Site icon Vistara News

Diwali In Ayodhya | ಅಯೋಧ್ಯೆಯಲ್ಲಿ ಇಂದು ದೀಪೋತ್ಸವ, ಮೊದಲ ಬಾರಿ ಮೋದಿ ಭಾಗಿ, ಹೀಗಿದೆ ಸಿದ್ಧತೆ

Modi Yogi

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬದ (Diwali In Ayodhya) ಹಿಂದಿನ ದಿನ (ಭಾನುವಾರ) ನಡೆಯುವ ದೀಪೋತ್ಸವದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ. ಸುಮಾರು ನಾಲ್ಕು ಗಂಟೆ ಅಯೋಧ್ಯೆಯಲ್ಲಿ ಇರಲಿರುವ ಮೋದಿ, ವಿಶೇಷ ಪೂಜೆ, ದೀಪ ಬೆಳಗುವುದು ಸೇರಿ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೋದಿ ಅವರಿಗೆ ಸಾಥ್‌ ನೀಡಲಿದ್ದಾರೆ.

ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಯೋಗಿ ಆದಿತ್ಯನಾಥ್‌ ಅವರು ಮೋದಿ ಅವರನ್ನು ಅಯೋಧ್ಯೆಗೆ ಸ್ವಾಗತಿಸಲಿದ್ದಾರೆ. ಇಬ್ಬರೂ ಸೇರಿ ರಾಮ ಮಂದಿರ ನಿರ್ಮಾಣದ ಕಾಮಗಾರಿ ವೀಕ್ಷಿಸಲಿದ್ದಾರೆ. ಹಾಗೆಯೇ, ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದಲ್ಲಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಅಯೋಧ್ಯೆಯಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ಆಯೋಜಿಸುತ್ತಿರುವ ಆರನೇ ದೀಪೋತ್ಸವದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಸಂಜೆ 6.30ರ ಸುಮಾರಿಗೆ ಸರಯೂ ನದಿ ತೀರದಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದು, ದೀಪವನ್ನೂ ಬೆಳಗಲಿದ್ದಾರೆ. ಸಂಜೆ 7 ಗಂಟೆಗೆ ದೀಪೋತ್ಸವ ನಡೆಯಲಿದ್ದು, ಇದರಲ್ಲಿ ಭಾಗಿಯಾಗಿ ರಾತ್ರಿ 8ಗಂಟೆಗೆ ಅಯೋಧ್ಯೆಯಿಂದ ಹಿಂತಿರುಗಲಿದ್ದಾರೆ.

ದೀಪೋತ್ಸವದಲ್ಲಿ ಭಾಗಿಯಾಗುವ ಜತೆಗೆ ಮೋದಿ ಅವರು 4 ಸಾವಿರ ಕೋಟಿ ರೂ. ವೆಚ್ಚದ 66 ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಈಗಾಗಲೇ ಲಕ್ಷಾಂತರ ಜನ ಅಯೋಧ್ಯೆಯಲ್ಲಿ ಬೀಡುಬಿಟ್ಟಿರುವ ಕಾರಣ ನಗರಕ್ಕೆ ಹೊಸ ಕಳೆ ಬಂದಿದೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

ಇದನ್ನೂ ಓದಿ | Diwali In Ayodhya | 17 ಲಕ್ಷ ದೀಪ, ಲೇಸರ್‌ ಶೋ ಮೂಲಕ ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ, ವಿಡಿಯೊ ನೋಡಿ

Exit mobile version