ಲಕ್ನೋ: ಉತ್ತರಪ್ರದೇಶ(Uttar Pradesh Politics)ದಲ್ಲಿ ಈ ಬಾರಿ ಚುನಾವಣೆ(Lok Sabha Election 2024)ಯಲ್ಲಿ ಬಿಜೆಪಿಯ ಸಂಖ್ಯಾಬಲ 33ಕ್ಕೆ ಕುಸಿದಿರುವುದು ಪಕ್ಷವನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು. ಇದಾದ ಬಳಿಕ ಈ ಹೀನಾಯ ಸೋಲಿಗೆ ಕಾರಣವೇನೆಂಬುದನ್ನು ತಿಳಿಯಲು ಬಿಜೆಪಿ(BJP)ಯ ಕಾರ್ಯಪಡೆ ಅಧ್ಯಯನಕ್ಕೆ ಇಳಿದಿತ್ತು. ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತು ಜಿಲ್ಲಾ ಆಡಳಿತದ ಸಹಕಾರದ ಕೊರತೆಯು ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕಳಪೆ ಪ್ರದರ್ಶನಕ್ಕೆ ಎರಡು ಪ್ರಮುಖ ಅಂಶಗಳಾಗಿವೆ ಎಂದು ಪಕ್ಷದ ಕಾರ್ಯಪಡೆಯು ತನ್ನ ವರದಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath)ಗೆ ಸಲ್ಲಿಸಿದೆ.
ಟಾಸ್ಕ್ ಫೋರ್ಸ್ ತನ್ನ ವರದಿಯನ್ನು ಸಲ್ಲಿಸಿದ ಕೂಡಲೇ, ಆದಿತ್ಯನಾಥ್ 12 ಜಿಲ್ಲಾಧಿಕಾರಿಗಳನ್ನು (ಡಿಎಂ) ವರ್ಗಾಯಿಸಿದ್ದರು. ಸೀತಾಪುರ್, ಬಂದಾ, ಬಸ್ತಿ, ಶ್ರಾವಸ್ತಿ, ಕೌಶಂಬಿ, ಸಂಭಾಲ್, ಸಹರಾನ್‌ಪುರ, ಮೊರಾದಾಬಾದ್ ಮತ್ತು ಹತ್ರಾಸ್‌ನಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳನ್ನು ವರ್ಗಾವಣೆ ಮಾಡಲಾಗಿದ್ದು, ಇಟಾ, ಬಂದಾ ಮತ್ತು ಇಟಾವಾ ಕ್ಷೇತ್ರಗಳ ಅಡಿಯಲ್ಲಿ ಬರುವ ಕಾಸ್‌ಗಂಜ್, ಚಿತ್ರಕೂಟ್ ಮತ್ತು ಔರೈಯಾದಲ್ಲಿ ಡಿಎಂಗಳನ್ನು ಮರು ನಿಯೋಜಿಸಲಾಗಿದೆ. ಹತ್ರಾಸ್ ಹೊರತುಪಡಿಸಿ ಈ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುಂಡಿತ್ತು.
ಬಿಜೆಪಿಯು ಈ ಬಾರಿ ಟಿಕೆಟ್ ಹಂಚಿಕೆ ಎಡವಿರುವುದುನ್ನು ಟಾಸ್ಕ್ ಫೋರ್ಸ್ ಗಮನಿಸಿದೆ. ಅದೂ ಅಲ್ಲದೇ ಕಾಂಗ್ರೆಸ್ ಸಂವಿಧಾನಕ್ಕೆ ಅಪಾಯವಿದೆ ಎಂಬ ವಾದ, ಬಿಎಸ್‌ಪಿಯ ಮತಗಳು ಸಮಾಜವಾದಿಗೆ ಬದಲಾಗಿರುವುದು ಕೂಡ ಬಿಜೆಪಿ ಸೋಲಿಗೆ ಪ್ರಮುಖ ಕಾರಣ. ಎಸ್‌ಪಿ ತನ್ನ ಪಿಚ್ಚಡಾ ದಲಿತರು ಮತ್ತು ಮುಸ್ಲಿಂ ಮತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ನಮ್ಮ ಸೋಲಿಗೆ ನಮ್ಮವರೇ ಕಾರಣ. ನಮ್ಮನ್ನು ಸೋಲಿಸಲು ಬೇರೆಯವರಿಗೆ ಎಲ್ಲಿ ಶಕ್ತಿ? ಎಲ್ಲಿ ಅತ್ಯಂತ ನೀರು ಇತ್ತೋ ಅಲ್ಲೇ ನಾವು ಮುಳುಗಿದ್ದೇವೆ. ಬಿಜೆಪಿ ಸೋಲು ಆಕಸ್ಮಿಕ ಅಲ್ಲ. ಉದ್ದೇಶಿತ ಎಂದು ಟಾಸ್ಕ್ ಫೋರ್ಸ್ ಹೇಳಿದೆ.
