ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಪ್ರಪಂಚದಾದ್ಯಂತ ಈಗ ಜಾಗತಿಕ ರಾಜಕಾರಣದಲ್ಲಿ ಸ್ಥಿತ್ಯಂತರಗಳು ನಡೆಯುತ್ತಿವೆ. ಇದರ ಪರಿಣಾಮವಾಗಿ ಎನ್ನುವಂತೆ ಜಾಗತಿಕ ಮಿಲಿಟರಿ ವೆಚ್ಚಗಳೂ ಅಪಾರವಾಗಿ ಹೆಚ್ಚಳ ಕಾಣುತ್ತಿವೆ. ಇತ್ತೀಚೆಗೆ ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಬಿಡುಗಡೆಗೊಳಿಸಿರುವ (US military budget) ವರದಿಯೊಂದರ ಪ್ರಕಾರ, 2022ರಲ್ಲಿ ಒಟ್ಟಾರೆಯಾಗಿ ಜಾಗತಿಕ ಮಿಲಿಟರಿ ವೆಚ್ಚ 3.7%ದಷ್ಟು ಹೆಚ್ಚಳ ಕಂಡಿದ್ದು, ಅಪಾರವಾದ 2.24 ಟ್ರಿಲಿಯನ್ ಡಾಲರ್‌ಗೆ ತಲುಪಿದೆ.
ಈ ವರದಿ ಇದಕ್ಕೆ ಒಟ್ಟು ಮೂರು ಕಾರಣಗಳನ್ನು ಪಟ್ಟಿ ಮಾಡಿದ್ದು, ಮೊದಲನೆಯದು ರಷ್ಯಾ ಉಕ್ರೇನಿನ ಮೇಲೆ ಅಕ್ರಮಣ ನಡೆಸಿದ್ದು. ಇದರ ಪರಿಣಾಮವಾಗಿ ಜಾಗತಿಕ ರಕ್ಷಣಾ ವೆಚ್ಚ ಹೆಚ್ಚಳವಾಗಿದೆ. ಎರಡನೆಯದಾಗಿ, ಅಮೆರಿಕಾದ ಮಿಲಿಟರಿ ವೆಚ್ಚದ ಹೆಚ್ಚಳ ಶೇಕಡಾವಾರು ಅತ್ಯಂತ ಕಡಿಮೆ, 0.7% ಆಗಿದ್ದರೂ, (2021ರಲ್ಲಿ ಅಮೆರಿಕಾದ ರಕ್ಷಣಾ ವೆಚ್ಚ 800.67 ಬಿಲಿಯನ್ ಡಾಲರ್ ಆಗಿದ್ದರೆ, 2022ರಲ್ಲಿ ಅದು 877 ಬಿಲಿಯನ್ ಡಾಲರ್ ಆಗಿದೆ) ಅಮೆರಿಕಾ ಜಾಣತನದಿಂದ ಉಕ್ರೇನ್ ಬಿಕ್ಕಟ್ಟನ್ನು ಬಳಸಿಕೊಂಡು, ನ್ಯಾಟೋದ ಸಹಯೋಗಿ ರಾಷ್ಟ್ರಗಳು ತಮ್ಮ ರಕ್ಷಣಾ ವೆಚ್ಚವನ್ನು ಹೆಚ್ಚಿಸುವಂತೆ ಮಾಡಿತು. ಇದನ್ನು ಹೆಚ್ಚಿಸಲು ಕಳೆದ ಎರಡು ದಶಕಗಳಿಂದ ಅಮೆರಿಕಾ ಕಷ್ಟಪಡುತ್ತಿತ್ತು.
