ಲಖನೌ: ಉತ್ತರ ಪ್ರದೇಶದಲ್ಲಿ ಈ ವರ್ಷ ಈದ್ ಉಲ್ ಫಿತ್ರ್, ಅಕ್ಷಯ ತೃತೀಯ ಹಾಗೂ ಪರಶುರಾಮ ಜಯಂತಿಯಂದು ಒಂದೂ ಗಲಾಟೆ, ಗಲಭೆ ನಡೆಯದಂತೆ ಸಂಪೂರ್ಣ ಶಾಂತಿಯುತವಾಗಿ ನೆರವೇರಿದೆ. ಅದಕ್ಕೂ ಮುಖ್ಯವಾಗಿ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದವರು ಈದ್ ಉಲ್ ಫಿತ್ರ್ ದಿನದಂದು ರಸ್ತೆಯಲ್ಲಿ ನಮಾಜ್ ಮಾಡಿಲ್ಲ, ಈದಕ್ಕೆ ಸಿಎಂ ಯೋಗಿ ಆದಿತ್ಯನಾಥ ಅವರಿಂದ ಮೆಚ್ಚುಗೆಯನ್ನೂ ಪಡೆದಿದ್ದಾರೆ.
ಹಿಂದು ಮುಸ್ಲಿಂ ಏಕತೆಗೆ ಗಂಗಾ ಜಮುನಾ ತಹಜೀಬ್ ಎಂಬ ವಾಕ್ಯವನ್ನು ಬಳಸಲಾಗುತ್ತದೆ. ಆದರೆ ಆಗಿಂದಾಗ್ಗೆ ದೇಶದಲ್ಲಿ ಎರಡೂ ಸಮುದಾಯಗಳ ನಡುವೆ ಗದ್ದಲ, ಗಲಾಟೆ ನಡೆಯುತ್ತಲೇ ಇರುತ್ತದೆ. ಕರ್ನಾಟಕದಲ್ಲೂ ಇತ್ತೀಚೆಗಷ್ಟೆ ಹಿಜಾಬ್ ವಿವಾದ ಆರಂಭವಾಗಿ ಅಂತಾರಾಷ್ಟ್ರೀಯ ಮಟ್ಟದವರೆಗೂ ಸುದ್ದಿಯಾಯಿತು. ನಂತರ ಆಜಾನ್, ಹಲಾಲ್, ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರನ್ನು ನಿಷೇಧಿಸುವವರೆಗೆ ವಿವಾದಗಳು ನಡೆದವು. ಕರ್ನಾಟಕದಲ್ಲಿ ವಿವಾದ ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲಿ ಮಹಾರಾಷ್ಟ್ರದಲ್ಲಿ ಆಜಾನ್ ವಿವಾದ ಉತ್ತುಂಗದಲ್ಲಿದೆ. ಮಹಾರಾಷ್ಟ್ರ ನವನಿರ್ಮಾಣ ಪಕ್ಷದ (ಎಂಎನ್‌ಎಸ್) ರಾಜ್ ಠಾಕ್ರೆ, ಶಿವಸೇನೆ-ಕಾಂಗ್ರೆಸ್ ಮತ್ರಿಯ ಮಹಾರಾಷ್ಟ್ರ ವಿಕಾಸ್ ಅಘಾಡಿ(ಎಂವಿಎ) ಸರ್ಕಾರಕ್ಕೇ ಗಡುವು ನೀಡುತ್ತಿದ್ದಾರೆ. ಆದರೆ, ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ.
ಇದನ್ನೂ ಓದಿ | ಆಜಾನ್ ಸ್ಥಗಿತಗೊಳಿಸದಿದ್ದರೆ ಹನುಮಾನ್ ಚಾಲೀಸಾ ಪಠಣ: ವಿಶ್ವ ಹಿಂದು ಪರಿಷತ್ ಎಚ್ಚರಿಕೆ
ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿರುವಂತೆ, ಕಳೆದ ವರ್ಷ ಸುಮಾರು ೫೦ ಸಾವಿರದಿಂದ ಒಂದು ಲಕ್ಷದಷ್ಟು ಜನರು ರಾಜ್ಯದ ವಿವಿಧೆಡೆ ರಸ್ತೆಯಲ್ಲಿ ನಮಾಜ್ ಮಾಡಿದ್ದರು. ಈ ರೀತಿ ರಸ್ತೆಯಲ್ಲಿ ನಮಾಜ್ ಮಾಡುವುದಕ್ಕೆ ಅನೇಕರಿಂದ ಆಕ್ಷೇಪಣೆಗಳು ಕೇಳಿಬಂದಿದ್ದವು. ಸಾರ್ವಜನಿಕ ಕಾನೂನು ಸುವ್ಯವಸ್ಥೆಗೂ ಇದರಿಂದ ಧಕ್ಕೆಯಾಗುತ್ತದೆ ಎಂದು ತಿಳಿಸಿದ್ದರು.
ಈ ಮಾತಿಗೆ ಗೌರವ ನೀಡಿದ ಮುಸ್ಲಿಂ ಸಮುದಾಯ, ಹೆಚ್ಚಿನ ಪ್ರಮಾಣದಲ್ಲಿ ಈದ್ಗಾ ಮೈದಾನಗಳಲ್ಲೆ ಪ್ರಾರ್ಥನೆ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರಶಾಂತ್ ಕುಮಾರ್, ಈ ವರ್ಷ ಈದ್ ಉಲ್ ಫಿತ್ರ್ ದಿನದಂದು ಉತ್ತರ ಪ್ರದೇಶದ ಸುಮಾರು 32ಸಾವಿರ ಸ್ಥಳಗಳಲ್ಲಿ ನಮಾಜ್ ಮಾಡಲಾಗಿದೆ. ಎಲ್ಲ ಕಡೆಯೂ ಶಾಂತಯುತವಾಗಿ ಅಷ್ಟೆ ಅಲ್ಲದೆ ಸಂಪೂರ್ಣ ಸಾಂತ್ರದಾಯಿಕ ಹಾಗೂ ಸಂತೋಷ ಭರಿತವಾಗಿ ನೆರವೇರಿದೆ ಎಂದಿದ್ದಾರೆ.
ಕೆಲವು ಮಸೀದಿಗಳಲ್ಲಿ ಸ್ಥಳಾವಕಾಶಕ್ಕೆ ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಉದಾಹರಣೆಗೆ, ಲೋನಿ ಹಾಗೂ ಹಾಪುರದ ಮಸೀದಿಗಳಲ್ಲಿ ಸ್ಥಳಾವಕಾಶ ಕಡಿಮೆ ಇತ್ತು. ಹಾಗಾಗಿ ಮೂರ್ನಾಲ್ಕು ಪಾಳಿಗಳನ್ನು ಮಾಡಿಕೊಂಡು, ಒಂದೊಂದು ಸಮಯಕ್ಕೆ ಒಂದೊಂದು ಗುಂಪು ಆಗಮಿಸಿ ನಮಾಜ್ ಮಾಡಲು ಯೋಜನೆ ರೂಪಿಸಿಕೊಂಡು ಅನುಷ್ಠಾನ ಮಾಡಲಾಯಿತು. ಶಾಂತಯುತವಾಗಿ ಉತ್ಸವ ಆಚರಣೆ ಮಾಡಿದ ಎಲ್ಲ ಸಮುದಾಯಗಳಿಗೂ ಎಡಿಜಿಪಿ ಧನ್ಯವಾದ ಸಲ್ಲಿಸಿದ್ದಾರೆ.
ಎಡಿಜಿಪಿ ಧನ್ಯವಾದಕ್ಕೆ ಸಿಎಂ ಯೋಗಿ ಆದಿತ್ಯನಾಥ್ ದನಿಗೂಡಿಸಿದ್ದಾರೆ. ಎಲ್ಲ ನಂಬಿಕೆಗಳ ಮೇಲೆಯೂ ಗೌರವವಿದ್ದರೆ ಆರೋಗ್ಯಕರ ಹಾಗೂ ಶಾಂತ ಸಮಾಜವಿರುತ್ತದೆ. ಇದರ ಜತೆಗೆ ಕಾನೂನು ವಿಚಾರವೂ ಮುಖ್ಯ. ಈ ಅಂಶಗಳೇ ರಾಜ್ಯದ ಅಭಿವೃದ್ಧಿ ಹಾಗೂ ಆತ್ಮನಿರ್ಭರತೆಗೆ ಮೂಲ ಆಧಾರ. ಈ ಬಾರಿ ಮೊದಲ ಬಾರಿಗೆ ರಸ್ತೆಯಲ್ಲಿ ನಮಾಜ್ ಮಾಡದೇ ಇರುವುದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಈದ್ ಉಲ್ ಫಿತ್ರ್ ದಿನದಂದು ಉತ್ತರ ಪ್ರದೇಶ ಸರ್ಕಾರದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಸಹ ನಮಾಜ್‌ನಲ್ಲಿ ಭಾಗವಹಿಸಿದ್ದರು. ಜತೆಗೆ ಮಾಜಿ ಸಿಎಂ ಅಖಿಲೇಶ್ ಯಾದವ್, ಮಾಜಿ ಡಿಸಿಎಂ ದಿನೇಶ್ ಶರ್ಮಾ, ರಾಜ್ಯದ ಸಚಿವ ದಾನಿಶ್ ಆಜಾದ್ ಅನ್ಸಾರಿ, ಲಖನೌ ಕೇಂದ್ರ ಹಾಗೂ ಪಶ್ಚಿಮ ಶಾಸಕರುಗಳಾದ ರವಿದಾಸ್ ಮೆಹರೋಟಾ, ಅರ್ಮಾನ್ ಖಾನ್, ಲಖನೌ ಕ್ರೈಸ್ಟ್ ಚರ್ಚ್ ಕಾಲೇಜು ಪ್ರಾಂಶುಪಾಲ ಆರ್.ಕೆ. ಛತ್ರಿ ಮತ್ತಿತರರು ಭಾಗವಹಿಸಿದ್ದರು.