Site icon Vistara News

Kunwar Sarvesh: ಮತದಾನ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ಹೃದಯಾಘಾತಕ್ಕೆ ಬಲಿ!

Kunwar Sarvesh Singh

Uttar Pradesh: BJP Lok Sabha candidate from Moradabad Kunwar Sarvesh Singh dies Of Heart Attack

ನವದೆಹಲಿ: ಉತ್ತರ ಪ್ರದೇಶ, ತಮಿಳುನಾಡು ಸೇರಿ ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶುಕ್ರವಾರ (ಏಪ್ರಿಲ್‌ 19) ಮತದಾನ ನಡೆದಿದೆ. ಮತದಾನ ನಡೆದ ಕ್ಷೇತ್ರಗಳಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ (Moradabad) ಕೂಡ ಸೇರಿದೆ. ಆದರೆ, ಮತದಾನ ನಡೆದ ಮರುದಿನವೇ ಅಂದರೆ, ಶನಿವಾರ (ಏಪ್ರಿಲ್‌ 20) ಮೊರಾದಾಬಾದ್‌ ಬಿಜೆಪಿ ಅಭ್ಯರ್ಥಿ (BJP Candidate) ಕುನ್ವರ್‌ ಸರ್ವೇಶ್‌ ಸಿಂಗ್‌ (71) (Kunwar Sarvesh Singh) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

“ಕುನ್ವರ್‌ ಸರ್ವೇಶ್‌ ಸಿಂಗ್‌ ಅವರಿಗೆ ಹೃದಯಾಘಾತ ಉಂಟಾಯಿತು. ಕೂಡಲೇ ಅವರನ್ನು ದೆಹಲಿಯಲ್ಲಿರುವ ಏಮ್ಸ್‌ಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಕುನ್ವರ್‌ ಸರ್ವೇಶ್‌ ಸಿಂಗ್‌ ಅವರು ಮೃತಪಟ್ಟಿದ್ದಾರೆ” ಎಂಬುದಾಗಿ ಮೊರಾದಾಬಾದ್‌ ನಗರ ಶಾಸಕ ರಿತೇಶ್‌ ಗುಪ್ತಾ ಅವರು ತಿಳಿಸಿದ್ದಾರೆ. ಕುನ್ವರ್‌ ಸರ್ವೇಶ್‌ ಸಿಂಗ್‌ ಅವರು ಕೆಲ ದಿನಗಳಿಂದ ಪ್ರಚಾರದಲ್ಲಿ ತೊಡಗಿರಲಿಲ್ಲ. ಆದರೂ ಅವರು ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದರು. ಆದರೆ, ಚುನಾವಣೆ ಫಲಿತಾಂಶ ಬರುವ ಮೊದಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುನ್ವರ್‌ ಸರ್ವೇಶ್‌ ಸಿಂಗ್‌ ಅವರ ನಿಧನಕ್ಕೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.

ಕುನ್ವರ್‌ ಸರ್ವೇಶ್‌ ಸಿಂಗ್‌ ಅವರ ನಿಧನಕ್ಕೆ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್‌ ಚೌಧರಿ ಸಂತಾಪ ಸೂಚಿಸಿದ್ದಾರೆ. “ಮಾಜಿ ಸಂಸದ ಕುನ್ವರ್‌ ಸರ್ವೇಶ್‌ ಸಿಂಗ್‌ ಅವರು ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು, ನಾಯಕರಿಗೆ ಸ್ಫೂರ್ತಿಯಾಗಿದ್ದರು. ಅವರು ಪರಿಶ್ರಮದಲ್ಲಿ ಹೆಚ್ಚು ನಂಬಿಕೆ ಹೊಂದಿದ್ದರು. ಇಂತಹ ಮೇರು ನಾಯಕನ ನಿಧನದಿಂದ ಮೊರಾದಾಬಾದ್‌ ಮಾತ್ರವಲ್ಲ, ಉತ್ತರ ಪ್ರದೇಶ ಬಿಜೆಪಿ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಮೊರಾದಾಬಾದ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುನ್ವರ್‌ ಸರ್ವೇಶ್‌ ಸಿಂಗ್‌ ಗೆಲುವು ಸಾಧಿಸಿದ್ದರು. ಆದರೆ, 2019ರಲ್ಲಿ ಸಮಾಜವಾದಿ ಪಕ್ಷದ ಡಾ.ಟಿ.ಎಸ್. ಹಸನ್‌ ಅವರ ವಿರುದ್ಧ ಕುನ್ವರ್‌ ಸರ್ವೇಶ್‌ ಸಿಂಗ್‌ ಸೋಲುಂಡಿದ್ದರು.

ಕೆಲವೆಡೆ ಇವಿಎಂ ದೋಷ

ಮೊದಲ ಹಂತದ ಮತದಾನದ ವೇಳೆ ತಮಿಳುನಾಡು, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಅಸ್ಸಾಂನ ಕೆಲವು ಬೂತ್ ಗಳಲ್ಲಿ ಸಣ್ಣ ಪ್ರಮಾಣದ ಇವಿಎಂ ದೋಷಗಳು ವರದಿಯಾಗಿವೆ. ಪಶ್ಚಿಮ ಬಂಗಾಳದಲ್ಲಿ ಸಂಜೆ 5 ಗಂಟೆಯವರೆಗೆ ಶೇಕಡಾ 77.57, ಅಸ್ಸಾಂನಲ್ಲಿ ಶೇಕಡಾ 70.77 ಮತ್ತು ಮೇಘಾಲಯದಲ್ಲಿ ಶೇಕಡಾ 69.91 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಕ್ಷೇತ್ರದಲ್ಲಿ ಹಿಂಸಾಚಾರ ನಡೆದಿದೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆಸಿದ್ದು, ಮತದಾನ ಹಿಂಸಾಚಾರ, ಮತದಾರರ ಬೆದರಿಕೆ ಮತ್ತು ಚುನಾವಣಾ ಏಜೆಂಟರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಕ್ರಮವಾಗಿ 80 ಮತ್ತು 39 ದೂರುಗಳನ್ನು ದಾಖಲಾಗಿವೆ. ಸಂಘರ್ಷ ಪೀಡಿತ ಮಣಿಪುರದಲ್ಲಿ ಸಂಜೆ 5 ಗಂಟೆಯವರೆಗೆ ಶೇ.67.46ರಷ್ಟು ಮತದಾನವಾಗಿದೆ.

ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಥೊಂಗ್ಜು ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ. ಛತ್ತೀಸ್​ಗಢದ ನಕ್ಸಲ್ ಪೀಡಿತ ಬಸ್ತಾರ್ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 63.41 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಅಲ್ಲಿ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸಿಆರ್​ಪಿಎಫ್​ ಜವಾನ ಗಾಯಗೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಐಇಡಿ ಸ್ಫೋಟ ಸಂಭವಿಸಿದೆ.

ಇದನ್ನೂ ಓದಿ: ಚಾಯ್‌ವಾಲಾ ಮೋದಿ ಐಐಟಿ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದ ಕಾಂಗ್ರೆಸ್ ನಾಯಕ; ಭುಗಿಲೆದ್ದ ವಿವಾದ

Exit mobile version