Site icon Vistara News

ರಾಜ್ಯಸಭೆಗೆ ನಾಮನಿರ್ದೇಶನ; ಡಾ. ವೀರೇಂದ್ರ ಹೆಗ್ಗಡೆಯವರ ಸಾರ್ಥಕ ಸೇವೆಗೆ ಸಂದ ಗೌರವ

veerendra heggade

ಬೆಂಗಳೂರು: ರಾಜ್ಯ ಸಭೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ನಾಮ ನಿರ್ದೇಶನ ಮಾಡಿರುವುದು ಅವರ ಅಪಾರ ಸೇವೆಗೆ ಸಂದ ಅತ್ಯುನ್ನತ ಗೌರವವಾಗಿದೆ. ಸಮಾಜಸೇವೆಯಲ್ಲಿನ ಅವರ ಐದು ದಶಕಗಳ ಅನುಭವದಿಂದ ಸಂಸತ್ತಿನ ಚರ್ಚೆಗಳ ಮೌಲ್ಯ ಹೆಚ್ಚುವುದರ ಜತೆಗೆ ಆಡಳಿತಾಂಗಕ್ಕೆ ಉತ್ತಮ ಮಾರ್ಗದರ್ಶನವೂ ಲಭ್ಯವಾಗಲಿದೆ.

ಕಳೆದ ೨೧ ತಲೆಮಾರುಗಳಿಂದ ಧಾರ್ಮಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಸೇವೆ ಮಾಡಿಕೊಂಡು ಬಂದಿರುವ ಕುಟುಂಬದಲ್ಲಿ ಜನಿಸಿರುವ ಡಾ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು ಮಾತ್ರವಲ್ಲ, ನಂಬಿದ ಭಕ್ತ ಗಣಕ್ಕೆ ನ್ಯಾಯಾಧೀಶರೂ ಕೂಡ. ಧಾರ್ಮಿಕ ಕಾರ್ಯ, ಸಮಾಜ ಸೇವೆ ಜತೆ ಜತೆಗೆ ನ್ಯಾಯಾಂಗದ ಕೆಲಸವನ್ನೂ ಮಾಡಿಕೊಂಡು ಬಂದವರು. ಮಂಜುನಾಥೇಶ್ವರ ಸ್ವಾಮಿಯ ಮೇಲಿನ ಆಣೆ ಪ್ರಮಾಣಕ್ಕೆ ಹೆಚ್ಚಿನ ಪ್ರಾಧನ್ಯತೆ ಇದೆ. ಭಕ್ತರು ತಕರುಗಳನ್ನು ಹೆಗ್ಗಡೆಯವರ ಬಳಿ ತರುತ್ತಾರೆ. ಸ್ಥಳದ ನಂಬಿಕೆಯ ದೈವ ಅಣ್ಣಪ್ಪ ಸ್ವಾಮಿ ಹಾಗು ಶ್ರೀ ಮಂಜುನಾಥನ ಆದೇಶಗಳನ್ನು ಅನುಸರಿಸಿ ಧರ್ಮಧಿಕಾರಿಗಳು ಆ ತಕರಾರುಗಳಿಗೆ ಕೊಡುವ ನ್ಯಾಯ ಮನೆಮಾತಾಗಿದೆ. ಹೀಗಾಗಿ ಅವರು ಅಪಾರ ಜನರ ಪ್ರೀತಿ, ಗೌರವಾಧಾರಗಳಿಗೆ ಪಾತ್ರರಾಗಿದ್ದಾರೆ.

ಶ್ರೀ ವೀರೇಂದ್ರ ಹೆಗ್ಗಡೆಯವರು 1948ರ ನವೆಂಬರ್ 25 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಳದ ಬೋರ್ಡ್ ಶಾಲೆಯಲ್ಲಿ ಮುಗಿಸಿದರು. ಸಮೀಪದ ಉಜಿರೆಯಲ್ಲಿ ಮಾಧ್ಯಮಿಕ ಶಿಕ್ಷಣ ಕಲಿತರು. ಜತೆಗೆ ಸಿದ್ಧವನ ಗುರುಕುಲದಲ್ಲಿ ಜೀವನ ಪಾಠವನ್ನು ಕಲಿತವರು. ನಂತರ ಬೆಂಗಳೂರಿನ ಶೇಷಾದ್ರಿಪುರಂ ಪ್ರೌಢಶಾಲೆ ಮತ್ತು ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರು. 1963ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಅವರು ಬಿ.ಎ ಓದಬೇಕು, ಮುಂದೆ ಕಾನೂನು ಪದವಿ ಪಡೆದು ವಕೀಲರಾಗಬೇಕೆಂದು ಕನಸು ಕಂಡಿದ್ದರು.

