ಡೆಹ್ರಾಡೂನ್: 17 ದಿನಗಳ ಕಾಲ ಕುಸಿದ ಉತ್ತರಕಾಶಿಯ ಸುರಂಗದಲ್ಲಿ (Uttarkashi tunnel collapse) ಸಿಕ್ಕಿಬಿದ್ದಿದ್ದ ಕಾರ್ಮಿಕರನ್ನು ಮೊದಲು ತಲುಪಿದವನು ರ‍್ಯಾಟ್ ಹೋಲ್ ಮೈನರ್ ಮುನ್ನಾ ಖುರೇಷಿ. ಹತ್ತಾರು ಮೀಟರ್‌ಗಳಷ್ಟು ದೂರದ ಅವಶೇಷಗಳ ಗುಡ್ಡವನ್ನು ಇಲಿಯಂತೆ ಕೊರೆದೂ ಕೊರೆದೂ ಕಡೆಗೂ ಕಾರ್ಮಿಕರನ್ನು ತಲುಪಿದಾತ ಈತ ಹಾಗೂ ಇವನ ಬಳಗ.
ಸಿಲ್ಕ್ಯಾರಾ ಸುರಂಗದಲ್ಲಿ 17 ದಿನಗಳ ಬೃಹತ್ ರಕ್ಷಣಾ ಕಾರ್ಯಾಚರಣೆಯು (Rescue operation) ಮಂಗಳವಾರ ಯಶಸ್ವಿಯಾಗಿ ಕೊನೆಗೊಂಡಿತು ಮತ್ತು ಎಲ್ಲಾ 41 ಕಾರ್ಮಿಕರು ಆರೋಗ್ಯವಂತರಾಗಿ ಹೊರಬಂದರು. ಒಳಗೆ ಸಿಕ್ಕಿಬಿದ್ದ ಕಾರ್ಮಿಕರ ದೃಢತೆ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ರಕ್ಷಕರ ಅವಿಶ್ರಾಂತ ಶ್ರಮವನ್ನು ಇಡೀ ದೇಶವೇ ಶ್ಲಾಘಿಸಿದೆ. ಪಿಎಂ ಮೋದಿ ಅವರು ತಮ್ಮ ಸಂದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಜನರಿಗೆ ವಂದಿಸಿದ್ದಾರೆ. ಮಿಷನ್‌ನಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಮಾನವೀಯತೆ ಮತ್ತು ಸಾಂಘಿಕತೆಗೆ ಅದ್ಭುತ ಉದಾಹರಣೆಯಾಗಿದ್ದಾರೆ ಎಂದಿದ್ದಾರೆ.
ಉತ್ತರಾಖಂಡದ ಸುರಂಗ ಕುಸಿತದ ಜಾಗದಲ್ಲಿ ಅನೇಕ ಸರ್ಕಾರಿ ಏಜೆನ್ಸಿಗಳು, ಭಾರಿ ಭಾರಿ ಯಂತ್ರಗಳು, ರಕ್ಷಣೆಯ ಪಡೆಯೇ ನಿಯೋಜಿಸಲ್ಪಟ್ಟಿದ್ದರೂ, ಕೊನೆಯ ಹಂತವನ್ನು ಯಶಸ್ವಿಯಾಗಿ ಮುಗಿಸಿದವರು ಈ ಇಲಿ- ಕುಳಿ ಗಣಿಗಾರರು. ಮತ್ತು ಕಾರ್ಮಿಕರನ್ನು ಮೊದಲು ತಲುಪಿದ ಮುನ್ನಾ ಖುರೇಷಿ ಕಾರ್ಯಾಚರಣೆಯ ನಾಯಕ ಎಂದು ಪ್ರಶಂಸಿಸಲ್ಪಟ್ಟಿದ್ದಾರೆ.
ಮುನ್ನಾ ಖುರೇಷಿ 29 ವರ್ಷ ವಯಸ್ಸಿನ ರ‍್ಯಾಟ್ ಹೋಲ್ ಮೈನರ್. ಚರಂಡಿ ಮತ್ತು ನೀರಿನ ಮಾರ್ಗಗಳನ್ನು ತೆರವುಗೊಳಿಸುವ ಎಂಜಿನಿಯರಿಂಗ್ ಸೇವೆಗಳ ಕಂಪನಿ- ದೆಹಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊನೆಯ 12 ಮೀಟರ್ ಶಿಲಾಖಂಡರಾಶಿಗಳನ್ನು ಕೊರೆದು ತೆಗೆದುಹಾಕಲು ಸೋಮವಾರ ಉತ್ತರಾಖಂಡಕ್ಕೆ ಕರೆತರಲಾದ ಡಜನ್‌ಗಟ್ಟಲೆ ಇಲಿ-ಕುಳಿ ಗಣಿಗಾರರಲ್ಲಿ ಅವರು ಒಬ್ಬರು.
