ಲಕ್ನೋ: ಉತ್ತರಪ್ರದೇಶ(Uttar Pradesh Politics)ದಲ್ಲಿ ಈ ಬಾರಿ ಚುನಾವಣೆ(Lok Sabha Election 2024)ಯಲ್ಲಿ ಬಿಜೆಪಿಯ ಸಂಖ್ಯಾಬಲ 33ಕ್ಕೆ ಕುಸಿದಿರುವುದು ಪಕ್ಷವನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು. ಇದರ ಬೆನ್ನಲ್ಲೇ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಉತ್ತರ ಪ್ರದೇಶದ ಬಿಜೆಪಿ ಘಟಕವು ತನ್ನ ಲೋಕಸಭಾ ಚುನಾವಣೆಯ ಸೋಲಿಗೆ ಕಾರಣಗಳನ್ನು ವಿವರಿಸುವ ವಿಸ್ತೃತ ವರದಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಿದೆ. ಪೇಪರ್ ಸೋರಿಕೆ, ಸರ್ಕಾರಿ ಉದ್ಯೋಗಗಳಿಗೆ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವುದು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಅತೃಪ್ತಿ ಮತ್ತು ಅಸಮಾಧಾನಕ್ಕೆ ಕಾರಣವಾದ ರಾಜ್ಯ ಆಡಳಿತದ ಆಪಾದಿತ ಉನ್ನತ ಕೈಗಾರಿಕೆಗಳಂತಹ ಕಳವಳಗಳನ್ನು ವರದಿಯು ಉಲ್ಲೇಖಿಸಿದೆ.
ತನ್ನ ಭದ್ರಕೋಟೆ ಅಯೋಧ್ಯೆ ಮತ್ತು ಅಮೇಥಿಯಂತಹ ಪ್ರಮುಖ ಕ್ಷೇತ್ರಗಳನ್ನೂ ಈ ಬಾರಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಬಿಜೆಪಿಗೆ ಬಹುದೊಡ್ಡ ಮಟ್ಟದಲ್ಲಿ ಮುಜುಗರವನ್ನುಂಟುಮಾಡಿತ್ತು. ಹೀಗಾಗಿ ಇಂತಹ ಹೀನಾಯ ಸೋಲಿಗೆ ಪ್ರಮುಖ ಕಾರಣ ಏನೆಂಬುದರ ಬಗ್ಗೆ ಬಗ್ಗೆ ಬಿಜೆಪಿ ಅಧ್ಯಯನಕ್ಕಿಳಿದಿದೆ. ಬಿಜೆಪಿ ರಾಜ್ಯ ಘಟಕದ ಅವಲೋಕನದ ಪ್ರಕಾರ ಈ ಬಾರಿಯ ಸೋಲಿಗೆ ಆರು ಪ್ರಮುಖ ಕಾರಣಗಳು ಕಂಡು ಬಂದಿವೆ.
ಕಾರ್ಯಕರ್ತರ ಕಡೆಗಣನೆ
ಯೋಗಿ ಅಧಿಕಾರಕ್ಕೆ ಬಂದ ನಂತರ ಶಾಸಕರಿಗೆ ಅಧಿಕಾರವಿಲ್ಲ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಅಧಿಕಾರಿಗಳು ಅಧಿಕಾರ ಮಾಡುತ್ತಾರೆ ಎಂಬ ನೀತಿ ಬಲವಾಗಿ ಜಾರಿಗೆ ಬಂದಿತ್ತು. ಈ ನೀತಿಯ ಬಗ್ಗೆ ಕಾರ್ಯಕರ್ತರಿಗೆ ಬಹಳ ಅಸಮಾಧಾನ ಇತ್ತು. ವರ್ಷಗಳಿಂದ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಒಟ್ಟಾಗಿ ಕೆಲಸ ಮಾಡಿದ್ದು, ಸಮಾಜದಲ್ಲಿ ಬಲವಾದ ಸಂಪರ್ಕವನ್ನು ನಿರ್ಮಿಸಿವೆ. ಪಕ್ಷದ ಕಾರ್ಯಕರ್ತರನ್ನು ಅಧಿಕಾರಿಗಳು ಬದಲಿಸಲು ಸಾಧ್ಯವಿಲ್ಲ,” ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದರು. ಆರ್‌ಎಸ್‌ಎಸ್ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಮತ್ತು ತಳಮಟ್ಟದಿಂದ ಪಕ್ಷದ ನೆಲೆಯನ್ನು ನಿರ್ಮಿಸಿದ ಕೀರ್ತಿಗೆ ಪಾತ್ರವಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ 15 ಪೇಪರ್ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಪ್ರತಿಪಕ್ಷಗಳು, ಬಿಜೆಪಿಯು ಮೀಸಲಾತಿಯನ್ನು ಸ್ಥಗಿತಗೊಳಿಸಲು ಬಯಸಿದೆ. ಸರ್ಕಾರಿ ಉದ್ಯೋಗಗಳನ್ನು ಗುತ್ತಿಗೆ ಕಾರ್ಮಿಕರಿಂದ ತುಂಬಿಸಲಾಗುತ್ತಿದೆ ಎಂದು ಜನರ ತಲೆಗೆ ತುಂಬಲು ಶುರು ಮಾಡಿದ್ದವು. ಇದು ಚುನಾವಣೆ ಮೇಲೆ ಬಹಳಷ್ಟು ಪರಿಣಾಮ ಬೀರಿತ್ತು.
