ನವದೆಹಲಿ: 2022ನೇ ಸಾಲಿನ ಕೇಂದ್ರ ಲೋಕ ಸೇವಾ ಆಯೋಗ(UPSC Results 2022)ದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವು ಪ್ರಕಟವಾಗಿದೆ. ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ದಿಲ್ಲಿಯ ಇಶಿತಾ ಕಿಶೋರ್ (Ishita Kishore) ಟಾಪರ್ ಆಗಿದ್ದು, ಅವರ ಸಾಧನೆ ಸ್ಫೂರ್ತಿದಾಯಕವಾಗಿದೆ. ಅಸಲಿಗೆ, ಇಶಿತಾ ಅವರು ಮೂರನೇ ಪ್ರಯತ್ನದಲ್ಲಿ ಟಾಪರ್ ಆಗಿದ್ದಾರೆ. ಈ ಹಿಂದಿನ ಎರಡು ಬಾರಿ ಪ್ರಯತ್ನದಲ್ಲಿ ಅವರು ಪ್ರಿಲಿಮ್ಸ್ ಕೂಡ ಪಾಸಾಗಿರಲಿಲ್ಲ!
ಅರ್ಥಶಾಸ್ತ್ರ ಪದವೀಧರರಾಗಿರುವ ಇಶಿತಾ ಕಿಶೋರ್ ಅವರು ಈ ಹಿಂದೆ 2017 ಮತ್ತು 2019ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಆದರೆ, ಆಗ ಅವರು ಪ್ರಿಲಿಮ್ಸ್ ಕೂಡ ಪಾಸು ಮಾಡಿರಲಿಲ್ಲ. ಆದರೆ, ಅವರು ಧೈರ್ಯಗೆಡದೇ ಸತತ ಪ್ರಯತ್ನಪಟ್ಟು 2022ರ ಸಾಲಿನಲ್ಲಿ ದೇಶಕ್ಕೆ ಟಾಪರ್ ಆಗಿದ್ದಾರೆ. ಸತತ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಇಶಿತಾ ಸಾಕ್ಷಿಯಾಗಿದ್ದಾರೆ. ಅಲ್ಲದೇ ಲಕ್ಷಾಂತರ ಐಎಎಸ್ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ.
ದಿಲ್ಲಿಯ ಶ್ರೀರಾಮ್ ಕಾಲೇಜ್ ಕಾಮರ್ಸ್‌ನಲ್ಲಿ ಅರ್ಥಶಾಸ್ತ್ರ ಪದವಿ ಪಡೆದುಕೊಂಡಿರುವ ಇಶಿತಾ, Ernst & Young ಕಂಪನಿಯಲ್ಲಿ ಕೆಲವು ಕಾಲ ಕೆಲಸ ಮಾಡಿದ್ದರು. ಕ್ರೀಡಾವ್ಯಕ್ತಿಯಾಗಿರುವ ಇಶಿತಾ, ತಮ್ಮ ಶಾಲಾ ದಿನಗಳಿಂದಲೂ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ. ಮೂರನೇ ಪ್ರಯತ್ನದಲ್ಲಿ ಪೂರ್ವಭಾವಿ, ಮುಖ್ಯ ಹಾಗೂ ಸಂದರ್ಶನಗಳನ್ನು ಕ್ಲಿಯರ್ ಮಾಡಿ, ಟಾಪರ್ ಆಗಿರುವುದು ಹಿಂದೆ ಇಶಿತಾರ ಅವಿರತ ಪ್ರಯತ್ನವಿದೆ.
ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸ್
2022ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ 933 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 345 ಮಂದಿ ಸಾಮಾನ್ಯ ಅಭ್ಯರ್ಥಿಗಳಾಗಿದ್ದರೆ, 99 ಮಂದಿ ಆರ್ಥಿಕವಾಗಿ ದುರ್ಬಲ ವರ್ಗ ಅಭ್ಯರ್ಥಿಗಳಾಗಿದ್ದಾರೆ. 263 ಮಂದಿ ಒಬಿಸಿ, 154 ಮಂದಿ ಎಸ್‌ಸಿ, 72 ಮಂದಿ ಎಸ್‌ಟಿ ಅಭ್ಯರ್ಥಿಗಳಾಗಿದ್ದಾರೆ.
ಇದನ್ನೂ ಓದಿ: UPSC Result 2022 : ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಇಶಿತಾ ಕಿಶೋರ್ ಟಾಪರ್
ಫಲಿತಾಂಶವನ್ನು ಯುಪಿಎಸ್‌ಸಿಯ ವೆಬ್‌ಸೈಟ್ https://www.upsc.gov.in/ ನಲ್ಲಿ ವೀಕ್ಷಿಸಬಹುದಾಗಿದೆ. ಎರಡನೇ ಸ್ಥಾನ ಗರಿಮಾ ಲೋಹಿಯಾ ಎಂಬುವರು ಪಡೆದುಕೊಂಡಿದ್ದರೆ, ಮೂರನೇ ಸ್ಥಾನ ಉಮಾ ಹರತಿ ಎನ್ ಪಾಲಾಗಿದೆ. ಹಾಗೇ, ನಾಲ್ಕನೇ ಸ್ಥಾನ ಸ್ಮೃತಿ ಮಿಶ್ರಾ ಪಾಲಾಗಿದೆ. ಮಯೂರ್ ಹಜಾರಿಯಾ, ಗಹನ್ ನವ್ಯಾ, ವಾಸಿಂ ಅಹ್ದ್ ಭಟ್, ಅನಿರುದ್ಧ ಯಾದವ್, ಕನಿಕಾ ಗೋಯಲ್ ಮತ್ತು ರಾಹುಲ್ ವಾಸ್ತವ್ ಕ್ರಮವಾಗಿ ಐದರಿಂದ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಬಾರಿಯೂ ಮೊದಲ ಮೂರು ಸ್ಥಾನಗಳು ಮಹಿಳಾ ಅಭ್ಯರ್ಥಿಗಳ ಪಾಲಾಗಿದೆ.