Site icon Vistara News

G7 Summit: ಪ್ರಧಾನಿ ಮೋದಿ ಆಟೋಗ್ರಾಫ್ ಕೇಳಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್!

USA President Joe biden asked PM Narendra Modi for autograph

ನವದೆಹಲಿ: ಭಾರೀ ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ (PM Narnedra Modi) ಅವರ ಜನಪ್ರಿಯತೆ ಎಲ್ಲ ವಿಶ್ವ ನಾಯಕರನ್ನು ಮೀರಿಸಿದೆ. ಜಗತ್ತಿನ ಸೂಪರ್ ಪವರ್ ರಾಷ್ಟ್ರ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ (President Joe Biden) ಅವರನ್ನೂ ಜನಪ್ರಿಯತೆಯಲ್ಲಿ ಮೀರಿಸಿದ್ದಾರೆ. ಮೋದಿ, ಬೈಡೆನ್ ಸೇರಿ ಹಲವು ನಾಯಕರು ಜಿ7 ಶೃಂಗ (G7 Summit) ಸಭೆಗಾಗಿ ಜಪಾನ್ ಪ್ರವಾಸದಲ್ಲಿದ್ದಾರೆ. ಸಭೆಯೊಂದರಲ್ಲಿ ಮೋದಿ ಹತ್ತಿರ ಬಂದ ಪ್ರೆಸಿಡೆಂಟ್ ಜೋ ಬೈಡೆನ್ ಅವರು, ನಿಮ್ಮ(ಮೋದಿ) ಆಟೋಗ್ರಾಫ್ ತೆಗೆದುಕೊಳ್ಳಬೇಕು! ಎಂದು ಕೇಳಿದ್ದಾರೆ.

ಜಿ7 ಶೃಂಗಸಭೆಯ ವೇಳೆ ಅಧ್ಯಕ್ಷ ಜೋ ಬಿಡನ್ ಅವರು ಪ್ರಧಾನಿ ಮೋದಿಯವರ ಬಳಿಗೆ ಬಂದು ಭಾರತದ ಪ್ರಧಾನ ಮಂತ್ರಿಯ ಕಾರ್ಯಕ್ರಮಕ್ಕೆ ಹಾಜರಾಗಲು ಪ್ರಮುಖ ನಾಗರಿಕರಿಂದ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ, ಸಿಡ್ನಿಯಲ್ಲಿ ಸಮುದಾಯ ಸ್ವಾಗತಕ್ಕಾಗಿ 20,000 ಸಾಮರ್ಥ್ಯವಿದೆ. ಆದರೆ, ಹಾಜರಾಗಲು ಬರುತ್ತಿರುವ ವಿನಂತಿಗಳನ್ನು ಈ ಸಾಮರ್ಥ್ಯಕ್ಕೆ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಇದೇ ವೇಳೆ, 90 ಸಾವಿರ ಆಸನ ವ್ಯವಸ್ಥೆ ಇರುವ ಭಾರತದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಮ್ಮ ವಿಜಯಯಾತ್ರೆಯಲ್ಲಿ ಹೇಗೆ ಅವರನ್ನು ಜನರು ಸ್ವಾಗತಿಸಿದರು ಎಂಬುದನ್ನು ನೆನಪಿಸಿಕೊಂಡರು. ಇದೇ ವೇಳೆ, ಮಾತನಾಡಿದ ಪ್ರಧಾನಿ ಮೋದಿ ಅವರು, 2024ರಲ್ಲಿ ಕ್ವಾಡ್ ಶೃಂಗಸಭೆಗೆ ಆತಿಥ್ಯ ವಹಿಸಲು ಭಾರತವು ಸಿದ್ಧವಾಗಿದೆ ಎಂದು ತಿಳಿಸಿದರು.

ಪಾಕಿಸ್ತಾನ, ಚೀನಾಗೆ ಪ್ರಧಾನಿ ಮೋದಿ ಚಾಟಿ

ಜಿ-7 ಶೃಂಗಸಭೆಯ‌ (G7 Summit) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್‌ನ ಹಿರೋಶಿಮಾಗೆ ತೆರಳಿದ್ದು, ಸಭೆಯ ಮಧ್ಯೆಯೇ ಹಲವು ಜಾಗತಿಕ ನಾಯಕರನ್ನು ಭೇಟಿಯಾಗಿದ್ದಾರೆ. ಇನ್ನು, ಸಭೆಯ ನಡುವೆಯೇ ಕ್ವಾಡ್‌ ಸದಸ್ಯ ರಾಷ್ಟ್ರಗಳಾದ ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌ ಸಭೆ ನಡೆಸಿದ್ದು, ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಾಪನೆಯ ಪಣತೊಟ್ಟಿವೆ. ಇದರಿಂದ ಇಂಡೋ-ಪೆಸಿಫಿಕ್‌ನ ಚೀನಾ ಹಾಗೂ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್‌ ಹಾಗೂ ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ ಅವರು ಸಭೆ ನಡೆಸಿದ್ದು, ಶಾಂತಿ ಹಾಗೂ ಸ್ಥಿರತೆ ಸ್ಥಾಪನೆಗೆ ಪಣತೊಟ್ಟಿದ್ದಾರೆ. “ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಯಥಾಸ್ಥಿತಿಗೆ ಧಕ್ಕೆಯಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ನಾಲ್ಕೂ ರಾಷ್ಟ್ರಗಳು ನಿರ್ಣಯ ಕೈಗೊಂಡಿದ್ದಾರೆ. ಇದರಿಂದ, ಗಡಿ ಭಯೋತ್ಪಾದನೆಗೆ ಪ್ರಚೋದನೆ ನೀಡುವ ಪಾಕಿಸ್ತಾನ ಹಾಗೂ ಗಡಿಯಲ್ಲಿ ಉಪಟಳ ಮಾಡುವ ಚೀನಾಗೆ ಪರೋಕ್ಷವಾಗಿ ಸಂದೇಶ ರವಾನಿಸಿದಂತಾಗಿದೆ.