ಬಿಎಸ್‌ಪಿ ಕಡೆಗೆ ಮತದಾರರ ಒಲವು
ಮಾಯಾವತಿಯವರ ಬಿಎಸ್‌ಪಿ ಪಕ್ಷ ದಲಿತ, ಕಿರ್ಮಿ ಮತ್ತು ಮೌರ್ಯ ಸಮುದಾಯಗಳ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾದ ಹಿನ್ನೆಲೆ ಮತ ವಿಭಜನೆ ಕೂಡ ಬಿಜೆಪಿ ಸೋಲಿಗೆ ಕಾರಣವಾಯಿತು. ಇದು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ಗೆ ಲಾಭವಾಗಿ ಪರಿಣಮಿಸಿತು.
ಮೇಲ್ವರ್ಗ v/s ಕೆಳವರ್ಗಗಳ ಸಂಘರ್ಷ
ರಾಜ್ಯ ಘಟಕವು ತನ್ನ ಭಿನ್ನಾಭಿಪ್ರಾಯಗಳನ್ನು ತ್ವರಿತವಾಗಿ ಪರಿಹರಿಸಬೇಕು ಮತ್ತು ಮೇಲ್ಜಾತಿ ಹಾಗೂ ಹಿಂದುಳಿದ ಜಾತಿಗಳು ನಡುವಿನ ಭಿನ್ನಾಭಿಪ್ರಾಯ ಸಂಘರ್ಷವಾಗಿ ಬೆಳೆಯುವುನ್ನು ತಡೆಯಲು ತಳಮಟ್ಟದ ಕೆಲಸವನ್ನು ಪ್ರಾರಂಭಿಸಬೇಕು ಎಂದು ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಾಯಕರು ಯುಪಿಯ ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಕಾರ್ಯಕರ್ತರಲ್ಲಿ ನೈತಿಕತೆಯನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಬೇಕು ಎಂದು ಪಕ್ಷದ ಇನ್ನೊಬ್ಬ ಮುಖಂಡ ಹೇಳಿದ್ದಾರೆ.
ಬಿಜೆಪಿ ಕೈ ಹಿಡಿಯದ ಹಿಂದುಳಿದ ವರ್ಗ
ಕುರ್ಮಿ ಮತ್ತು ಮೌರ್ಯ ಜಾತಿಗಳು ಈ ಬಾರಿ ಬಿಜೆಪಿಯಿಂದ ದೂರ ಸರಿದಿದ್ದು, ದಲಿತ ಮತಗಳಲ್ಲಿ ಮೂರನೇ ಒಂದು ಭಾಗದಷ್ಟು ಮಾತ್ರ ಪಕ್ಷವು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ಸೂಚಿಸುತ್ತದೆ. ಒಟ್ಟಾರೆ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಮೂಲಕ ಯುಪಿಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಸುಧಾರಿಸಿಕೊಂಡರೆ, ಬಿಎಸ್‌ಪಿಯ ಮತ ಹಂಚಿಕೆಯು ಶೇಕಡಾ 10 ರಷ್ಟು ಕಡಿಮೆಯಾಗಿದೆ.
ಪ್ರತಿಪಕ್ಷಗಳ ಅಪಪ್ರಚಾರ
ಆರನೇ ಮತ್ತು ಏಳನೇ ಹಂತಗಳ ಚುನಾವಣೆ ಹೊತ್ತಿಗೆ, ಕಾರ್ಯಕರ್ತರಲ್ಲಿ ಆಯಾಸ ಪ್ರಾರಂಭವಾಯಿತು. ಮೀಸಲಾತಿ ನೀತಿಗಳ ವಿರುದ್ಧ ಪಕ್ಷದ ನಾಯಕರ ಹೇಳಿಕೆಗಳು ಪಕ್ಷದ ಕ್ಷೀಣಿಸುತ್ತಿರುವ ಬೆಂಬಲವನ್ನು ಇನ್ನಷ್ಟು ಉಲ್ಬಣಗೊಳಿಸಿತು. “ಹಳೆಯ ಪಿಂಚಣಿ ಯೋಜನೆಯಂತಹ ಸಮಸ್ಯೆಗಳು ಹಿರಿಯ ನಾಗರಿಕರ ಮೇಲೆ ಪರಿಣಾಮ ಬೀರಿದರೆ, ಅಗ್ನಿವೀರ್ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಸಮಸ್ಯೆಗಳು ಯುವಕರನ್ನು ಬಿಜೆಪಿಯಿಂದ ಹಿಂದೆ ಸರಿಯುವಂತೆ ಮಾಡಿತ್ತು. ಇದೇ ವಿಚಾರವನ್ನು ಇಟ್ಟುಕೊಂಡು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸಿವೆ. ಇದಕ್ಕೆ ಸ್ಪಷ್ಟನೆ ಕೊಡಲು ಬಿಜೆಪಿ ನಾಯಕರು ಹೋಗಲೇ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: UP CM v/s DCM: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ; ಯೋಗಿ ತಲೆದಂಡ ಪಕ್ಕಾನಾ?