ನವದೆಹಲಿ: ಭಾರತದಲ್ಲಿ ಡಿಜಿಟಲ್ ಹಣ ಪಾವತಿಗಾಗಿ ರಚಿಸಿರುವ ಏಕೀಕೃತ ಪಾವತಿ ವ್ಯವಸ್ಥೆ (Unified Payments Interface-UPI) ಈಗ ಜಾಗತಿಕ ಮಟ್ಟದಲ್ಲಿ ಬಳಕೆಯಾಗುತ್ತಿದೆ. ಜಗತ್ತಿನ ಹಲವು ರಾಷ್ಟ್ರಗಳು ಯುಪಿಐಅನ್ನು ಅಳವಡಿಸಿಕೊಂಡಿವೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆಯುವ ಜಿ 20 ಶೃಂಗಸಭೆಯ (G 20 Summit 2023) ವೇಳೆ ಜಾಗತಿಕ ನಾಯಕರಿಗೆ ಬ್ಯಾಂಕ್ ಖಾತೆಯೇ ಇಲ್ಲದೆ ಯುಪಿಐ ಮೂಲಕ ಹಣ ಪಾವತಿಸು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಆ ಮೂಲಕ ಭಾರತದ ‘ಡಿಜಿಟಲ್ ಇಂಡಿಯಾ’ ಸಾಧನೆಯನ್ನು ಜಗತ್ತಿಗೆ ಅನಾವರಣ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿ ಜಗತ್ತಿನ ಹಲವು ನಾಯಕರು ಬ್ಯಾಂಕ್ ಖಾತೆಯೇ ಇಲ್ಲದೆ ಯುಪಿಐ ಮೂಲಕ ಹಣ ಪಾವತಿ ಮಾಡುವುದು, ರುಪೇ ಪೇಮೆಂಟ್, ಸ್ಮಾರ್ಟ್ ವಾಚ್ ಸೇರಿ ಹಲವು ಡಿವೈಸ್‌ಗಳ ಮೂಲಕ ಹಣ ಪಾವತಿಸುವುದು ಸೇರಿ ಡಿಜಿಟಲ್ ಇಂಡಿಯಾದ ಸಕಲ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಇದರೊಂದಿಗೆ ಆನ್‌ಲೈನ್ ಪೇಮೆಂಟ್ ಸೇರಿ ಹಲವು ದಿಸೆಯಲ್ಲಿ ಭಾರತದ ಸಾಧನೆಯನ್ನು ನಾಯಕರಿಗೆ ಪರಿಚಯ ಮಾಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
“ತಂತ್ರಜ್ಞಾನದಲ್ಲಿ ಭಾರತದ ಪ್ರಮುಖ ಸಾಧನೆಗಳನ್ನು ಜಗತ್ತಿನ ನಾಯಕರ ಎದುರು ಅನಾವರಣ ಮಾಡಲಾಗುತ್ತದೆ. ಭಾರತ ಕೂಡ ಹೇಗೆ ತಂತ್ರಜ್ಞಾನದಲ್ಲಿ ಮುಂದಿದೆ, ಆನ್‌ಲೈನ್ ಪಾವತಿ ಎಷ್ಟು ಸುಲಭ ಹಾಗೂ ನಿಖರ ಎಂಬುದನ್ನು ಪ್ರದರ್ಶಿಸಲಾಗುತ್ತದೆ” ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಿಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (PPI) ವ್ಯಾಲೆಟ್ ಸೇವೆ ಕೂಡ ವಿದೇಶಿ ಗಣ್ಯರಿಗೆ ಇರಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಜಿ 20 ಶೃಂಗಸಭೆಗೆ ದೆಹಲಿ ಸಿದ್ಧ
ಇದನ್ನೂ ಓದಿ: G 20 in India : ಅಮೆರಿಕ ಅಧ್ಯಕ್ಷ ಬೈಡೆನ್‌ಗಾಗಿ ಬುಕ್ ಆಯ್ತು ಐಟಿಸಿ ಮೌರ್ಯ ಹೋಟೆಲ್‌ನ 400 ರೂಮ್!
ಕೆಲ ದಿನಗಳ ಹಿಂದಷ್ಟೇ ಬೆನ್ನಲ್ಲೇ ಜರ್ಮನಿ ಡಿಜಿಟಲ್ ಹಾಗೂ ಸಾರಿಗೆ ಸಚಿವ ವೋಲ್ಕರ್ ವಿಸ್ಸಿಂಗ್ (Volker Wissing) ಅವರು ದೆಹಲಿಯಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ತರಕಾರಿ ಖರೀದಿಸಿದ್ದ ವಿಡಿಯೊ ವೈರಲ್ ಆಗಿತ್ತು. ವೋಲ್ಕರ್ ಅವರು ಯುಪಿಐ ಮೂಲಕ ಹಣ ಪಾವತಿಸಿದ ವಿಡಿಯೊವನ್ನು ಭಾರತದಲ್ಲಿರುವ ಜರ್ಮನಿ ರಾಯಭಾರ ಕಚೇರಿಯು ಎಕ್ಸ್ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. “ಭಾರತದಲ್ಲಿ ಡಿಜಿಟಲ್ ಮೂಲಸೌಕರ್ಯದ ಯಶೋಗಾಥೆ ಇದಾಗಿದೆ. ಎಲ್ಲರೂ ಕ್ಷಣಮಾತ್ರದಲ್ಲಿ ಹಣ ಪಾವತಿಸುವುದನ್ನು ಯುಪಿಐ ಖಚಿತಪಡಿಸುತ್ತದೆ. ಜರ್ಮನಿ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಯುಪಿಐ ಮೂಲಕ ಹಣ ಪಾವತಿಸಿದ್ದು, ಅವರಿಗೆ ಯುಪಿಐ ವ್ಯವಸ್ಥೆ ತುಂಬ ಆಕರ್ಷಿಸಿದೆ” ಎಂದು ತಿಳಿಸಿತ್ತು.