ಮೂರನೆಯದಾಗಿ, ಈ ವರ್ಷ ವಿಶೇಷವಾಗಿ ಯುರೋಪ್ ಮತ್ತು ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ರಕ್ಷಣಾ ವೆಚ್ಚ ಹೆಚ್ಚಳವಾಗಲಿದೆ. ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಹಾಗೂ ದಕ್ಷಿಣ ಕೊರಿಯಾಗಳಿಗೆ ಚೀನಾದಿಂದ ಎದುರಾಗಬಹುದಾದ ಅಪಾಯದ ಸಾಧ್ಯತೆಗಳ ಚಿಂತೆ ಮಿಲಿಟರಿ ವೆಚ್ಚ ಹೆಚ್ಚಿಸುವಂತೆ ಮಾಡಿದೆ. ಇನ್ನು ಯುರೋಪಿನಲ್ಲಂತೂ ಮಿಲಿಟರಿ ಖರ್ಚು ವೆಚ್ಚ ಕಳೆದ ಮೂವತ್ತು ವರ್ಷಗಳಲ್ಲೇ ಅತ್ಯಂತ ವೇಗದ ದರದಲ್ಲಿ ಹೆಚ್ಚಾಗಿದೆ.
2022ರಲ್ಲಿ ಜಗತ್ತಿನಾದ್ಯಂತ ಅಪಾರವಾಗಿ ರಕ್ಷಣಾ ವೆಚ್ಚ ಹೆಚ್ಚಾಗುವುದಕ್ಕೆ ಮುಖ್ಯ ಕಾರಣ ಉಕ್ರೇನ್ ಯುದ್ಧ ಎಂದು ಭಾವಿಸಲಾಗಿದೆ. ಅದರಲ್ಲೂ, ಕೇಂದ್ರ ಮತ್ತು ಪಶ್ಚಿಮ ಯುರೋಪಿನ ರಕ್ಷಣಾ ವೆಚ್ಚ ಅಪಾರ ಪ್ರಮಾಣದಲ್ಲಿ ಹೆಚ್ಚಿದೆ. ರಷ್ಯಾದ ಆಕ್ರಮಣ ಮಿಲಿಟರಿ ವೆಚ್ಚದ ಹೆಚ್ಚಳದ ಸರಣಿ ಪ್ರಕ್ರಿಯೆ ಆರಂಭಗೊಳ್ಳುವಂತೆ ಮಾಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಜಗತ್ತಿನಾದ್ಯಂತ ವಿವಿಧ ಪ್ರದೇಶಗಳ ಸರ್ಕಾರಗಳು ತಮ್ಮ ಮಿಲಿಟರಿ ವೆಚ್ಚವನ್ನು ಹೆಚ್ಚಿಸಲು ಬಹು ವರ್ಷಗಳ ಯೋಜನೆ ರೂಪಿಸಿಕೊಂಡಿವೆ. ಆ ಮೂಲಕ ರಷ್ಯಾದ ಮಹತ್ವಾಕಾಂಕ್ಷೆಗಳನ್ನು ಎದುರಿಸಲು ದೀರ್ಘಕಾಲದಲ್ಲಿ ತಮ್ಮ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶಗಳನ್ನು ಹೊಂದಿವೆ. ಉಕ್ರೇನ್ ದಾಳಿಯ ತಕ್ಷಣದ ಪರಿಣಾಮವಾಗಿ ಮುಂದಿನ ಹಲವು ವರ್ಷಗಳ ಕಾಲ ಮಿಲಿಟರಿ ವೆಚ್ಚ ನಾಟಕೀಯ ಹೆಚ್ಚಳ ಕಾಣಲಿವೆ.
