ವಾಷಿಂಗ್ಟನ್: ಭಾರತ ಸೇರಿ ಜಗತ್ತಿನ ಪ್ರಮುಖ ರಾಷ್ಟ್ರಗಳ ಜತೆ ವ್ಯವಹಾರಿಕ ಸಂಬಂಧ ಹೊಂದಿರುವ ಅಮೆರಿಕ ಮಾತ್ರ ರಷ್ಯಾ ವಿರುದ್ಧ ಆಗಾಗ ಹಲ್ಲು ಮಸಿಯುತ್ತದೆ. ರಷ್ಯಾ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಬೇರೆ ದೇಶಗಳ ಮೇಲೆ ಒತ್ತಡ ಹೇರುವಷ್ಟರಮಟ್ಟಿಗೆ ರಷ್ಯಾವನ್ನು ಅಮೆರಿಕ ದ್ವೇಷಿಸುತ್ತದೆ. ಈಗ ರಷ್ಯಾ ವಿಚಾರಕ್ಕೆ ಸಂಬಂಧಿಸಿದಂತೆ, ಭಾರತ, ಚೀನಾ ಸೇರಿ ಹಲವು ದೇಶಗಳ 49 ಕಂಪನಿಗಳ ಜತೆಗಿನ ವ್ಯಾಪಾರಕ್ಕೆ ಅಮೆರಿಕ ನಿರ್ಬಂಧ (US Restricts Trade) ವಿಧಿಸಿದೆ.
ಹೌದು, ರಷ್ಯಾದ ಮಿಲಿಟರಿಗೆ ಹಲವು ರೀತಿಯಲ್ಲಿ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಚೀನಾದ 42, ಭಾರತ, ಫಿನ್‌ಲ್ಯಾಂಡ್, ಜರ್ಮನಿ, ಟರ್ಕಿ, ಯುಎಇ ಹಾಗೂ ಬ್ರಿಟನ್ ಸೇರಿ ಏಳು ದೇಶಗಳ ತಲಾ ಒಂದು ಕಂಪನಿಯನ್ನು ಅಮೆರಿಕದ ವಾಣಿಜ್ಯ ಇಲಾಖೆಯು ನಿರ್ಬಂಧಿಸಿದೆ. ಇಷ್ಟೂ ದೇಶಗಳ ಕಂಪನಿಗಳನ್ನು ಅಮೆರಿಕವು ರಫ್ತು ನಿಯಂತ್ರಣ ಕಂಪನಿಗಳ ಪಟ್ಟಿಗೆ ಸೇರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
US restricts trade with 42 Chinese entities over support for Russia's military:#Chinanews #india #USA pic.twitter.com/OF0PsKzM8A
— IPOHUNTS (@ipohunts) October 7, 2023
ನಿರ್ಬಂಧ ವಿಧಿಸಲು ಇದೇ ಪ್ರಮುಖ ಕಾರಣ
ಅಮೆರಿಕ ನಿರ್ಬಂಧಿಸಿದ 49 ಕಂಪನಿಗಳು ಚೀನಾದ ಮಿಲಿಟರಿ ಹಾಗೂ ರಕ್ಷಣಾ ಕೈಗಾರಿಕಾ ನೆಲೆಗೆ ನೆರವು ನೀಡುತ್ತಿವೆ ಎಂಬುದು ಅಮೆರಿಕದ ಆರೋಪವಾಗಿದೆ. ಅಮೆರಿಕದ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳನ್ನು ಈ ಕಂಪನಿಗಳು ರಷ್ಯಾಗೆ ಪೂರೈಸುತ್ತಿವೆ. ಅದರಲ್ಲೂ, ಅಮೆರಿಕದ ಮೈಕ್ರೋಎಲೆಕ್ಟ್ರಾನಿಕ್ ಉಪಕರಣಗಳನ್ನು ಈ ಕಂಪನಿಗಳು ರಷ್ಯಾಗೆ ಪೂರೈಸುತ್ತಿದ್ದು, ರಷ್ಯಾ ಅವುಗಳನ್ನು ಕ್ಷಿಪಣಿ ಹಾಗೂ ಡ್ರೋನ್‌ಗಳಿಗೆ ಬಳಸಿಕೊಳ್ಳುತ್ತದೆ. ಕ್ಷಿಪಣಿ ಹಾಗೂ ಡ್ರೋನ್‌ಗಳಿಗೆ ಬಳಸಿಕೊಂಡು ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ ನಿರ್ಬಂಧ ವಿಧಿಸಿದೆ.
ಇದನ್ನೂ ಓದಿ: Laptop Import: ಲ್ಯಾಪ್‌ಟಾಪ್ ಆಮದು ನಿರ್ಬಂಧ ಮುಂದೂಡಿದ ಕೇಂದ್ರ; ಈ ಕಂಡಿಷನ್ಸ್ ಅಪ್ಲೈ
“ಅಮೆರಿಕದ ಮೈಕ್ರೋಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ರಷ್ಯಾಗೆ ನೀಡುತ್ತಿರುವುದು ಕಂಡುಬಂದಿದೆ. ಅಮೆರಿಕದ ಉಪಕರಣಗಳನ್ನು ಬಳಸಿಕೊಂಡು ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಹಾಗಾಗಿ ಹಲವು ದೇಶಗಳ ಕಂಪನಿಗಳಿಗೆ ಅಮೆರಿಕ ರಫ್ತು ನಿರ್ಬಂಧ ವಿಧಿಸಿದೆ. ಮುಂದಿನ ದಿನಗಳಲ್ಲೂ ರಷ್ಯಾ ಮಿಲಿಟರಿಗೆ ನೆರವು ನೀಡುವ ಕಂಪನಿಗಳನ್ನು ಗುರುತಿಸಿ, ಅವುಗಳ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ” ಎಂದು ಅಮೆರಿಕ ರಫ್ತು ನಿರ್ದೇಶನಾಲಯದ ಸಹಾಯಕ ಕಾರ್ಯದರ್ಶಿ ಮ್ಯಾಥ್ಯೂ ಆಕ್ಸ್‌ಲಾರ್ಡ್ ತಿಳಿಸಿದ್ದಾರೆ.