್ನು ತಂದು ಮದುವೆ ಎಂಬಂತೆ ಬಿಂಬಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಕಾರ್ಯಕ್ರಮದಲ್ಲಿ ಸುಮಾರು 568 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿವೆ. ಆದರೆ, ಕೆಲ ಹೆಣ್ಣುಮಕ್ಕಳು ನಕಲಿ ವರಗಳನ್ನು ಕರೆಸಿ, ಮದುವೆಯ ನಾಟಕವಾಡಿದ್ದಾರೆ. ಸುಮಾರು 500 ರೂಪಾಯಿಯಿಂದ 2 ಸಾವಿರ ರೂ.ವರೆಗೆ ಹಣ ಕೊಟ್ಟು ನಕಲಿ ವರಗಳನ್ನು ಕರೆದುಕೊಂಡು ಬರಲಾಗಿದೆ. ಇನ್ನೂ ಒಂದಷ್ಟು ಮಹಿಳೆಯರು, ವರ ಇಲ್ಲದೆ, ತಾವೇ ಹಾರ ಬದಲಾಯಿಸಿಕೊಂಡು ಮದುವೆ ಎಂಬಂತೆ ಬಿಂಬಿಸಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅಧಿಕಾರಿ ಸೇರಿ 15 ಜನರ ಬಂಧನ

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಕಲಿ ಮದುವೆಯಾದ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಇಲಾಖೆಯ ಇಬ್ಬರು ಅಧಿಕಾರಿಗಳು ಸೇರಿ ಒಟ್ಟು 15 ಜನರನ್ನು ಬಂಧಿಸಲಾಗಿದೆ. ಮದುವೆ ಸಮಾರಂಭದಲ್ಲಿ ಬಿಜೆಪಿ ಶಾಸಕ ಕೇಟ್ಕಿ ಸಿಂಗ್‌ ಅವರೇ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.

ಇದನ್ನೂ ಓದಿ: Double Murder: ಮದುವೆಯಾಗಿ ಕೈ ಕೊಟ್ಟ ಹೆಂಡತಿ, ಆಕೆಯ ಪ್ರಿಯತಮನ ಕೊಚ್ಚಿ ಕೊಂದ ಮಾಜಿ ಪತಿ

ಉತ್ತರ ಪ್ರದೇಶದಲ್ಲಿ ಸಾಮೂಹಿಕ ಸಮಾರಂಭಗಳಲ್ಲಿ ಮದುವೆಯಾಗುವವರಿಗೆ 51 ಸಾವಿರ ರೂ. ನೀಡಲಾಗುತ್ತದೆ. 51 ಸಾವಿರ ರೂಪಾಯಿಯಲ್ಲಿ ವಧುವಿಗೆ 35 ಸಾವಿರ ರೂ., ಮದುವೆ ಸಾಮಗ್ರಿ ಖರೀದಿಗೆ 10 ಸಾವಿರ ರೂ. ಹಾಗೂ ಕಾರ್ಯಕ್ರಮದ ಆಯೋಜನೆಗೆ 6 ಸಾವಿರ ರೂ. ನೀಡಲಾಗುತ್ತದೆ. ಈ ದುಡ್ಡಿನ ಆಸೆಗಾಗಿ ನಕಲಿ ಮದುವೆ ನಡೆದಿರುವುದು ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಯೋಜನೆಯ ಲಾಭ ಸಿಗುವುದಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version