ಬಿಜೆಪಿಯ ಅವನತಿಯ ಹಿಂದಿನ ಪ್ರಮುಖ ಅಂಶವೆಂದರೆ ಆಂತರಿಕ ಭಿನ್ನಾಭಿಪ್ರಾಯ, ಪ್ರಾಥಮಿಕವಾಗಿ ಟಿಕೆಟ್ ಹಂಚಿಕೆಯ ಸಮಸ್ಯೆಗಳು ಮತ್ತು ಠಾಕೂರ್ ಸಮುದಾಯದೊಳಗಿನ ಅತೃಪ್ತಿಗೆ ಕಾರಣವಾಗಿದೆ. ಇದನ್ನು ಹೊರತುಪಡಿಸಿ, ಪ್ರತಿಪಕ್ಷಗಳ ‘ಸಂವಿಧಾನಕ್ಕೆ ಬೆದರಿಕೆ’ಯ ನಿರೂಪಣೆಯು ಬಿಜೆಪಿ ಬಹುದೊಡ್ಡ ಹಿನ್ನಡೆಯನ್ನು ತಂದೊಡ್ಡಿತ್ತು ಎಂದು ಪಕ್ಷದ ಕಾರ್ಯಪಡೆ ಹೇಳಿತ್ತು.
“ಹೊಸ ಸಂವಿಧಾನವನ್ನು ರಚಿಸಲು” ಸರ್ಕಾರಕ್ಕೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಬಿಜೆಪಿಯ ಅಭ್ಯರ್ಥಿ ಲಲ್ಲು ಸಿಂಗ್ ಅವರ ವೀಡಿಯೊ ವೈರಲ್ ಆದ ನಂತರ ಗದ್ದಲ ಪ್ರಾರಂಭವಾಯಿತು. “272 ಸ್ಥಾನಗಳೊಂದಿಗೆ ರಚನೆಯಾದ ಸರ್ಕಾರವು ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅಥವಾ ಹೊಸ ಸಂವಿಧಾನ ರಚನೆಯಾಗಬೇಕಿದ್ದರೂ ಮೂರನೇ ಎರಡರಷ್ಟು ಬಹುಮತದ ಅವಶ್ಯಕತೆ ಇದೆ,” ಎಂದು ಅವರು ಹೇಳಿದ್ದರು. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಕಾಂಗ್ರೆಸ್, ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬೇಕಾಬಿಟ್ಟಿ ತಿದ್ದುತ್ತಾರೆ ಎಂಬ ಭಯವನ್ನು ಜನರ ಮನಸ್ಸಿನಲ್ಲಿ ಬಿತ್ತಿತ್ತು. ಇದೂ ಕೂಡ ಬಿಜೆಪಿಗೆ ಈ ಬಾರಿ ತಿರುಮಂತ್ರವಾಗಿ ಪರಿಣಮಿಸಿತ್ತು.
ಇದನ್ನೂ ಓದಿ: Drinking Water Tips: ನೀರು ಕುಡಿಯುವುದೇ ನಿಮ್ಮ ಸಮಸ್ಯೆಯೇ? ಇಲ್ಲಿವೆ ಸರಳ ಉಪಾಯಗಳು!