ಹೊಸದಿಲ್ಲಿ: ಉತ್ತರಾಖಂಡ (uttarakhand) ಮುಂದಿನ ವಾರ ಏಕರೂಪ ನಾಗರಿಕ ಸಂಹಿತೆಯನ್ನು (Uniform Civil Code) ಜಾರಿಗೊಳಿಸಲಿದೆ. ಆ ಮೂಲಕ, ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರ ಪ್ರಕಾರ ಲಿವ್- ಇನ್ ರಿಲೇಶನ್‌ಶಿಪ್ (Live in relationship) ನೋಂದಣಿ ಮಾಡುವುದು ಕಡ್ಡಾಯವಾಗಲಿದೆ.
ನ್ಯಾಯಮೂರ್ತಿ (ನಿವೃತ್ತ) ರಂಜನಾ ದೇಸಾಯಿ ನೇತೃತ್ವದಲ್ಲಿ ರಚಿಸಲಾದ ಸಮಿತಿಯು ಮುಂದಿನ ಎರಡು ದಿನಗಳಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಈ ಕುರಿತು ವರದಿಯನ್ನು ಸಲ್ಲಿಸಲಿದೆ. ಉತ್ತರಾಖಂಡ ಸರ್ಕಾರ ವಿಧಾನಸಭೆಯ ವಿಶೇಷ ಅಧಿವೇಶನವನ್ನು ದೀಪಾವಳಿಯ ನಂತರದ ವಾರ ನಡೆಸಲಿದ್ದು, ಆಗ ಏಕರೂಪ ನಾಗರಿಕ ಸಂಹಿತೆ ವಿಧೇಯಕವನ್ನು ಅಂಗೀಕರಿಸಿ ಅದಕ್ಕೆ ಕಾನೂನು ಸ್ಥಾನಮಾನವನ್ನು ನೀಡಲು ಉದ್ದೇಶಿಸಿದೆ.
ಈ ವರ್ಷದ ಜೂನ್‌ನಲ್ಲಿ, ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕರಡು ಸಮಿತಿಯ ಸದಸ್ಯರಾದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಏಕರೂಪ ನಾಗರಿಕ ಸಂಹಿತೆಯ ಕರಡು ರಚನೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದರು.
ಈ ವರದಿಯು ಲಿಂಗ ಸಮಾನತೆ, ಪೂರ್ವಜರ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕುಗಳ ಮೇಲೆ ಒತ್ತು ನೀಡಿದೆ ಎಂದು ತಿಳಿದುಬಂದಿದೆ. ಆದರೆ ಇದು ಮಹಿಳೆಯರ ವಿವಾಹದ ವಯಸ್ಸನ್ನು 21ಕ್ಕೆ ಏರಿಸಲು ಸೂಚಿಸಿಲ್ಲ. ಸಮಿತಿಯ ಶಿಫಾರಸು ಮಹಿಳೆಯರಿಗೆ ಮದುವೆಯ ವಯಸ್ಸನ್ನು 18ಕ್ಕೆ ಉಳಿಸಿಕೊಳ್ಳಬೇಕು ಎಂದು ಹೇಳಿದೆ.
“ಇದು ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಲ್ಲಾ ಧರ್ಮಗಳಿಗೂ ಅನ್ವಯವಾಗುವ ಒಂದು ಕಾನೂನನ್ನು ರೂಪಿಸುವುದು ಎಂದು ಮೂಲಗಳು ತಿಳಿಸಿವೆ. ಅಂತೆಯೇ, ವಿವಾಹ ನೋಂದಣಿ, ವಿಚ್ಛೇದನ, ಆಸ್ತಿ ಹಕ್ಕುಗಳು, ಅಂತರ-ರಾಜ್ಯ ಆಸ್ತಿ ಹಕ್ಕುಗಳು, ನಿರ್ವಹಣೆ, ಮಕ್ಕಳ ಪಾಲನೆ ಇತ್ಯಾದಿಗಳಂತಹ ವೈಯಕ್ತಿಕ ಕಾನೂನುಗಳಲ್ಲಿ ಏಕರೂಪತೆ ತರುವ ಉದ್ದೇಶ ಹೊಂದಿದೆ. ಪ್ರಸ್ತಾವಿತ ಶಾಸನವು ಮದುವೆಯ ಯಾವುದೇ ಧಾರ್ಮಿಕ ಸಂಪ್ರದಾಯಗಳನ್ನು ಅಥವಾ ಇತರ ಆಚರಣೆಗಳನ್ನು ಸ್ಪರ್ಶಿಸಿಲ್ಲ. ಲಿವ್-ಇನ್ ಸಂಬಂಧಗಳ ನೋಂದಣಿ ಕೂಡ ಕಡ್ಡಾಯವಾಗಿರುತ್ತದೆ.
ಉತ್ತರಾಖಂಡದಂತೆ, ಗುಜರಾತ್‌ನಲ್ಲಿ ಕೂಡ 2024ರಲ್ಲಿ ಲೋಕಸಭಾ ಚುನಾವಣೆಯ ಮೊದಲು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಸಾಧ್ಯತೆ ಇದೆ. ಒಂದು ವೇಳೆ ನೀತಿ ಜಾರಿಗೆ ತಂದರೆ ಗುಜರಾತ್ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆಗೊಳಿಸಿದ 2ನೇ ರಾಜ್ಯವಾಗಲಿದೆ.
ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ವಿರೋಧಿಸಿ ನಿರ್ಣಯ ಅಂಗೀಕರಿಸಿದ ಕೇರಳ ರಾಜ್ಯ ವಿಧಾನಸಭೆ