Site icon Vistara News

ವಿಸ್ತಾರ ಸಂಪಾದಕೀಯ: ವಂದೇ ಭಾರತ್‌; ಭಾರತದಲ್ಲಿ ರೈಲು ಕ್ರಾಂತಿ

Vande Bharat

ಕರ್ನಾಟಕ, ತೆಲಂಗಾಣ, ಕೇರಳ, ಆಂಧ್ರಪ್ರದೇಶ ಸೇರಿದಂತೆ 11 ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ 9 ಅತ್ಯಾಧುನಿಕ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಸೆಪ್ಟೆಂಬರ್‌ 24) ಚಾಲನೆ ನೀಡಿದ್ದಾರೆ. ಬೆಂಗಳೂರು-ಹೈದರಾಬಾದ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಕರ್ನಾಟಕದ ಮೂರನೇ ವಂದೇ ಭಾರತ್‌ ರೈಲು ಎನಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ 25 ವಂದೇ ಭಾರತ್‌ ರೈಲುಗಳು ಓಡಾಡುತ್ತಿವೆ. ಈಗ ಮತ್ತೆ 9 ವಂದೇ ಭಾರತ್‌ ರೈಲುಗಳು ಸೇರಿಕೊಂಡಿವೆ. ಇದರೊಂದಿಗೆ ಒಟ್ಟು ರೈಲುಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಇನ್ನು ಕೆಲವೇ ತಿಂಗಳೊಳಗೆ ದೇಶದ ಮೂಲೆಮೂಲೆಗಳಲ್ಲಿ ವಂದೇ ಭಾರತ್‌ ರೈಲುಗಳ ಜಾಲ ಆವರಿಸಿಕೊಳ್ಳಲಿದೆ. ಈ ಮೂಲಕ ವಂದೇ ಭಾರತ್‌ ರೈಲು ಕಲ್ಪನೆ ದೇಶದಲ್ಲಿ ಹೊಸದೊಂದು ಸಂಪರ್ಕ ಕ್ರಾಂತಿಯನ್ನೇ ಎಬ್ಬಿಸಿದೆ.

ವಂದೇ ಭಾರತ್‌ ರೈಲು ವೇಗ ಮತ್ತು ಅತ್ಯಾಧುನಿಕ ಸೌಕರ್ಯಗಳಿಂದ ಪ್ರಯಾಣಿಕರ ಮನ ಗೆಲ್ಲುತ್ತಿದೆ. ಒಂದು ನಗರದಿಂದ ಮತ್ತೊಂದು ನಗರಕ್ಕೆ ಅತ್ಯಂತ ಕಡಿಮೆ ಸಮಯದಲ್ಲಿ ತಲುಪುವ ನಿಟ್ಟಿನಲ್ಲಿ ವಂದೇ ಭಾರತ್‌ ರೈಲುಗಳು ವರವಾಗಿ ಪರಿಣಮಿಸಿವೆ. ಕರ್ನಾಟಕದಲ್ಲಿ ಈಗಾಗಲೇ ಚೆನ್ನೈ-ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಧಾರವಾಡ ರೈಲುಗಳು ಜನಪ್ರಿಯತೆ ಪಡೆದಿವೆ. ಈಗ ಇದಕ್ಕೆ ಮೂರನೇ ರೈಲು ಸೇರ್ಪಡೆಯಾಗಿದೆ. ವಂದೇ ಭಾರತ್‌ ಸ್ಲೀಪರ್‌ ಕೋಚ್‌ ಹಾಗೂ ವಂದೇ ಭಾರತ್‌ ಮೆಟ್ರೋ ರೈಲುಗಳ ಸೇವೆ ಕೂಡ ಸದ್ಯದಲ್ಲೇ ಆರಂಭವಾಗಲಿದೆ. ಈಗಾಗಲೇ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲುಗಳ ತಯಾರಿಕೆ ಶುರುವಾಗಿದೆ. 2024ರ ಮಾರ್ಚ್‌ನಲ್ಲಿ ಸ್ಲೀಪರ್‌ ರೈಲುಗಳ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ಉಗಿ ಬಂಡಿಯಿಂದ ಆರಂಭವಾದ ಭಾರತೀಯ ರೈಲ್ವೆ ನೆಟ್‌ ವರ್ಕ್‌ ಇಂದು ವಂದೇ ಭಾರತ್‌ದಂತಹ ಅತ್ಯಾಧುನಿಕ ರೈಲುಗಳ ತನಕ ಸಾಗಿ ಬಂದಿರುವ ಹಾದಿ ಭಾರತೀಯರು ಹೆಮ್ಮೆ ಪಡುವಂಥದ್ದು. ಭಾರತದಲ್ಲಿ ನಿತ್ಯ 22,593 ರೈಲುಗಳು ಸಂಚರಿಸುತ್ತವೆ. ಪ್ರತಿದಿನ ದೇಶದ ಸುಮಾರು 2.5 ಕೋಟಿ ಜನ ರೈಲುಗಳನ್ನೇ ಅವಲಂಬಿಸಿದ್ದಾರೆ. ಈ ಮೂಲಕ ಭಾರತೀಯ ರೈಲ್ವೆ ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲು ಜಾಲ ಹೊಂದಿರುವ ದೇಶ ಎಂಬ ಖ್ಯಾತಿ ಗಳಿಸಿದೆ.

