Site icon Vistara News

Veerappan Case: ವೀರಪ್ಪನ್‌ ಶೋಧ ಹೆಸರಲ್ಲಿ ಆದಿವಾಸಿಗಳ ಗ್ಯಾಂಗ್‌ ರೇಪ್; 215 ಸರ್ಕಾರಿ ನೌಕರರ ‌ ಶಿಕ್ಷೆ ಕಾಯಂ

Veerappan Madras High court

ಚೆನ್ನೈ: 1992ರಲ್ಲಿ ಕಾಡುಗಳ್ಳ ವೀರಪ್ಪನ್‌ ಶೋಧದ (Veerappan Search operation) ನೆಪದಲ್ಲಿ ಆದಿವಾಸಿಗಳ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆದಿತ್ತು ಎಂಬ ಸುದ್ದಿ ಆಗಾಗ ಸದ್ದು ಮಾಡುತ್ತಿತ್ತು. ಇದು ವೀರಪ್ಪನ್‌ ಎಂಬ ಕ್ರೂರಿ ಮಾಡಿದ ಕ್ರೌರ್ಯದಷ್ಟೇ ಆಘಾತಕಾರಿ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಈ ಪ್ರಕರಣದಲ್ಲಿ ತಮಿಳುನಾಡಿನ ಅರಣ್ಯ ಮತ್ತು ಕಂದಾಯ ಇಲಾಖೆಯ (Forest and Revenue department employees) ಅಂದಿನ 215 ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ಮದ್ರಾಸ್‌ ಹೈಕೋರ್ಟ್‌ (Madras High court) ಮತ್ತೆ ಎತ್ತಿ ಹಿಡಿದಿದೆ.

ಧರ್ಮಪುರಿ ಜಿಲ್ಲೆಯ ವಾಚಾತಿ ಗ್ರಾಮದಲ್ಲಿ (Vachati village in Dharmapuri) ಆದಿವಾಸಿಗಳ ಮೇಲೆ ಬರ್ಬರವಾಗಿ ಸಾಮೂಹಿಕ ಅತ್ಯಾಚಾರ (Sexual assault on Adivasis) ನಡೆದಿತ್ತು. 1992ರಲ್ಲಿ ನಡೆದ ಪ್ರಕರಣದಲ್ಲಿ 20 ವರ್ಷಗಳ ನಂತರ ಅಂದರೆ 2011ರಲ್ಲಿ 215 ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು. ಅವರು ಅದನ್ನು ಮೇಲ್ಮನವಿ ಮೂಲಕ ಮದ್ರಾಸ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈಗ ಅದರ ವಿಚಾರಣೆ ನಡೆದು ಶಿಕ್ಷೆಯನ್ನು ಕಾಯಂಗೊಳಿಸಲಾಗಿದೆ. ಮೇಲ್ಮನವಿಯನ್ನು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

1992ರ ಜೂನ್‌ 20ರಂದು ವಾಚಾತಿ ಗ್ರಾಮದಲ್ಲಿ ಏನಾಗಿತ್ತು?

ಅದು ವೀರಪ್ಪನ್‌ ಅಟ್ಟಹಾಸದ ಮೇರು ಕಾಲ. ವೀರಪ್ಪನ್‌ ಧರ್ಮಪುರಿ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಶ್ರೀಗಂಧ ಕಡಿದು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ಚಟುವಟಿಕೆಯಲ್ಲಿ ಗ್ರಾಮಸ್ಥರು ಶಾಮೀಲಾಗಿದ್ದಾರೆ ಎಂಬ ಶಂಕೆ ಇತ್ತು. ಈ ಕಾರಣಕ್ಕಾಗಿ 1992ರ ಜೂನ್‌ 20ರಂದು ವಾಚಾತಿ ಗ್ರಾಮದ ಮೇಲೆ ತಮಿಳುನಾಡಿನ ಅರಣ್ಯ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿ ದಾಳಿ ಮಾಡಿದ್ದರು.

ದಾಳಿ ವೇಳೆ ಅಧಿಕಾರಿಗಳು ಹಲವು ಮನೆಗಳನ್ನು ಧ್ವಂಸಗೊಳಿಸಿ, ಮಹಿಳೆಯರ ಮೇಲೆ ಹಲ್ಲೆಗೈದು ಕ್ರೂರವಾಗಿ ನಡೆಸಿಕೊಂಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು. ಘಟನೆ ವೇಳೆ ಜನ ಜಾನುವಾರುಗಳ ಮೇಲೆ ಕೂಡಾ ಕ್ರೌರ್ಯ ಮೆರೆಯಲಾಗಿತ್ತು ಎನ್ನುವ ಅರೋಪವೂ ಇತ್ತು. ದಾಳಿ ವೇಳೆ ತಾವು ಅತ್ಯಾಚಾರಕ್ಕೊಳಗಾಗಿದ್ದಾಗಿ ಗ್ರಾಮದ 18 ಮಹಿಳೆಯರು ಕೆಲವು ದಿನದ ಬಳಿಕ ಸಂಕಷ್ಟ ತೋಡಿಕೊಂಡಿದ್ದರು.