ಈ ಹೊತ್ತಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ತಮ್ಮ ತಾಯಿ ರತ್ನವರ್ಮ ಹೆಗ್ಗಡೆ ಅವರು ಅನಾರೋಗ್ಯಕ್ಕೊಳಗಾದುದ್ದರಿಂದ ಅವರ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅನಾರೋಗ್ಯದಿಂದಾಗಿ ರತ್ನವರ್ಮ ಹೆಗ್ಗಡೆ ವಿಧಿವಶರಾದ ಕಾರಣ, ತಮ್ಮ 20ನೇ ವಯಸ್ಸಿಗೇ ಅಂದರೆ 1968ರ ಅಕ್ಟೋಬರ್ 24ರಂದು ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ 21ನೇ ಧರ್ಮಾಧಿಕಾರಿಗಳಾಗಿ ಜವಾಬ್ಧಾರಿ ವಹಿಸಿಕೊಂಡರು.

ಸೇವೆಯ ಸಂಕಲ್ಪ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಧರ್ಮಸ್ಥಳದ ಅಭಿವೃದ್ಧಿಯತ್ತ ಗಮನ ನೀಡಿದರು. ದೇಗುಲದ ಅಭಿವೃದ್ಧಿಗೆ ಜತೆಗೆ ಊರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು, ಶ್ರೀ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಅಭಿವೃದ್ಧಿಗೊಳ್ಳುವಂತೆ ಮಾಡುವುದು, ಶಾಲಾ-ಕಾಲೇಜುಗಳನ್ನು ತೆರೆಯುವುದು ಹೀಗೆ ಒಂದರ ಹಿಂದೆ ಒಂದರಂತೆ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರ ಫಲವಾಗಿ ಇಂದು ಧರ್ಮಸ್ಥಳ ದಕ್ಷಿಣ ಭಾರತದ ಅತ್ಯಂತ ಹೆಚ್ಚು ಭಕ್ತರನ್ನು ಸೆಳೆಯುವ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೆನಿಸಿದೆ.

ಬಡ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಮದುವೆ ಮಾಡುವುದೇ ದೊಡ್ಡ ಸವಾಲು ಎಂಬ ಕಾಲಘಟ್ಟದಲ್ಲಿ ಸಾಮೂಹಿಕ ವಿವಾಹವನ್ನು ಆರಂಭಿಸಿ, ಸಾವಿರಾರು ಕುಟುಂಬಗಳನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಿದ್ದಾರೆ. 1979ರಲ್ಲಿ ಆರಂಭವಾದ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಂದಿಗೂ ೫೦೦ಕ್ಕೂ ಹೆಚ್ಚು ಜೋಡಿಗಳು ಜತೆಯಾಗಿ ಸಾಂಸಾರಿಕ ಬಂಧನಕ್ಕೆ ಒಳಗಾಗುತ್ತಿವೆ.

1982ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಆರಂಭಿಸಿದ ಶ್ರೀಯುತ ವೀರೇಂದ್ರ ಹೆಗ್ಗೆಡೆಯವರು ಬೆಳ್ತಂಗಡಿ ತಾಲ್ಲೂಕಿನ ನೂರಾರು ಕುಟುಂಬಗಳಿಗೆ ಜೀವನೋಪಾಯದ ದಾರಿ ಮಾಡಿಕೊಟ್ಟರು. ಮುಂದೆ ಈ ಯೋಜನೆ ಬೆಳೆಯುತ್ತಾ, ಅಕ್ಕಪಕ್ಕದ ತಾಲೂಕುಗಳಲ್ಲದೆ, ಜಿಲ್ಲೆಗಳ ಗಡಿಯನ್ನು ದಾಟಿ, ರಾಜ್ಯದಾದ್ಯಂತ ಹರಡಿದೆ. ಲಕ್ಷಾಂತರ ಕುಟುಂಬಗಳು ಫಲಾನುಭವಿಗಳಾಗಿವೆ.

ನೂರಾರು ಪ್ರಶಸ್ತಿಗಳ ಗರಿ
ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳನ್ನು ಪರಿಗಣಿಸಿ ನೂರಾರು ಪ್ರಶಸ್ತಿ,ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಮುಖ್ಯವಾದವು ಹೀಗಿವೆ;
1985 ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
1993 ರಲ್ಲಿ ರಾಷ್ಟ್ರಪತಿಗಳಿಂದ ರಾಜರ್ಷಿ ಗೌರವ
9994 ರಲ್ಲಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ
2004 ರಲ್ಲಿ ವರ್ಷದ ಕನ್ನಡಿಗ ಗೌರವ
2011 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ
2012 ರಲ್ಲಿ ಲಂಡನ್‌ನ ಪ್ರತಿಷ್ಠಿತ ಆಶ್ಡೆನ್ ಸಂಸ್ಥೆಯ ಜಾಗತಿಕ ಹಸಿರು ಆಸ್ಕರ್ ಎಂದೇ ಪರಿಗಣಿಸಲಾದ ಆಶ್ಡೆನ್ ಸುಸ್ಥಿರ ಇಂಧನ ಪ್ರಶಸ್ತಿ (ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಾಗಿ ನೀಡಲಾಗಿದೆ)
2013 ರಲ್ಲಿ ಮಧ್ಯಪ್ರದೇಶದ ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ.
2015 ರಲ್ಲಿ ಭಾರತ ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿ.
ಮಂಗಳೂರು, ಧಾರವಾಡ, ಹಂಪಿ ಕನ್ನಡ ವಿವಿ, ರಾಜೀವ್‌ಗಾಂಧಿ ಆರೋಗ್ಯ ವಿವಿ, ಅಮೆರಿಕದ ಗ್ಲ್ಯಾಸ್ಗೋ ವಿವಿ ಇವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿವೆ.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದದು. ಮೊದಲಿಗೆ ಧರ್ಮಸ್ಥಳದ ಸುತ್ತಮತ್ತ ಸಂಚಾರಿ ಆಸ್ಪತ್ರೆಗಳನ್ನು ತೆರೆದ ವೀರೇಂದ್ರಹೆಗ್ಗಡೆಯವರು, ಮುಂದೆ ಹಲವಾರು ಆಸ್ಪತ್ರೆಗಳನ್ನು ಕಟ್ಟಿದ್ದಾರೆ. ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿ ಆಯುವೇದ ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ. ಮಂಗಳೂರಿನ ಎಸ್ ಡಿ ಎಮ್ ಕಣ್ಣಿನ ಆಸ್ಪತ್ರೆ ಮತ್ತು ದಂತ ಚಿಕಿತ್ಸಾಲಯ, ಕ್ಷಯರೋಗ ಚಿಕಿತ್ಸಾಲಯವಲ್ಲದೇ, ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ, ಧಾರವಾಡದಲ್ಲಿ ವೈದ್ಯಕೀಯ ಕಾಲೇಜು ತೆರೆದಿದ್ದಾರೆ.

