ಮುಂಬೈ: ವಿದೇಶಕ್ಕೆ ಹೋದಾಗ ಚಮಚ ತೆಗೆದುಕೊಂಡು ಹೋಗುತ್ತೇನೆ, ವೆಜಿಟೇರಿಯನ್ ಹೋಟೆಲ್‌ಗಳಿಗೆ ಮಾತ್ರ ಹೋಗುತ್ತೇನೆ ಎಂದು ಇತ್ತೀಚೆಗೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ನೀಡಿದ ಹೇಳಿಕೆ ವಿರುದ್ಧ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಬಾಂಬೆ (IIT-Bombay) ಶಿಕ್ಷಣ ಸಂಸ್ಥೆಯಲ್ಲಿ ಆಹಾರ ತಾರತಮ್ಯ ಕುರಿತು ವಿವಾದ ಭುಗಿಲೆದ್ದಿದೆ. ಐಐಟಿಯ ಕ್ಯಾಂಟೀನ್‌ನಲ್ಲಿ “ಸಸ್ಯಾಹಾರಿಗಳಿಗೆ ಮಾತ್ರ” ಎಂಬ ಪೋಸ್ಟರ್ ಅಂಟಿಸಿದ್ದು, ಇದರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಐಟಿ ಬಾಂಬೆಯ ಹಾಸ್ಟೆಲ್ 12ರಲ್ಲಿರುವ ಕ್ಯಾಂಟೀನ್‌ನಲ್ಲಿ “ಸಸ್ಯಾಹಾರಿಗಳು ಮಾತ್ರ ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ” ಎಂಬ ಪೋಸ್ಟರ್ ಅಂಟಿಸಲಾಗಿದೆ. ವಿದ್ಯಾರ್ಥಿ ಸಂಘಟನೆಯಾದ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC) ಈ ಕೃತ್ಯವನ್ನು ಖಂಡಿಸಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಆಹಾರ ತಾರತಮ್ಯ ಸರಿಯಲ್ಲ. ಸಸ್ಯಾಹಾರಿಗಳು ಮಾತ್ರ ಮನುಷ್ಯರಲ್ಲ ಎಂದು ಪೋಸ್ಟರ್ ಅಂಟಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟರ್ ಅಂಟಿಸಿರುವ ಫೋಟೊಗಳು ವೈರಲ್ ಆಗಿದ್ದು, ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಆಕ್ರೋದ ಬೆನ್ನಲ್ಲೇ, ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನ ಕಾರ್ಯದರ್ಶಿಯು ಇ-ಮೇಲ್ ಮಾಡಿದ್ದಾರೆ. “ಕ್ಯಾಂಟೀನ್‌ಗಳಲ್ಲಿ ಪೋಸ್ಟರ್ ಅಂಟಿಸುವುದು, ಆಹಾರ ಪದ್ಧತಿಯಲ್ಲಿ ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ. ನಾವು ಎಲ್ಲರ ವಿಚಾರಗಳನ್ನು, ಆಚರಣೆಗಳನ್ನು ಗೌರವಿಸಬೇಕು. ಯಾವುದೇ ಕಾರಣಕ್ಕೂ ಇಂತಹ ಅಸಹಿಷ್ಣುತೆ ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Neha Singh: ಐಐಟಿಯಲ್ಲಿ ಓದಿ, ಐದಂಕಿ ಸಂಬಳದ ಕೆಲಸ ಬಿಟ್ಟು ಉದ್ಯಮಿಯಾದ ಯುವತಿ; ಈಕೆಗೆ ರತನ್ ಟಾಟಾ ಫಿದಾ
ಹೀಗೊಂದು ನಿಯಮ ಇದೆಯೇ?
ಸಸ್ಯಾಹಾರಿಗಳಿಗೆ ಪ್ರತ್ಯೇಕ ಕ್ಯಾಂಟೀನ್ ವ್ಯವಸ್ಥೆ ಕುರಿತು ಇಂತಹದ್ದೊಂದು ನಿಯಮ ಇದೆ ಎಂಬ ಕುರಿತು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಮಾಹಿತಿ ಕೋರಿದ್ದು, ಇಂತಹ ಯಾವುದೇ ನಿಯಮವಿಲ್ಲ ಎಂದು ತಿಳಿದುಬಂದಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಸ್ಯಾಹಾರ, ಮಾಂಸಾಹಾರ ಎಂಬ ಭೇದ-ಭಾವ ಇಲ್ಲ. ಹಾಗೆಯೇ, ಸಸ್ಯಾಹಾರಿಗಳಿಗೆ ಎಂದು ಪ್ರತ್ಯೇಕ ಕ್ಯಾಂಟೀನ್ ವ್ಯವಸ್ಥೆ ಇರುವುದಿಲ್ಲ. ಜೈನ ಸಮುದಾಯದವರಿಗೆಂದೇ ಯಾವುದೇ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ ಎಂದು ತಿಳಿದುಬಂದಿದೆ.