ಇದನ್ನೂ ಓದಿ : Vande Bharat: ಬೆಂಗಳೂರಿನಿಂದ ವಂದೇ ಭಾರತ್‌ ರೈಲಲ್ಲಿ ಹೈದರಾಬಾದ್‌ಗೆ ತೆರಳಲು ಇಷ್ಟು ದುಡ್ಡು ಬೇಕು!

ಈ ನಡುವೆ, ವಂದೇ ಭಾರತ್‌ ರೈಲು ಅತಿ ದುಬಾರಿ ಎಂಬ ದೂರಿದೆ. ಈ ಬಗ್ಗೆ ರೈಲ್ವೆ ಇಲಾಖೆ ಗಮನ ಹರಿಸಬೇಕು. ಹಾಗೆಯೇ, ಇತ್ತೀಚಿನ ದಿನಗಳಲ್ಲಿ ರೈಲು ಬೋಗಿಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಲು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ವಂದೇ ಭಾರತ್‌ದಂತಹ ಹೈಟೆಕ್‌ ರೈಲುಗಳ ಮೇಲೂ ಕಲ್ಲೆಸೆದು ಅವುಗಳ ಗಾಜು ಒಡೆಯುವ ದುಷ್ಕರ್ಮಿಗಳಿದ್ದಾರೆ. ಹಾಗೆಯೇ, ಇಂಥದೊಂದು ಚೆಂದದ ರೈಲಿನೊಳಗೆ ಕಸ ಕಡ್ಡಿ ಎಸೆದು ಗಲೀಜು ಮಾಡುವ ಪ್ರಯಾಣಿಕರಿಗೇನೂ ಕೊರತೆ ಇಲ್ಲ. ಸರ್ಕಾರವೇನೋ ನಮ್ಮ ಅನುಕೂಲಕ್ಕಾಗಿ ವಂದೇ ಭಾರತ್‌ದಂತಹ ರೈಲು ವ್ಯವಸ್ಥೆ ರೂಪಿಸುತ್ತದೆ. ಅವುಗಳ ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ, ಅವುಗಳನ್ನು ಹಾಳುಗೆಡವದಿರುವುದು, ಸ್ವಚ್ಛತೆ ಕಾಪಾಡುವುದು ಜವಾಬ್ದಾರಿಯುತ ನಾಗರಿಕರಾದ ನಮ್ಮ ಕರ್ತವ್ಯ ಎನ್ನುವುದನ್ನು ನಾವು ಮರೆಯಬಾರದು.

Exit mobile version