ಹೈದರಾಬಾದ್: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು (Assembly Elections 2023) ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ (Lok Sabha Election 2024) ನಿರ್ಣಾಯಕ ಎಂದೇ ವಿಶ್ಲೇಷಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಐದೂ ರಾಜ್ಯಗಳಲ್ಲಿ ಆಯಾ ಪಕ್ಷಗಳ ರಣತಂತ್ರ ಜೋರಾಗಿದೆ. ಅದರಲ್ಲೂ, ಕಾಂಗ್ರೆಸ್ ಹಾಗೂ ಬಿಜೆಪಿಯು ಸಾಲು ಸಾಲು ಉಚಿತ ಕೊಡುಗೆಗಳ ಭರವಸೆ ಮೂಲಕ ಜನರ ವಿಶ್ವಾಸ ಸೆಳೆಯಲು ಯತ್ನಿಸುತ್ತಿವೆ. ಇದರ ಭಾಗವಾಗಿಯೇ ತೆಲಂಗಾಣದಲ್ಲಿ (Telangana Assembly Election) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಪ್ರಣಾಳಿಕೆ ಬಿಡುಗಡೆ (BJP Manifesto) ಮಾಡಿದ್ದಾರೆ. ಅದರಲ್ಲೂ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡುವ ಭರವಸೆ ನೀಡುವ ಮೂಲಕ ಚುನಾವಣೆಯಲ್ಲಿ ಬಿಜೆಪಿಯು ಹೊಸ ಅಸ್ತ್ರ ಪ್ರಯೋಗಿಸಿದೆ.
ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮೌಲ್ಯಾಧಾರಿತ ತೆರಿಗೆ ಕಡಿತಗೊಳಿಸಲಾಗುತ್ತದೆ. ಹಿಂದುಳಿದ ವರ್ಗದವರನ್ನು ಮುಖ್ಯಮಂತ್ರಿ ಮಾಡುವುದು, ನಾಲ್ಕು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದು, ಪ್ರಾದೇಶಿಕ ಆಧಾರಿತ ಮೀಸಲಾತಿ ರದ್ದು, ಏಕರೂಪ ನಾಗರಿಕ ಸಂಹಿತೆ ಜಾರಿ, ಸೆಪ್ಟೆಂಬರ್ 17ರಂದು ಹೈದರಾಬಾದ್ ವಿಮೋಚನಾ ದಿನಾಚರಣೆ, ಕಾಲೇಜು ಓದುವ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ, ಜನರಿಗೆ ಉಚಿತವಾಗಿ ರಾಮಮಂದಿರ ಹಾಗೂ ಕಾಶಿಯಾತ್ರೆಗೆ ವ್ಯವಸ್ಥೆ ಮಾಡುವುದು ಸೇರಿ ಹತ್ತಾರು ಭರವಸೆಗಳನ್ನು ಪ್ರಣಾಳಿಕೆ ಮೂಲಕ ನೀಡಲಾಗಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ
#WATCH | Hyderabad: Union Home Minsiter Amit Shah released BJP manifesto for Telangana Assembly elections. pic.twitter.com/LCCEWQM98D
— ANI (@ANI) November 18, 2023
ಕಾಂಗ್ರೆಸ್ ನೀಡಿದ ಪ್ರಮುಖ ಭರವಸೆಗಳು
- ಹೆಣ್ಣುಮಕ್ಕಳಿಗೆ ಮಾಸಿಕ 2,500 ರೂಪಾಯಿ ಹಣಕಾಸು ನೆರವು
- 500 ರೂ.ಗೆ ಅಡುಗೆ ಅನಿಲ ಸಿಲಿಂಡರ್, ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ
- ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಪ್ರತಿ ಮನೆಗೆ 200 ಯುನಿಟ್ವರೆಗೆ ಉಚಿತ ವಿದ್ಯುತ್
- ಇಂದಿರಮ್ಮ ಇಂದ್ಲು ಯೋಜನೆ ಅಡಿಯಲ್ಲಿ ಬಡವರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಧನಸಹಾಯ
- ಹಿರಿಯ ನಾಗರಿಕರು, ವಿಶೇಷ ಚೇತನರು, ರೋಗಿಗಳಿಗೆ ಮಾಸಿಕ 4 ಸಾವಿರ ರೂ. ಪಿಂಚಣಿ
ಇದನ್ನೂ ಓದಿ: ರಾಜಸ್ಥಾನ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ; ಮಹಿಳೆ, ರೈತರಿಗೆ ಬಂಪರ್ ಯೋಜನೆ, ಹಗರಣ ತನಿಖೆಗೆ ಎಸ್ಐಟಿ
ಬೇರೆ ರಾಜ್ಯಗಳಲ್ಲೂ ಭರಪೂರ ಘೋಷಣೆ
ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕ ಬಳಿಕ ಎಲ್ಲ ರಾಜ್ಯಗಳಲ್ಲೂ ಉಚಿತ ಕೊಡುಗೆಗಳನ್ನು ಘೋಷಿಸಿದೆ. ಅತ್ತ ಬಿಜೆಪಿಯೂ ಉಚಿತ ಯೋಜನೆಗಳನ್ನು ಘೋಷಿಸಿದೆ. ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಮಹಿಳೆಯರಿಗೆ ಮಾಸಿಕ 1,500 ರೂ. ಸಹಾಯಧನ, ರೈತರ ಸಾಲ ಮನ್ನಾ, ಉಚಿತ ವಿದ್ಯುತ್ ಸೇರಿ ಹಲವು ಘೋಷಣೆ ಮಾಡಿದೆ. ಅತ್ತ ಬಿಜೆಪಿ ಕೂಡ ಮುಂದಿನ ಐದು ವರ್ಷಗಳವರೆಗೆ ಜನರಿಗೆ ಉಚಿತವಾಗಿ ಪಡಿತರ ವಿತರಣೆ, ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 12 ಸಾವಿರ ರೂ. ಹಣಕಾಸು ನೆರವು, ಬಡವರಿಗೆ 450 ರೂಪಾಯಿಗೆ ಒಂದು ಅಡುಗೆ ಅನಿಲ ಸಿಲಿಂಡರ್ ಸೇರಿ ಹಲವು ಉಚಿತ ಕೊಡುಗೆಗಳನ್ನು ಘೋಷಿಸಿದೆ. ಹಾಗಾಗಿ, ಮತದಾರ ಯಾರ ಪರ ವಾಲಲಿದ್ದಾನೆ ಎಂಬುದು ಕುತೂಹಲ ಕೆರಳಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