ಉದಾಹರಣೆಗೆ, ಫಿನ್ಲ್ಯಾಂಡ್ ತನ್ನ ಮಿಲಿಟರಿ ವೆಚ್ಚವನ್ನು 36% ಹೆಚ್ಚಿಸಿದ್ದರೆ, ಪೋಲೆಂಡ್ ತನ್ನ ರಕ್ಷಣಾ ವೆಚ್ಚವನ್ನು 11%, ಸ್ವೀಡನ್ 12% ಹೆಚ್ಚಿಸಿವೆ. 2014ರಲ್ಲಿ ರಷ್ಯಾ ಕ್ರಿಮಿಯಾವನ್ನು ಅತಿಕ್ರಮಿಸಿಕೊಂಡ ಬಳಿಕ ಈ ಮೊದಲಿನ ಸೋವಿಯತ್ ಒಕ್ಕೂಟದ ಸದಸ್ಯ ರಾಷ್ಟ್ರಗಳು ತಮ್ಮ ಮಿಲಿಟರಿ ವೆಚ್ಚವನ್ನು ಹೆಚ್ಚಿಸಿದವು. ಉಕ್ರೇನ್ ಯುದ್ಧವಂತೂ ಈ ಭಯಗಳನ್ನು ಇನ್ನಷ್ಟು ಹೆಚ್ಚಿಸಿದೆ. ಇತರ ಹಲವು ಮೇಲುಗೈಗಳೊಂದಿಗೆ, ಉಕ್ರೇನ್ ಯುದ್ಧ ನ್ಯಾಟೋವನ್ನು ಪುನರುತ್ಥಾನಗೊಳಿಸುವ ಅವಕಾಶವನ್ನೂ ಕಲ್ಪಿಸಿದೆ. ಉಕ್ರೇನ್ ಯುದ್ಧ ಯುರೋಪಿಗೆ ಆಘಾತ ಉಂಟುಮಾಡಿದರೆ, ಅಮೆರಿಕಾ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ಪ್ರಯತ್ನದಲ್ಲಿದೆ.
ಮೊದಲನೆಯದಾಗಿ, ಇದರ ಪರಿಣಾಮವಾಗಿ ನ್ಯಾಟೋ ಹೊಸ ಸದಸ್ಯರನ್ನು ಹೊಂದಲು ಸಾಧ್ಯವಾಯಿತು. ಒಂದು ವರ್ಷದ ಹಿಂದೆ, ರಷ್ಯಾದ ಬಾಗಿಲ ಬಳಿ ಇರುವ ಫಿನ್ಲ್ಯಾಂಡ್ ಮತ್ತು ಸ್ವೀಡನ್‌ಗಳನ್ನು ಟ್ರಾನ್ಸ್ ಅಟ್ಲಾಂಟಿಕ್ ಸೆಕ್ಯುರಿಟಿ ಅಲಯನ್ಸ್ ಸದಸ್ಯತ್ವ ಹೊಂದುವುದನ್ನು ಊಹಿಸಲೂ ಸಾಧ್ಯವಿರಲಿಲ್ಲ.
ನ್ಯಾಟೋ ತನ್ನ ಸದಸ್ಯ ರಾಷ್ಟ್ರಗಳ ಮೇಲೆ ರಕ್ಷಣಾ ವೆಚ್ಚವನ್ನು ಹೆಚ್ಚಿಸುವಂತೆ ಒತ್ತಡ ಹೇರುತ್ತಿತ್ತು. 2014ರಲ್ಲಿ ನ್ಯಾಟೋದ ಸದಸ್ಯ ರಾಷ್ಟ್ರಗಳು ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ತಮ್ಮ ವೈಯಕ್ತಿಕ ರಕ್ಷಣಾ ಬಜೆಟ್ ಅನ್ನು ಜಿಡಿಪಿಯ 2%ಗೆ ಹೆಚ್ಚಿಸಲು ಒಪ್ಪಿಕೊಂಡಿದ್ದವು. ಯುಕೆ, ಗ್ರೀಸ್, ಲ್ಯಾಟ್ವಿಯಾ, ಲಿಥುವೇನಿಯಾ, ಪೋಲೆಂಡ್ ಹಾಗೂ ಅಮೆರಿಕಾಗಳು ಮಾತ್ರವೇ ಈ ಗುರಿಯನ್ನು ಸಾಧಿಸಿದ್ದವು. ಕಳೆದ ವರ್ಷ ಜರ್ಮನಿ ತನ್ನ ರಕ್ಷಣಾ ವೆಚ್ಚವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಆದರೆ ಅದು ಜಿಡಿಪಿಯ 2% ದಷ್ಟು ಗುರಿಯನ್ನು 2025ರ ಮೊದಲು ತಲುಪಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ವರ್ಷಗಳಲ್ಲಿ ಕೇಂದ್ರೀಯ ಮತ್ತು ಪಶ್ಚಿಮ ಯುರೋಪಿನ ರಾಷ್ಟ್ರಗಳ ರಕ್ಷಣಾ ವೆಚ್ಚ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ರಷ್ಯಾದ ಸಾಮ್ರಾಜ್ಯಶಾಹಿ ಧೋರಣೆಯ ಕುರಿತು ಈ ಮೊದಲಿನಿಂದಲೂ ಭಯವಿದ್ದರೂ, ಉಕ್ರೇನ್ ಮೇಲಿನ ದಾಳಿಯಂತೂ 2022ರಲ್ಲಿ ಮಿಲಿಟರಿ ಬಜೆಟ್ ಹೆಚ್ಚಿಸುವಂತೆ ಮಾಡಿದೆ. ಸಿಪ್ರಿ ವರದಿಯ ಪ್ರಕಾರ, ಅಮೆರಿಕಾ, ಚೀನಾ ಹಾಗೂ ರಷ್ಯಾಗಳೇ ಜಗತ್ತಿನ ಒಟ್ಟು ಮಿಲಿಟರಿ ವೆಚ್ಚದ 56%ವನ್ನು ಖರ್ಚು ಮಾಡಿವೆ. 2022ರಲ್ಲಿ ರಷ್ಯಾದ ಮಿಲಿಟರಿ ವೆಚ್ಚ 9.2% ಹೆಚ್ಚಳ ಕಂಡು, 86.4 ಬಿಲಿಯನ್ ಡಾಲರ್‌ಗೆ ತಲುಪಿತು. ಇದು ರಷ್ಯಾದ ಜಿಡಿಪಿಯ 4.1% ಆಗಿದೆ. 2021ರಲ್ಲಿ ಇದು ಜಿಡಿಪಿಯ 3.7% ಆಗಿತ್ತು. ಉಕ್ರೇನ್ ಮೇಲಿನ ದಾಳಿಯ ಪರಿಣಾಮ ರಷ್ಯಾದ ವೆಚ್ಚದ ಮೇಲೆ ಅಂದುಕೊಂಡದ್ದಕ್ಕಿಂತಲೂ ಹೆಚ್ಚೇ ಆಗಿತ್ತು. ಅದು ದಿನವೊಂದಕ್ಕೆ ನೂರಾರು ಮಿಲಿಯನ್ ಡಾಲರ್ ತಲುಪಿತ್ತು.
ಜಗತ್ತಿನ ಮಿಲಿಟರಿ ವೆಚ್ಚದ ವಿಚಾರದಲ್ಲಿ ಸಾರ್ವಭೌಮನೇ ಆಗಿರುವ ಅಮೆರಿಕಾ 2022ರಲ್ಲೂ ಅತ್ಯಧಿಕ ಮಿಲಿಟರಿ ವೆಚ್ಚ ಮಾಡಿದ್ದು, 877 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಕಳೆದ ವರ್ಷದ ಜಾಗತಿಕ ಮಿಲಿಟರಿ ವೆಚ್ಚದ 39% ಅಮೆರಿಕಾ ಹೊಂದಿದ್ದು, ಇದು ಜಗತ್ತಿನ ಎರಡನೇ ಅತಿಹೆಚ್ಚು ಮಿಲಿಟರಿ ವೆಚ್ಚ ಮಾಡುವ ಚೀನಾದ ಮಿಲಿಟರಿ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಕಳೆದ ವರ್ಷ ಅಮೆರಿಕಾ ಉಕ್ರೇನಿಗೆ 19.9 ಬಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ಸಹಾಯ ಒದಗಿಸಿದ್ದು, ಇದು ಶೀತಲ ಸಮರದ ಬಳಿಕ ಯಾವುದಾದರೂ ಒಂದು ರಾಷ್ಟ್ರ ಇನ್ನೊಂದಕ್ಕೆ ನೀಡಿದ ಅತಿಹೆಚ್ಚು ಪ್ರಮಾಣದ ಮಿಲಿಟರಿ ಸಹಾಯವಾಗಿದೆ. ಜಪಾನ್ ಮಿಲಿಟರಿ ವೆಚ್ಚದ ವಿಚಾರದಲ್ಲಿ ಏಷ್ಯಾದ ರಾಷ್ಟ್ರಗಳಿಂದ ಭಿನ್ನವಾದ ಹಾದಿಯಲ್ಲಿದೆ. ಜಪಾನ್ ತನ್ನ ಮಿಲಿಟರಿ ವೆಚ್ಚವನ್ನು 5.9% ಹೆಚ್ಚಿಸಿದ್ದು, 46 ಬಿಲಿಯನ್ ಡಾಲರ್ (ಜಿಡಿಪಿಯ 1.1%) ತಲುಪಿದೆ. 2022ರಲ್ಲಿ ನ್ಯಾಷನಲ್ ಸೆಕ್ಯುರಿಟಿ ಸ್ಟ್ರಾಟೆಜಿಯ ಘೋಷಣೆಯ ಪ್ರಕಾರ, ಚೀನಾ, ಉತ್ತರ ಕೊರಿಯಾ ಮತ್ತು ರಷ್ಯಾಗಳಿಂದ ಬರುವ ಅಪಾಯಗಳನ್ನು ಎದುರಿಸುವ ಸಲುವಾಗಿ ಜಪಾನ್ ತನ್ನ ಮಿಲಿಟರಿ ಸಾಮರ್ಥ್ಯವನ್ನು ಮುಂದಿನ ಹತ್ತು ವರ್ಷಗಳಲ್ಲಿ ಹೆಚ್ಚಿಸುವ ಉದ್ದೇಶ ಹೊಂದಿದೆ.
ಜಪಾನಿನ ನೂತನ ಕಾರ್ಯತಂತ್ರ ಮಹತ್ವಾಕಾಂಕ್ಷಿಯಾಗಿದ್ದು, ರಕ್ಷಣೆಗಾಗಿ ವೆಚ್ಚ ಮಾಡುವ ಜಪಾನಿನ ಮನಸ್ಥಿತಿಯನ್ನು ತೋರಿಸುತ್ತದೆ. 1960ರ ದಶಕದ ಬಳಿಕ ಇದು ಜಪಾನಿನ ಅತ್ಯಧಿಕ ಮಿಲಿಟರಿ ವೆಚ್ಚವಾಗಿದೆ. 2022ರಲ್ಲಿ ಭಾರತದ ಮಿಲಿಟರಿ ವೆಚ್ಚ 81.4 ಬಿಲಿಯನ್ ಡಾಲರ್ ಆಗಿದ್ದು, ಜಗತ್ತಿನಲ್ಲಿ ನಾಲ್ಕನೇ ಅತಿಹೆಚ್ಚು ರಕ್ಷಣಾ ಬಜೆಟ್ ಆಗಿತ್ತು. ಇದು 2021ಕ್ಕೆ ಹೋಲಿಸಿದರೆ 6.0% ಹೆಚ್ಚಳವಾಗಿದೆ.
2022ರಲ್ಲಿ ಸೌದಿ ಅರೇಬಿಯಾ ಜಗತ್ತಿನ ಐದನೇ ಅತ್ಯಧಿಕ ಮಿಲಿಟರಿ ವೆಚ್ಚದಾರನಾಗಿದ್ದು, 16% ಹೆಚ್ಚಳ ದಾಖಲಿಸಿ, 75 ಬಿಲಿಯನ್ ಡಾಲರ್‌ಗೆ ತಲುಪಿತ್ತು. ಇದು 2018ರ ಬಳಿಕ ಮೊದಲ ಮಿಲಿಟರಿ ವೆಚ್ಚದಲ್ಲಿನ ಹೆಚ್ಚಳವಾಗಿದೆ. ಒಂದು ವೇಳೆ ಉಕ್ರೇನ್ ಸಮಸ್ಯೆ 2023ರಲ್ಲಿ ಪರಿಹಾರ ಕಂಡರೂ, ಜಾಗತಿಕ ಮಿಲಿಟರಿ ವೆಚ್ಚ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಳ ಕಾಣುವ ಸಾಧ್ಯತೆಗಳಿವೆ.