Site icon Vistara News

Adani Group: ಗೌತಮ್‌ ಅದಾನಿ ವಿರುದ್ಧ ಅಮೆರಿಕ ತನಿಖೆ ಶುರು; ಏನಿದು ಲಂಚದ ಕೇಸ್?

Gautam Adani

US probing Indian billionaire Gautam Adani and his group over potential bribery

ನವದೆಹಲಿ: ಗೌತಮ್‌ ಅದಾನಿ ಒಡೆತನದ ಅದಾನಿ ಗ್ರೂಪ್‌ (Adani Group) ಕುರಿತು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು ಕಳೆದ ವರ್ಷ ಪ್ರಕಟಿಸಿದ ವರದಿಯು (Hindenburg Report) ದೇಶಾದ್ಯಂತ ಸಂಚಲನ ಮೂಡಿಸಿದ ಬೆನ್ನಲ್ಲೇ ಗೌತಮ್‌ ಅದಾನಿ (Gautam Adani) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಾಜೆಕ್ಟ್‌ಗಾಗಿ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕವು ಅದಾನಿ ಗ್ರೂಪ್‌ ಹಾಗೂ ಗೌತಮ್‌ ಅದಾನಿ ವಿರುದ್ಧ ತನಿಖೆ ಆರಂಭಿಸಿದೆ ಎಂದು ತಿಳಿದುಬಂದಿದೆ.

ಗೌತಮ್‌ ಅದಾನಿ ಅವರ ವರ್ತನೆ ಹಾಗೂ ಅದಾನಿ ಗ್ರೂಪ್‌ನಿಂದ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಅಟಾರ್ನಿ ಕಚೇರಿ ಹಾಗೂ ವಾಷಿಂಗ್ಟನ್‌ನಲ್ಲಿರುವ ಜಸ್ಟಿಸ್‌ ಡಿಪಾರ್ಟ್‌ಮೆಂಟ್‌ನ ಫ್ರಾಡ್‌ ಯುನಿಟ್‌ನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಈಗ ಭಾರತದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದಾಗ್ಯೂ, ಅಮೆರಿಕದ ಅಧಿಕಾರಿಗಳು ತನಿಖೆ ಆರಂಭಿಸಿರುವ ಕುರಿತು ಯಾವುದೇ ಮಾಹಿತಿ ಇಲ್ಲ ಎಂಬುದಾಗಿ ಅದಾನಿ ಗ್ರೂಪ್‌ ತಿಳಿಸಿದೆ.

Adani Group

ಏನಿದು ಲಂಚ ಪ್ರಕರಣ?

ಎನರ್ಜಿ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಭಾರತದಲ್ಲಿರುವ ಅಧಿಕಾರಿಗಳಿಗೆ ಅದಾನಿ ಗ್ರೂಪ್‌ ಅಧಿಕಾರಿಗಳು ಹಾಗೂ ಗೌತಮ್‌ ಅದಾನಿ ಅವರು ಲಂಚ ನೀಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ತನಿಖಾ ಸಂಸ್ಥೆಗಳ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಅಜ್ಯೂರ್‌ ಪವರ್‌ ಗ್ಲೋಬಲ್‌ ಲಿಮಿಟೆಡ್‌ ಕಂಪನಿ ವಿರುದ್ಧವೂ ಅಮೆರಿಕ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಹಿಂಡನ್‌ಬರ್ಗ್‌ ಸಂಶೋಧನಾ ವರದಿ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್‌ ವಿರುದ್ಧ ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ತನಿಖೆ ನಡೆಸುತ್ತಿದೆ. ಇದರ ಬೆನ್ನಲ್ಲೇ, ಅಮೆರಿಕದ ಅಧಿಕಾರಿಗಳು ಕೂಡ ಬೇರೊಂದು ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವುದು ಸಂಚಲನ ಮೂಡಿಸಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಅದಾನಿ 12,400 ಕೋಟಿ ರೂ. ಹೂಡಿಕೆ; ಕಾಂಗ್ರೆಸ್‌ ಸಿಎಂ ರೇವಂತ್‌ ರೆಡ್ಡಿ ಒಪ್ಪಂದ

ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ಸಂಚಲನ ಮೂಡಿಸಿದೆ. “ಹೂಡಿಕೆದಾರರಿಗೆ ಅದಾನಿ ಗ್ರೂಪ್‌ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಾದ ಬಳಿಕ ಅದಾನಿ ಗ್ರೂಪ್‌ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು. ಅಲ್ಲದೆ, ಅದಾನಿ ಗ್ರೂಪ್‌ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version