ಘಟನೆ ನಡೆದ ಮೂರು ವರ್ಷಗಳ ಬಳಿಕ ಸಿಪಿಎಂ ಪಕ್ಷದ ವತಿಯಿಂದ 1995ರಲ್ಲಿ ಕೋರ್ಟ್‌ಗೆ ದಾವೆ ಸಲ್ಲಿಸಿದರು. ಪ್ರಾಥಮಿಕ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತು. ಸುದೀರ್ಘಾವಧಿಯ ಸಿಬಿಐ ತನಿಖೆ ಮತ್ತು ವಿಚಾರಣೆಯ ಬಳಿಕ 2011ರ ಸೆಪ್ಟೆಂಬರ್ 29ರಂದು ವಿಚಾರಣಾ ನ್ಯಾಯಾಲಯ ತೀರ್ಪನ್ನು ನೀಡಿತು.

ಇದನ್ನೂ ಓದಿ: Sexual Assault: ಗಂಡಂದಿರು, ಮಕ್ಕಳ ಎದುರೇ 3 ಮಹಿಳೆಯರ ಮೇಲೆ ಗ್ಯಾಂಗ್ ರೇಪ್! ಜಾಗ ಬಿಟ್ಟು ಕೊಡಲ್ಲ ಎಂದಿದ್ದೇ ತಪ್ಪಾಯ್ತಾ?

ಅದರಲ್ಲಿ ನಾಲ್ವರು ಐಎಫ್ಎಸ್ ಅಧಿಕಾರಿಗಳು, 84 ಪೊಲೀಸ್ ಸಿಬ್ಬಂದಿ, ಐವರು ಕಂದಾಯ ಸಿಬ್ಬಂದಿ, 126 ಅರಣ್ಯ ಸಿಬ್ಬಂದಿ ಸೇರಿ ಒಟ್ಟು 215 ಮಂದಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅಧಿಕಾರಿಗಳು, ನೌಕರರು ಮೇಲ್ಮನವಿ ಸಲ್ಲಿಸಿದ್ದರು.

ಒಟ್ಟು 126 ಅರಣ್ಯ ಸಿಬ್ಬಂದಿ, 84 ಪೊಲೀಸ್ ಸಿಬ್ಬಂದಿ ಮತ್ತು 5 ಕಂದಾಯ ಅಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದ ತೀರ್ಪನ್ನು ನ್ಯಾಯಮೂರ್ತಿಗಳು ಕಳೆದ ಫೆಬ್ರವರಿಯಲ್ಲಿ ಕಾಯ್ದಿರಿಸಿದ್ದರು. ಬಳಿಕ ಅವರು ವಾಚಾತಿ ಗ್ರಾಮದ ಭೌಗೋಳಿಕ ಪರಿಸರ ಅಧ್ಯಯನಕ್ಕಾಗಿ ಅಲ್ಲಿಗೆ ಭೇಟಿ ನೀಡಿದ್ದರು. ಎಲ್ಲವನ್ನೂ ಪರಿಗಣಿಸಿದ ಬಳಿಕ ಈಗ ಶಿಕ್ಷೆಯನ್ನು ಕಾಯಂ ಮಾಡಲಾಗಿದೆ.

ಮೇಲ್ಮನವಿ ರದ್ದು, ಶಿಕ್ಷೆ ಕಾಯಂ, ಬಂಧನಕ್ಕೆ ಆದೇಶ, ಪರಿಹಾರಕ್ಕೆ ಆರ್ಡರ್‌

ಪ್ರಕರಣದ 215 ಅಪರಾಧಿಗಳಿಗೆ ವಿಧಿಸಲಾದ ಶಿಕ್ಷೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಾಗೂ 2011ರಿಂದ ಬಾಕಿ ಉಳಿದಿದ್ದ ಕಿಮಿನಲ್‌ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಪಿ ವೇಲ್‌ಮುರುಗನ್‌ ಮಹತ್ವದ ತೀರ್ಪು ನೀಡಿದರು.

ತೀರ್ಪಿನ ಪ್ರಮುಖ ಅಂಶಗಳು ಇಂತಿವೆ.

  1. ಎಲ್ಲಾ ಅಪರಾಧಿಗಳನ್ನು ಬಂಧಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ನ್ಯಾಯಮೂರ್ತಿಗಳು ಸೆಷನ್ಸ್‌ ನ್ಯಾಯಾಲಯಕ್ಕೆ ಸೂಚಿಸಿದರು.
  2. ಸರ್ಕಾರಿ ಅಧಿಕಾರಿಗಳಿಂದ ಅತ್ಯಾಚಾರಕ್ಕೀಡಾದ 18 ಮಹಿಳೆಯರಿಗೆ ₹10 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ.
  3. ಘಟನೆಯ ನಂತರ ಸಾವನ್ನಪ್ಪಿದ ಮೂವರು ಸಂತ್ರಸ್ತರ ಕುಟುಂಬಗಳಿಗೂ ಪರಿಹಾರ ನೀಡಬೇಕು.
  4. ಪರಿಹಾರ ಮೊತ್ತದ ಶೇಕಡಾ 50 ಹಣವನ್ನು ಶಿಕ್ಷೆಗೊಳಗಾದ ತಪ್ಪಿತಸ್ಥ ಸರ್ಕಾರಿ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು.
  5. ಸಂತ್ರಸ್ತರು ಅಥವಾ ಅವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ಒದಗಿಸಲು, ವಾಚಾತಿ ಗ್ರಾಮಸ್ಥರ ಬದುಕು ಸುಧಾರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು.

Exit mobile version