ನ್ಯೂಯಾರ್ಕ್: ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ (US President Joe Biden) ಅವರ ಕೋವಿಡ್-19 ಪರೀಕ್ಷೆ (Covid 19) ನೆಗೆಟಿವ್ ಬಂದಿದೆ. ಹೀಗಾಗಿ ಸೆಪ್ಟೆಂಬರ್ 9-10ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ (G20 Summit in delhi) ಅವರು ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ದೃಢಪಡಿಸಿದೆ.
ಜಿ20 ಶೃಂಗಸಭೆಗಾಗಿ ಅಮೆರಿಕ ಅಧ್ಯಕ್ಷರು ಗುರುವಾರ ಭಾರತಕ್ಕೆ ತೆರಳಲಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ಅಮೆರಿಕದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮತ್ತು ಭಾನುವಾರ ಅವರು ಜಿ20 ಶೃಂಗದ ಅಧಿಕೃತ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಜೇಕ್ ಸುಲ್ಲಿವಾನ್ ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಭಾರತ ಭೇಟಿಯ ವೇಳೆ ಅಧ್ಯಕ್ಷ ಬೈಡೆನ್ ಅವರು ಕೋವಿಡ್ -19 ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ಮಾರ್ಗಸೂಚಿಗಳನ್ನು ಅನುಸರಿಸಲಿದ್ದಾರೆ. “ಅಧ್ಯಕ್ಷರು ನಿನ್ನೆ ತಮ್ಮ ಪತ್ನಿಯೊಂದಿಗೆ ಇದ್ದರೂ ಅವರು ಯಾವುದೇ ರೋಗಲಕ್ಷಣಗಳನ್ನು ಅನುಭವಿಸುತ್ತಿಲ್ಲ. ಅವರು ಸಿಡಿಸಿ ಮಾರ್ಗದರ್ಶನಗಳನ್ನು ಅನುಸರಿಸುತ್ತಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಹೇಳಿದ್ದಾರೆ. ಯುಎಸ್ ಅಧ್ಯಕ್ಷರು ಮತ್ತು ಇತರ ಎಲ್ಲ ಪ್ರಯಾಣಿಕರು ನವದೆಹಲಿಗೆ ಪ್ರಯಾಣಿಸುವ ಮೊದಲು ಮತ್ತೊಮ್ಮೆ ಪರೀಕ್ಷೆಗೊಳಗಾಗಲಿದ್ದಾರಂತೆ.
ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರಿಗೆ ಸೋಮವಾರ ಕೋವಿಡ್-19 ಪರೀಕ್ಷೆ ಪಾಸಿಟಿವ್ ಬಂದಿತ್ತು. ಇದನ್ನನುಸರಿಸಿ ಜೋ ಬೈಡೆನ್ ಅವರು ಭಾರತಕ್ಕೆ ಬರುವುದು ಅನುಮಾನ ಎನ್ನಲಾಗಿತ್ತು. ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ.
ಬೈಡೆನ್ ಭಾರತಕ್ಕೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. G20ಗೆ ಯುನೈಟೆಡ್ ಸ್ಟೇಟ್ಸ್ ಬದ್ಧತೆ ಹೊಂದಿದೆ. ಈ G20 ಶೃಂಗಸಭೆಯು, ವಿಶ್ವದ ಪ್ರಮುಖ ಆರ್ಥಿಕತೆಗಳು ಸವಾಲಿನಲ್ಲೂ ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ತೋರಿಸುತ್ತದೆ ಎಂದು ನಾವು ಭಾವಿಸುತ್ತೇವೆ. G20 ಶೃಂಗಸಭೆಯಲ್ಲಿ ಅಮೆರಿಕದ ಗಮನವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವು ತಲುಪಿಸುವುದರ ಮೇಲೆ, ಹವಾಮಾನದಿಂದ ತಂತ್ರಜ್ಞಾನದವರೆಗೆ ಪ್ರಮುಖ ಆದ್ಯತೆಗಳ ಮೇಲೆ ಪ್ರಗತಿ ಸಾಧಿಸುವುದರ ಮೇಲೆ ಇರಲಿದೆ ಎಂದು ಜೇಕ್ ಸುಲ್ಲಿವಾನ್ ಹೇಳಿದ್ದಾರೆ.
ಇದನ್ನೂ ಓದಿ: G 20 in India : ಅಮೆರಿಕ ಅಧ್ಯಕ್ಷ ಬೈಡೆನ್‌ಗಾಗಿ ಬುಕ್ ಆಯ್ತು ಐಟಿಸಿ ಮೌರ್ಯ ಹೋಟೆಲ್‌ನ 400 ರೂಮ್!