ನವದೆಹಲಿ: ಮಹಾರಾಷ್ಟ್ರ ಕೇಡರ್‌ನ ಐಎಎಸ್ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿರುವ ಟ್ರೈನಿ ಅಧಿಕಾರಿ (Trainee IAS Officer) ಪೂಜಾ ಖೇಡ್ಕರ್ (Pooja Khedkar) ಅವರ ಒಂದೊಂದೇ ಕಳ್ಳಾಟಗಳು ಬಯಲಾದ ಬೆನ್ನಲ್ಲೇ ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗವು (UPSC) ಕಠಿಣ ಕ್ರಮ ತೆಗೆದುಕೊಂಡಿದೆ. ನಕಲಿ ದಾಖಲೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ಪೂಜಾ ಖೇಡ್ಕರ್ ಅವರನ್ನು ಟ್ರೈನಿ ಐಎಎಸ್ ಅಧಿಕಾರಿ ಹುದ್ದೆಯಿಂದ ಯುಪಿಎಸ್‌ಸಿ ವಜಾಗೊಳಿಸಿದ್ದು, ಭವಿಷ್ಯದಲ್ಲಿ ಯುಪಿಎಸ್‌ಸಿ ಕೈಗೊಳ್ಳುವ ಯಾವುದೇ ಪರೀಕ್ಷೆಯಿಂದ ಶಾಶ್ವತವಾಗಿ ನಿಷೇಧಿಸಿದೆ.
ಪೂಜಾ ಖೇಡ್ಕರ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ಯುಪಿಎಸ್‌ಸಿಯು ಆಯೋಗ ಒಂದನ್ನು ರಚಿಸಿತ್ತು. ಆಯೋಗದ ವರದಿಯಲ್ಲಿ ಪೂಜಾ ಖೇಡ್ಕರ್ ತಪ್ಪೆಸಗಿದ್ದು, ನಕಲಿ ದಾಖಲೆ ಸೃಷ್ಟಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಯುಪಿಎಸ್‌ಸಿ ಕಠಿಣ ಕ್ರಮ ತೆಗೆದುಕೊಂಡಿದೆ. ಆ ಮೂಲಕ ಪರೀಕ್ಷೆಯಲ್ಲಿ ಅಕ್ರಮ ಎಸಗುವವರಿಗೆ ಕಠಿಣ ಸಂದೇಶ ರವಾನಿಸಿದೆ.
#BreakingNews | UPSC cancels the provisional candidature of Puja Manorama Dilip Khedkar, a provisionally recommended candidate of the Civil Services Examination-2022 (CSE-2022) and permanently debars her from all future exams and selections#PujaKhedkar #UPSC pic.twitter.com/ybBtsHyFxH
— DD News (@DDNewslive) July 31, 2024
ತಮ್ಮ ಖಾಸಗಿ ಕಾರಿಗೆ ‘ಕೆಂಪು ಗೂಟ’ ಅಳವಡಿಸಿದ್ದು ಸೇರಿ ಹಲವು ರೀತಿಯಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಿರುವ ಪೂಜಾ ಖೇಡ್ಕರ್ ಅವರು ನಕಲಿ ಜಾತಿ ಪ್ರಮಾಣಪತ್ರ, ವಿಶೇಷ ಚೇತನ ಎಂದು ಸುಳ್ಳು ದಾಖಲೆ ಸೃಷ್ಟಿ, ವಯಸ್ಸಿನ ಕುರಿತು ಕೂಡ ಫೇಕ್ ಡಾಕ್ಯುಮೆಂಟ್ ತಯಾರಿಸಿದ ಆರೋಪಗಳನ್ನೂ ಎದುರಿಸಿದ್ದರು. ಈಗ ಅವರ ವಿರುದ್ಧದ ಆರೋಪಗಲು ಸಾಬೀತಾದ ಹಿನ್ನೆಲೆಯಲ್ಲಿ ಯುಪಿಎಸ್‌ಸಿಯು ಮಹತ್ವದ ಕ್ರಮ ತೆಗೆದುಕೊಂಡಿದೆ.
ನಿಯಮಿತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಪುಣೆಯಿಂದ (ಅಸಿಸ್ಟಂಟ್ ಕಲೆಕ್ಟರ್) ವಾಶಿಂಗೆ ವರ್ಗಾವಣೆಗೊಂಡಿದ್ದ 34 ವರ್ಷದ ಅಧಿಕಾರಿಯು, ಒಬಿಸಿ ಜಾತಿ ಪ್ರಮಾಣಪತ್ರ ಲಗತ್ತಿಸಿ ಯುಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದರು. ಆದರೆ, ಅವರು ಒಬಿಸಿ ಜಾತಿ ಪ್ರಮಾಣಪತ್ರದ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇನ್ನು ವಿಶೇಷ ಚೇತನ ಎಂಬುದಾಗಿಯೂ ಫೇಕ್ ಡಾಕ್ಯುಮೆಂಟ್ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮೆಡಿಕಲ್ ಟೆಸ್ಟ್ ಪ್ರಕಾರ ಪೂಜಾ ಖೇಡ್ಕರ್ ಅವರು ಫಿಟ್ ಇದ್ದಾರೆ ಎಂದು ಹೇಳಲಾಗುತ್ತಿದೆ. 2007ರಲ್ಲಿ ಅವರು ಎಂಬಿಬಿಎಸ್‌ಗೆ ಅರ್ಜಿ ಸಲ್ಲಿಸಿದಾಗ ದೈಹಿಕವಾಗಿ ಫಿಟ್ ಇರುವುದಾಗಿ ದಾಖಲೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.
ವಯಸ್ಸಿನ ಕುರಿತೂ ಸುಳ್ಳು ದಾಖಲೆ
ಜಾತಿ, ವಿಶೇಷ ಚೇತನ ಪ್ರಮಾಣಪತ್ರದ ಜತೆಗೆ ಪೂಜಾ ಖೇಡ್ಕರ್ ಅವರು ವಯಸ್ಸಿನ ಕುರಿತು ಕೂಡ ಸುಳ್ಳು ದಾಖಲೆ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 2020ರಿಂದ 2023ರ ಅವಧಿಯಲ್ಲಿ ಅವರು ಸಲ್ಲಿಸಿದ ದಾಖಲೆಗಳ ಪ್ರಕಾರ, ಮೂರು ವರ್ಷದಲ್ಲಿ ಅವರ ವಯಸ್ಸು ದಾಖಲೆಯಲ್ಲಿ ಒಂದೇ ವರ್ಷ ಹೆಚ್ಚಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ವಯಸ್ಸಿನ ಮಿತಿ ಇರುವ ಕಾರಣ ಅವರು ವಯಸ್ಸಿನ ಕುರಿತು ಕೂಡ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿತ್ತು. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿತ್ತು.
ಇದನ್ನೂ ಓದಿ: Pooja Khedkar: IAS ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ FIR ದಾಖಲಿಸಿದ UPSC