Site icon Vistara News

Congress Manifesto : ಪಿಎಫ್‌ಐ ಜತೆ ಬಜರಂಗ ದಳವನ್ನು ಹೋಲಿಸಿದ್ದಕ್ಕೆ ವಿಹಿಂಪ ತೀವ್ರ ಖಂಡನೆ

VHP strongly condemned for comparing Bajrang Dal with PFI

ಬೆಂಗಳೂರು: ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಪಿಎಫ್‌ಐ ಜತೆ ಹೋಲಿಸಿರುವುದಕ್ಕೆ ವಿಶ್ವ ಹಿಂದೂ ಪರಿಷತ್‌ ತೀವ್ರವಾಗಿ ಖಂಡಿಸಿದೆ. (Congress Manifesto) ಕಾಂಗ್ರೆಸ್‌ ಪಕ್ಷವು ದೇಶಭಕ್ತ ಬಜರಂಗದಳ ಸಂಘಟನೆಯನ್ನು ದೇಶ ವಿದ್ರೋಹಿ ಪಿಎಫ್‌ಐ ಜತೆಗೆ ಹೋಲಿಸಿರುವುದು ಭಾರತದ ರಾಜಕಾರಣದ ಇತಿಹಾಸದಲ್ಲಿಯೇ ದುರದೃಷ್ಟಕರ ಎಂದು ವಿಶ್ವ ಹಿಂದೂ ಪರಿಷತ್‌ನ (VHP) ಅಂತಾರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್‌ ಹೇಳಿದ್ದಾರೆ.

ಪಿಎಫ್‌ಐ ಅತ್ಯಂತ ಕುಖ್ಯಾತ ಹಾಗೂ ದೇಶ ವಿದ್ರೋಹಿ ಸಂಘಟನೆಯಾಗಿತ್ತು. ಬಜರಂಗ ದಳದ ಕಾರ್ಯಕರ್ತರು ದೇಶ ಸೇವೆಗೆ ಸರ್ವಸ್ವವನ್ನೂ ಮುಡಿಪಾಗಿರಿಸಿದವರು ಎಂಬುದು ಎಲ್ಲರಿಗೂ ತಿಳಿದಿದೆ. ಈ ಎರಡೂ ಸಂಘಟನೆಗಳನ್ನು ಕಾಂಗ್ರೆಸ್‌ ಹೋಲಿಸಿದ್ದೇಕೆ? ಮುಸ್ಲಿಂ ತುಷ್ಟೀಕರಣದ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಇಂಥ ಕೊಳಕು ರಾಜಕೀಯಕ್ಕೆ ಕೈ ಹಾಕಿದೆ. ದೇಶ ವಿದ್ರೋಹಿಗಳ ಸರ್‌ ತನ್‌ ಸೆ ಜುದಾ ( ಶಿರಚ್ಛೇಧದ ಬೆದರಿಕೆ) ಘೋಷಣೆಗಳಿಗೆ ಪಿಎಫ್‌ಐ ಕಾರ್ಯಕರ್ತರು ಕುಮ್ಮಕ್ಕು ನೀಡುತ್ತಿದ್ದಾಗ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕನಿಷ್ಠ ಇಂಥ ಘೋಷಣೆಗಳನ್ನು ಖಂಡಿಸುವ ಕೆಲಸವನ್ನೂ ಅದು ಮಾಡಿರಲಿಲ್ಲ. ಇದರ ಇದರ ಪರಿಣಾಮ ದೇಶದಲ್ಲಿ ಭಯೋತ್ಪಾದನೆಯ ಭೀತಿ ಸೃಷ್ಟಿಯಾಗಿತ್ತು. ಆಗ ಬಜರಂಗದಳ ಹೆಲ್ಪ್‌ ಲೈನ್‌ ಸ್ಥಾಪಿಸಿ ಜನತೆಯಲ್ಲಿ ಧೈರ್ಯ ತುಂಬಿತ್ತು. ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತ್ತು. ಇದರೊಂದಿಗೆ ಕಾಂಗ್ರೆಸ್‌ ತನ್ನ ಅವನತಿಗೆ ತಾನೇ ಕಾರಣವಾಗಿದೆ ಎಂದು ಸುರೇಂದ್ರ ಜೈನ್‌ ಹೇಳಿದ್ದಾರೆ.

ಕಾಂಗ್ರೆಸ್‌ನ ಇಂಥ ಕೊಳಕು ರಾಜಕೀಯವನ್ನು ವಿಹಿಂಪ ಸಹಿಸುವುದಿಲ್ಲ. ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಲಾಗುವುದು ಎಂದು ವಿಶ್ವಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್‌ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಏನಿದೆ?

ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ಯಾವುದೇ ಶಕ್ತಿಗಳನ್ನು ಸಹಿಸುವುದಿಲ್ಲ. ಬಜರಂಗ ದಳ, ಪಿಎಫ್‌ಐ ಸೇರಿದಂತೆ ಯಾವುದೇ ಸಂಘಟನೆಗಳಾದರೂ ನಿಷೇಧವೂ ಸೇರಿದಂತೆ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ‌ (Congress Manifesto) ಭರವಸೆ ನೀಡಿದೆ. ಪಿಎಫ್‌ಐಯನ್ನು ಈಗಾಗಲೇ ಕೇಂದ್ರ ಸರ್ಕಾರ ನಿಷೇಧಿಸಿದೆ.

ಸಮಾಜದಲ್ಲಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಕಾಂಗ್ರೆಸ್‌ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲೀ, ಬಜರಂಗ ದಳ ಮತ್ತು ಪಿಎಫ್‌ಐ ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು, ಸಹಿಸುವುದಿಲ್ಲ. ಆದ ಕಾರಣ ಇಂಥ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಭಯೋತ್ಪಾದನಾ ಚಟುವಟಿಕೆಗಳ ಮೂಲೋತ್ಪಾಟನೆಗೆ ಸುಲಭವಾಗುವಂತೆ ವಿಶೇಷ ತ್ವರಿತಗತಿ ನ್ಯಾಯಾಲಯವನ್ನು ಸ್ಥಾಪಿಸಲಾಗುವುದು, ಕನಕಪುರದಲ್ಲಿ ಅತ್ಯಾಧುನಿಕ ವಿಶ್ವದರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಕೇಂದ್ರ ಸರಕಾರ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಎಫ್‌ಐ)ಯನ್ನು ಕೆಲವು ತಿಂಗಳ ಹಿಂದೆ ನಿಷೇಧಿಸಿತ್ತು. ಆಗಲೇ ಕಾಂಗ್ರೆಸ್‌ ಅಂಥಹುದೇ ಇತರ ಮೂಲಭೂತವಾದಿ ಮತ್ತು ಸಮಾಜವಿರೋಧಿ ಶಕ್ತಿಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿತ್ತು.

ಮೀಸಲಾತಿ ಪ್ರಮಾಣ ಶೇ. 50ರಿಂದ 75%ಗೆ ಏರಿಕೆ

ರಾಜ್ಯದಲ್ಲಿ ಮೀಸಲಾತಿ ಪರಿಷ್ಕರಣೆ ಮೂಲಕ ಹೊಸ ಮಾಸ್ಟರ್‌ ಸ್ಟ್ರೋಕ್‌ ನೀಡಿದ ಬಿಜೆಪಿ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ತನ್ನ ಪ್ರತಿಬಾಣವನ್ನು ಹೂಡಿದಿದೆ. ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ. 50ರಿಂದ 75ಕ್ಕೆ ಏರಿಸುವುದಾಗಿ ಪ್ರಕಟಿಸಿದೆ.

ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ನೀಡಲಾಗಿರುವ ಮೀಸಲಾತಿಯನ್ನು ಹೆಚ್ಚಿಸುವ ಭರವಸೆಯನ್ನು ನೀಡಿದೆ.

ವಿಧಾನಸಭೆಯ ಮೊದಲ ಅಧಿವೇಶನದಲ್ಲೇ ಒಳಮೀಸಲಾತಿಗೆ ಸಂಬಂಧಿಸಿ ಸದಾಶಿವ ಆಯೋಗದ ವರದಿ ಮಂಡನೆ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ. ಎಸ್‌ಸಿ-ಎಸ್‌ಟಿ ಒಳಮೀಸಲಾತಿಗೆ ನ್ಯಾಯ ಒದಗಿಸಲು ಕಾಂಗ್ರೆಸ್‌ ಬದ್ಧ ಎಂದು ಪ್ರಕಟಿಸಲಾಗಿದೆ. ಜತೆ ಅಲ್ಪಸಂಖ್ಯಾತರ ಶೇ. 4 ಮೀಸಲಾತಿಯನ್ನು ಮರುಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ. ಸಿದ್ದರಾಮಯ್ಯ ಸರಕಾರದಲ್ಲಿ ಸಿದ್ಧಪಡಿಸಿದ್ದ ಜಾತಿ ಜನಗಣತಿ ವರದಿ ಅನುಷ್ಠಾನ ಮಾಡುವುದಾಗಿ ಪ್ರಕಟಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ರದ್ದು

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡುವುದಾಗಿ ಘೋಷಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿ ಇದೇ ವರ್ಷದಿಂದ ಶಿಕ್ಷಣ ಇಲಾಖೆ ಅನುಷ್ಠಾನ ಮಾಡಲಾಗುತ್ತಿದೆ. ಇದನ್ನು ಕಾಂಗ್ರೆಸ್‌ ತಡೆಯುತ್ತದೆ ಎಂದು ನೋಡಬೇಕಾಗಿದೆ.

ಇದನ್ನೂ ಓದಿ : Karnataka Election 2023 Live Updates: ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ; ಮೀಸಲಾತಿ ಪ್ರಮಾಣ ಶೇ 50 ರಿಂದ 75 ರಷ್ಟು ಹೆಚ್ಚಳ

Exit mobile version