ವಾರಾಣಸಿ: ಇಲ್ಲಿನ ಶ್ರೀ ವಿಶ್ವನಾಥನ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಗೋಡೆಗಳಲ್ಲಿರುವ ಶೃಂಗಾರ ಗೌರಿ ಚಿತ್ರಗಳಿಗೆ ಪೂಜೆ ಸಲ್ಲಿಸುವುದಕ್ಕೆ ಸಂಬಂಧಿಸಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಇಂದು ವಾರಾಣಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಲಿದೆ.
ಜ್ಞಾನವಾಪಿ ಮಸೀದಿಗೆ ಒತ್ತಿಕೊಂಡಂತೆ ಶೃಂಗಾರ ಗೌರಿ ಮೂರ್ತಿ ಇರುವ ಗೋಡೆಯಿದ್ದು, ಇಲ್ಲಿ ಮೊದಲಿನಿಂದಲೂ ಹಿಂದುಗಳು ಪೂಜೆ ಸಲ್ಲಿಸುತ್ತಿದ್ದರು, ನಂತರ ಇದನ್ನು ನಿರ್ಬಂಧಿಸಲಾಗಿದೆ. ಇದಕ್ಕೆ ಸಂಬಂಧಿಸಿ, ಇಲ್ಲಿ ನಿತ್ಯ ಪೂಜೆಗೆ ಅವಕಾಶ ನೀಡಬೇಕು ಎಂದು ಮಹಿಳೆಯರ ಸಂಘಟನೆಯೊಂದು ಮನವಿ ಮಾಡಿತ್ತು. ಇದನ್ನು ವಕ್ಫ್ ಮಂಡಳಿ ಆಕ್ಷೇಪಿಸಿದ್ದು, ಈ ಜಾಗ ವಕ್ಫ್ ಮಂಡಳಿಗೆ ಸೇರಿದೆ ಎಂದು ವಾದಿಸಿದೆ.
ಇದರ ಬೆನ್ನಲ್ಲೇ ವಾರಣಾಸಿ ನ್ಯಾಯಾಲಯ, ಕಮಿಷನರ್ ನೇತೃತ್ವದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ- ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋ ಸಮೀಕ್ಷೆ ನಡೆಸಲು ಆದೇಶ ನೀಡಿತ್ತು. ಸಮೀಕ್ಷೆಯ ಸಂದರ್ಭದಲ್ಲಿ ಮುಸ್ಲಿಮರು ನಮಾಜ್‌ಗೆ ಮುನ್ನ ವುಲೂ ಮಾಡುವ ಕೊಳದಲ್ಲಿ ʻಶಿವಲಿಂಗ’ದ ಆಕೃತಿಯ ವಸ್ತು ಕಂಡುಬಂದಿತ್ತು. ಶಿವಲಿಂಗ ಕಂಡುಬಂದ ಕೊಳವನ್ನು ಸೀಲ್ ಮಾಡುವಂತೆ, ಉಳಿದ ಕಡೆಯಲ್ಲಿ ಮುಸ್ಲಿಮರು ನಮಾಜ್ ಮಾಡುವ ಮತ್ತಿತರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಮೇ 17ರಂದು ನಿರ್ದೇಶನ ನೀಡಿತ್ತು.
ಜಿಲ್ಲಾ ನ್ಯಾಯಾಲಯ ನೇಮಿಸಿದ ಆಯೋಗ ಮೇ 19ರಂದು ಮುಚ್ಚಿದ ಲಕೋಟೆಯಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಆದರೆ, ಪತ್ತೆಯಾದುದು ಶಿವಲಿಂಗ ಎಂದು ಆಯೋಗ ನೀಡಿದ ವರದಿಯ ಅಂಶಗಳು ಬಯಲಾಗಿದ್ದವು.
ಇದನ್ನೂ ಓದಿ | Explainer: ವಿವಾದದ ಕೇಂದ್ರದಲ್ಲಿ ಈಗ ಕಾಶಿ ಶೃಂಗಾರ ಗೌರಿ ದೇವಿ
ಏತನ್ಮಧ್ಯೆ, ಅಂಜುಮನ್ ಇಂತಜಾಮಿಯಾ ಮಸೀದಿ ಸಮಿತಿಯು, ಜ್ಞಾನವಾಪಿ ಮಸೀದಿಯು ವಕ್ಫ್ ಆಸ್ತಿ ಎಂದು ವಾದಿಸಿದೆ. ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ವಾದಿಸಿದ್ದರು. ಅರ್ಜಿದಾರರ ಪ್ರಕಾರ, ಕಾಶಿಯಲ್ಲಿ (ವಾರಣಾಸಿ) ಭಗವಾನ್ ವಿಶ್ವನಾಥನ ಸ್ವಯಂಭೂ ಜ್ಯೋತಿರ್ಲಿಂಗವು ಮಸೀದಿ ಸಂಕೀರ್ಣದಲ್ಲಿದೆ. 1669ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ನಾಶಪಡಿಸಿ, ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಿದ ಉಲ್ಲೇಖವನ್ನು ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಮೇ 20ರಂದು, ಸುಪ್ರೀಂ ಕೋರ್ಟ್‌ನಲ್ಲಿ ಹಿಂದೂ ಭಕ್ತರು ಸಲ್ಲಿಸಿದ ಸಿವಿಲ್ ಮೊಕದ್ದಮೆಯನ್ನು ವಾರಣಾಸಿಯ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿತು. ಸಮಸ್ಯೆಯ “ಸಂಕೀರ್ಣತೆ” ಮತ್ತು “ಸೂಕ್ಷ್ಮತೆ”ಯನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, 25-30 ವರ್ಷಗಳ ಅನುಭವ ಹೊಂದಿರುವ ಹಿರಿಯ ನ್ಯಾಯಾಂಗ ಅಧಿಕಾರಿ ಈ ಪ್ರಕರಣವನ್ನು ನಿರ್ವಹಿಸಿದರೆ ಉತ್ತಮ ಎಂದು ಹೇಳಿತ್ತು. ಜಿಲ್ಲಾ ನ್ಯಾಯಾಧೀಶರ ಮುಂದಿನ ವಿಚಾರಣೆಯ ಫಲಿತಾಂಶದ ನಂತರ ಅಕ್ಟೋಬರ್ ಮೊದಲ ವಾರದಲ್ಲಿ ಹೆಚ್ಚಿನ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಮುಂದೂಡಿದೆ.
ಇದನ್ನೂ ಓದಿ | ಜ್ಞಾನವಾಪಿ ಕೇಸ್‌ನ ಮುಸ್ಲಿಂ ಸಮಿತಿ ಪರ ವಕೀಲ ಅಭಯನಾಥ್ ಯಾದವ್ ನಿಧನ