ಲಖನೌ: ಮದುವೆಯಾಗಿ ಒಂದೆರಡು ವರ್ಷವಾಗುತ್ತಲೇ ಹೆಣ್ಣುಮಕ್ಕಳಿಗೆ ಗುಡ್ ನ್ಯೂಸ್ ಯಾವಾಗ ಎಂದು ಕುಟುಂಬಸ್ಥರು, ಸಂಬಂಧಿಕರು, ಅಕ್ಕಪಕ್ಕದ ಮನೆಯವರು ಪ್ರಶ್ನೆ ಕೇಳಲು ಆರಂಭಿಸುತ್ತಾರೆ. ಅದರಲ್ಲೂ, ಮದುವೆಯಾಗಿ 10-15 ವರ್ಷವಾದರಂತೂ ಸಂಬಂಧಿಕರು ಅಪಹಾಸ್ಯ ಮಾಡಲು ಆರಂಭಿಸುತ್ತಾರೆ. ಹೀಗೆ, ಗರ್ಭ ಧರಿಸದ ಕುರಿತು ಅಪಹಾಸ್ಯಕ್ಕೆ ಬೇಸತ್ತ ಉತ್ತರ ಪ್ರದೇಶದ ಮಹಿಳೆಯು ಗರ್ಭಿಣಿ ಎಂದು ಸುಳ್ಳು (Fake Pregnancy) ಹೇಳಿದ್ದಾರೆ. ಮಹಿಳೆಯು ಗರ್ಭವತಿ ಎಂದು ಸುಳ್ಳು ಹೇಳಿ, ಆರು ತಿಂಗಳ ಬಳಿಕ ನಿಜಾಂಶ ಬಯಲಾಗಿದೆ.
ಉತ್ತರ ಪ್ರದೇಶದ ಎತಾವಾಹ್ ನಿವಾಸಿಯಾದ 40 ವರ್ಷದ ಮಹಿಳೆಗೆ ಮದುವೆಯಾಗಿ 18 ವರ್ಷವಾದರೂ ಮಕ್ಕಳಾಗಿರಲಿಲ್ಲ. ಮಕ್ಕಳಾಗಿಲ್ಲ ಎಂಬುದರ ಕುರಿತು ಕುಟುಂಬಸ್ಥರು, ಸಂಬಂಧಿಕರು ಹಾಗೂ ನೆರೆಹೊರೆಯವರ ಮೂದಲಿಕೆಯ ಮಾತುಗಳಿಂದ ಮಹಿಳೆ ಬೇಸತ್ತಿದ್ದಾರೆ. ಕೊನೆಗೆ ಮಹಿಳೆಯು ತಾನು ಗರ್ಭ ಧರಿಸಿದ್ದೇನೆ ಎಂದು ಆರು ತಿಂಗಳ ಹಿಂದೆ ಘೋಷಿಸಿದ್ದಾರೆ. ಇದರಿಂದ ಮನೆಯವರೂ ಖುಷಿಪಟ್ಟಿದ್ದಾರೆ.
ಗರ್ಭ ಧರಿಸಿದ್ದೇನೆ ಎಂದು ಆರು ತಿಂಗಳಿಂದ ಕುಟುಂಬಸ್ಥರನ್ನು ನಂಬಿಸಿದ ಮಹಿಳೆಯು ತಿಂಗಳು ತಿಂಗಳು ವೈದ್ಯರ ಬಳಿ ತೆರಳುತ್ತೇನೆ ಎಂದು ಮನೆಯಲ್ಲಿ ತಿಳಿಸಿದ್ದಾರೆ. ಹೀಗೆ, ಆರು ತಿಂಗಳು ಸುಳ್ಳು ಹೇಳಿದ ಮಹಿಳೆಯು ಇತ್ತೀಚೆಗೆ ಹೊಟ್ಟೆನೋವು ಎಂದಿದ್ದಾರೆ. ಇದಾದ ಬಳಿಕ ನಿಗದಿತ ಸಮಯಕ್ಕಿಂತ ಮೊದಲೇ ಅಂದರೆ, ಆರು ತಿಂಗಳಿಗೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಕುಟುಂಬಸ್ಥರು ಕೊನೆಗೆ ಆರು ತಿಂಗಳಿಗೆ ಹುಟ್ಟಿದೆ ಎನ್ನಲಾದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪ್ರಕರಣ ಬಯಲಾಗಿದೆ. ಅದು ಮಗುವಲ್ಲ, ಪ್ಲಾಸ್ಟಿಕ್ ಗೊಂಬೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗೆಯೇ, ಮಹಿಳೆಯು ತೆಗೆಸಿಕೊಂಡ ಎಕ್ಸ್‌ರೇಗಳು ಸಹ ನಕಲಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮೂದಲಿಕೆಯ ಮಾತುಗಳಿಂದ ಮಹಿಳೆಯು ಇಂತಹ ದಾರಿ ಹಿಡಿದಿದ್ದು, ಕುಟುಂಬಸ್ಥರು ಈಗ ಮೌನಕ್ಕೆ ಜಾರಿದ್ದಾರೆ ಎಂದು ತಿಳಿದುಬಂದಿದೆ. ಇನ್ನಾದರೂ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಇಂತಹ ಮೂದಲಿಕೆಯ ಮಾತುಗಳನ್ನಾಡುವುದು ನಿಲ್ಲಬೇಕಿದೆ ಎಂಬ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ | Baby Bump | ಹಾರ್ಲೇ ಡೇವಿಡ್ಸನ್ ಬೈಕ್ ರೈಡ್ ಮಾಡಿದ ಗರ್ಭಿಣಿ; ಬೇಬಿ ಬಂಪ್ ಫೋಟೊ ಶೂಟ್ ವೈರಲ್