ರಾಜ್ಯಾದ್ಯಂತ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಹೆಸರಿನಲ್ಲಿ ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತು ವಿವಿಧ ಪದವಿಗಳು, ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವಲ್ಲದೇ, ಶ್ರೀ ಮಂಜುನಾಥೇಶ್ವರ ಸಾಂಸ್ಕೃತಿಕ ಸಂಶೋಧನಾ ಕೇಂದ್ರವನ್ನು ತೆರೆದಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಕೊಡುಗೆ ಅಪಾರವಾದದು. ಒಟ್ಟಾರೆ ೪೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಈಗ ಕಾರ್ಯನಿರ್ವಹಿಸುತ್ತಿವೆ.

ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ

ಕೇವಲ ಶ್ರೀ ಕ್ಷೇತ್ರ ಧರ್ಮಸ್ಥಳ ಮಾತ್ರವಲ್ಲದೆ, ಇಲ್ಲಿ ಸಂಗ್ರಹವಾಗುವ ಆದಾಯವನ್ನೇ ಖರ್ಚು ಮಾಡಿ ನಾಡಿನ ಹಲವಾರು ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ನೂರಾರು ದೇಗುಲಗಳ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿದ್ದಾರೆ. ಕೆಲವು ಕ್ಷೇತ್ರಗಳನ್ನು ತಾವೇ ಮುಂದೆ ನಿಂತು ಅಭಿವೃದ್ಧಿ ಪಡಿಸಿದ್ದಾರೆ. ಅತ್ಯಾಕರ್ಷಕ ಗೊಮ್ಮಟೇಶ್ವರನ ವಿಗ್ರಹವನ್ನು ಧರ್ಮಸ್ಥಳದಲ್ಲಿ ಸ್ಥಾಪಿಸುವ ಮೂಲಕ ಅಭಿನವ ಚಾವುಂಡರಾಯ ಎಂಬು ಬಿರುದು ಪಡೆದಿದ್ದಾರೆ.

ಕೆಲ-ಸಾಹಿತ್ಯಕ್ಕೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಅವರು ಧರ್ಮಸ್ಥಳ ಸಾಹಿತ್ಯ ಸಮ್ಮೇಳನ ನಡೆಸುಕೊಂಡು ಬಂದಿದ್ದಾರೆ. ಯಕ್ಷಗಾಗನದ ಸಂಶೋಧನೆಗೆ, ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಭಕ್ತಿಗೀತೆಗಳ ಗಾಯನ ಪ್ರೋತ್ಸಾಹಿಸಲು ತರಬೇತಿ ಕೇಂದ್ರ ತೆರೆಯುವುದರ ಜತೆಗೆ ಸ್ಪರ್ಧೆ ಏರ್ಪಡಿಸಿಕೊಂಡು ಬಂದಿದ್ದಾರೆ.

ಅವರ ಬಹುಮುಖಿ ಸಮಾಜ ಸೇವೆ ಎಲ್ಲರಿಗೂ ತಿಳಿದಿರುವುದೇ. ಈಗ ಅವರಿಗೆ ದೇಶದ ಆಡಳಿತಾಂಗದ ಭಾಗವಾಗಿ, ತಮ್ಮ ಅನುಭವವನ್ನು ಧಾರೆ ಎರೆಯಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ | ರಾಜ್ಯಸಭೆಗೆ ಆಯ್ಕೆ: ನನ್ನ ಅನುಭವವನ್ನು ದೇಶಕ್ಕಾಗಿ ಬಳಸಲು ಒಳ್ಳೆಯ ವೇದಿಕೆ ಎಂದ ಡಾ. ಡಿ. ವೀರೇಂದ್ರ ಹೆಗ್ಗಡೆ

Exit mobile version