ಸಭೆಯಲ್ಲಿ ಭಯೋತ್ಪಾದನೆಯ ಪ್ರಸ್ತಾಪವೂ ಆಯಿತು. “ಹಿಂಸಾಚಾರಕ್ಕೆ ಕಾರಣವಾಗುವ ಯಾವುದೇ ತೀವ್ರವಾದವನ್ನು ನಾವು ಸಹಿಸುವುದಿಲ್ಲ” ಎಂದು ಸಭೆಯ ಬಳಿಕದ ಜಂಟಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲೂ, 26/11ರ ಮುಂಬೈ ಭಯೋತ್ಪಾದನೆ ದಾಳಿ ಹಾಗೂ ಪಠಾಣ್‌ಕೋಟ್‌ನಲ್ಲಿರುವ ವಾಯುನೆಲೆ ಮೇಲೆ ನಡೆದ ದಾಳಿಯನ್ನು ಕೂಡ ಉಲ್ಲೇಖಿಸಲಾಗಿದೆ.

ಕ್ವಾಡ್‌ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, “ಜಾಗತಿಕ ಸುರಕ್ಷತೆ, ಜನರ ಕಲ್ಯಾಣ, ಶಾಂತಿ ಹಾಗೂ ಸಮೃದ್ಧಿಯ ಸ್ಥಾಪನೆಗೆ ಕ್ವಾಡ್‌ ರಾಷ್ಟ್ರಗಳು ಶ್ರಮಿಸುತ್ತವೆ” ಎಂದು ಹೇಳಿದರು. ಇದೇ ವೇಳೆ, 2024ರಲ್ಲಿ ಕ್ವಾಡ್‌ ಶೃಂಗಸಭೆಯನ್ನು ಭಾರತದಲ್ಲಿಯೇ ಆಯೋಜಿಸಲು ತೀರ್ಮಾನಿಸಲಾಯಿತು. “2024ರ ಕ್ವಾಡ್‌ ಶೃಂಗಸಭೆಯನ್ನು ಭಾರತವೇ ಆಯೋಜಿಸುವುದು ಸಂತಸ ತಂದಿದೆ” ಎಂದು ಮೋದಿ ತಿಳಿಸಿದರು.

ಇದನ್ನೂ ಓದಿ: G7 Summit: ಜಪಾನ್‌ನಲ್ಲಿ ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಜತೆ ಮೋದಿ ಮಾತುಕತೆ, ಶಾಂತಿ ಸ್ಥಾಪನೆ ಬಗ್ಗೆ ಪ್ರಧಾನಿ ಹೇಳಿದ್ದೇನು?

ನರೇಂದ್ರ ಮೋದಿ ಅವರು ಶುಕ್ರವಾರವೇ (May 19) ಜಪಾನ್‌ಗೆ ತೆರಳಿದ್ದಾರೆ. ಇದೇ ವೇಳೆ ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದ ಅವರು, ಪಾಕಿಸ್ತಾನದ ವಿಷಯ ಪ್ರಸ್ತಾಪಿಸಿದ್ದರು. “ನೆರೆ ರಾಷ್ಟ್ರವಾದ ಪಾಕಿಸ್ತಾನದ ಜತೆ ನಾವು ಉತ್ತಮ ಸಂಬಂಧ ಹೊಂದಲು ಬಯಸುತ್ತೇವೆ. ಆದರೆ, ಪಾಕಿಸ್ತಾನವು ಉಗ್ರವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಮುಂದಾಗುವುದಿಲ್ಲ. ಭಯೋತ್ಪಾದನೆ ಮುಕ್ತ ವಾತಾವರಣ ನಿರ್ಮಿಸಲು ಪಾಕಿಸ್ತಾನವು ಕನಿಷ್ಠ ಪ್ರಯತ್ನವನ್ನೂ ಮಾಡುವುದಿಲ್ಲ. ಇದರಿಂದಾಗಿ ಎರಡೂ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿಲ್ಲ” ಎಂದು ಹೇಳಿದ್ದರು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version