ಯುಎಸ್ ನಿರ್ಮಿತ ಆಗರ್ ಯಂತ್ರವು ಕೆಲಸ ಮುಗಿಸಲಾಗದೆ ಕೆಟ್ಟು ಹೋದ ನಂತರ ಇಲಿ- ಕುಳಿ ಗಣಿಗಾರರೇ ರಕ್ಷಣಾ ಕಾರ್ಯಾಚರಣೆಯ ಕೊನೆಯ ಭರವಸೆಯಾಗಿದ್ದರು. ಇಲಿ-ರಂಧ್ರ ಗಣಿಗಾರಿಕೆಯೆಂದರೆ ಸಣ್ಣ ತೂತುಗಳನ್ನು ಉದ್ದಕ್ಕೆ ಅಗೆಯುವ ಮೂಲಕ ಕಲ್ಲಿದ್ದಲನ್ನು ಹೊರತೆಗೆಯುವ ವಿಧಾನ. ಆದರೆ ಅವೈಜ್ಞಾನಿಕ ವಿಧಾನವೆಂದು 2014ರಲ್ಲಿ ಇದನ್ನು ನಿಷೇಧಿಸಲಾಗಿತ್ತು.
ಮಂಗಳವಾರ ಸಂಜೆ ಕೊನೆಯ ಬಂಡೆಯನ್ನು ಕೊರೆದು ಸರಿಸಿದಾಗ, ಒಳಗೆ ಸಿಕ್ಕಿಬಿದ್ದಿದ್ದ 41 ಕಾರ್ಮಿಕರು ಥಟ್ಟನೆ ಮುನ್ನಾ ಖುರೇಷಿಗೆ ಕಂಡರು. “ಅವರು ನನ್ನನ್ನು ತಬ್ಬಿಕೊಂಡರು, ಚಪ್ಪಾಳೆ ತಟ್ಟಿದರು ಮತ್ತು ನನಗೆ ಅಪಾರ ಧನ್ಯವಾದ ಹೇಳಿದರು” ಎಂದು ಮುನ್ನಾ ಖುರೇಷಿ ಹೇಳಿದರು.
ಮೋನು ಕುಮಾರ್, ವಕೀಲ್ ಖಾನ್, ಫಿರೋಜ್, ಪರ್ಸಾದಿ ಲೋಧಿ ಮತ್ತು ವಿಪಿನ್ ರಜೌತ್ ಇತರ ರ‍್ಯಾಟ್ ಹೋಲ್ ಮೈನರ್‌ಗಳಾಗಿದ್ದಾರೆ. ಅಷ್ಟೂ ಮಂದಿ ಕಠಿಣ ಕಾರ್ಯಾಚರಣೆಯ ನಂತರ ಸಿಕ್ಕಿಬಿದ್ದ ಜನರನ್ನು ತಲುಪಿದರು. ಆ ಕಡೆ ಕಾಯುತ್ತಿದ್ದ ಕಾರ್ಮಿಕರು ಸಂತೋಷದಿಂದ ಈ ಗಣಿಗಾರರನ್ನು ಎತ್ತಿಕೊಂಡು ಕುಣಿದಾಡಿದರು. ಅಲ್ಲಿದ್ದ ಬಾದಾಮಿ ನೀಡಿದರು. ಸಿಕ್ಕಿಬಿದ್ದ ಜನರನ್ನು ಹೊರಗೆ ಕರೆದೊಯ್ಯುವ ಕೆಲಸ ಎನ್‌ಡಿಆರ್‌ಎಫ್ ಸಿಬ್ಬಂದಿಯಿಂದ ನಂತರದ ಅರ್ಧ ಗಂಟೆಯಲ್ಲಿ ನಡೆಯಿತು.
ಇದನ್ನೂ ಓದಿ: ಹೊರ ಬಂದರು ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಕಾರ್ಮಿಕರು! ಫಲಿಸಿತು ಭಾರತೀಯರ ಪ್ರಾರ್ಥನೆ