Site icon Vistara News

Gujarat Summit: ನಿಮ್ಮ ಕನಸಿಗೆ ನಮ್ಮ ಸಂಕಲ್ಪ ಜತೆಗಿದೆ; ವಿಶ್ವದ ಹೂಡಿಕೆಗೆ ಮೋದಿ ಕರೆ

Narendra Modi

Vibrant Gujarat Summit: Narendra Modi Calls World To Invest In India

ಗಾಂಧಿನಗರ: “ಭಾರತವು ವಿಶ್ವದ ಬೆಳವಣಿಗೆ ವೇಗಕ್ಕೆ ಸರಿಸಮನಾಗಿದೆ. ಹಾಗಾಗಿ, ವಿದೇಶಗಳು ಕೂಡ ಭಾರತದಲ್ಲಿ ಹೂಡಿಕೆ ಮಾಡಲು ಇದು ಸಕಾಲವಾಗಿದೆ. ನಿಮ್ಮ ಕನಸು ನನಸು ಮಾಡಲು ನಮ್ಮ ಸಂಕಲ್ಪ ಹಾಗೂ ಸಾಮರ್ಥ್ಯ ಜತೆಗಿದೆ. ನೀವೆಲ್ಲ ಇಲ್ಲಿ ಬಂದು ಹೂಡಿಕೆ ಮಾಡಿ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದರು. ಗುಜರಾತ್‌ನ ಗಾಂಧಿನಗರದಲ್ಲಿ ಬುಧವಾರದಿಂದ (ಜನವರಿ 10) ಆರಂಭವಾದ ವೈಬ್ರಂಟ್‌ ಗುಜರಾತ್‌ ಗ್ಲೋಬಲ್‌ ಸಮಿಟ್‌ಗೆ (Vibrant Gujarat Global Summit 2024) ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

“ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶವಾಗಿದೆ. ಇಂದು ನಮ್ಮ ದೇಶದ ಪ್ರತಿಯೊಬ್ಬರೂ ಅಭಿವೃದ್ಧಿಗೆ ಯೋಗದಾನ ನೀಡುತ್ತಿದ್ದಾರೆ. ಇಂತಹ ಉತ್ಸಾಹ, ಸಾಮರ್ಥ್ಯದಿಂದಾಗಿ ಇಂದು ದೇಶವು ಜಗತ್ತಿನಲ್ಲೇ ವೇಗವಾಗಿ ಏಳಿಗೆ ಹೊಂದುತ್ತಿದೆ. ಆರ್ಥಿಕತೆ, ಬ್ಯಾಂಕಿಂಗ್‌, ಮೂಲ ಸೌಕರ್ಯ, ಜಿಡಿಪಿ ಬೆಳವಣಿಗೆ, ಗ್ರಾಮೀಣ ಅಭಿವೃದ್ಧಿ, ತಂತ್ರಜ್ಞಾನ ಸೇರಿ ಎಲ್ಲ ಕ್ಷೇತ್ರಗಳಲ್ಲೂ ನಾವು ಛಾಪು ಮೂಡಿಸುತ್ತಿದ್ದೇವೆ” ಎಂದು ಹೇಳಿದರು.

ಯುಎಇ ಅಧ್ಯಕ್ಷರನ್ನು ‘ಬ್ರದರ್‌’ ಎಂದ ಮೋದಿ

ವೈಬ್ರಂಟ್‌ ಗುಜರಾತ್‌ ಸಮಾವೇಶದಲ್ಲಿ ಪಾಲ್ಗೊಂಡ ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬ್ರದರ್‌ ಎಂದು ಕರೆದರು. “ಭಾರತ ಹಾಗೂ ಯುಎಇ ಮಧ್ಯೆ ಉತ್ತಮ ಬಾಂಧವ್ಯ ಇದೆ. ಭಾರತದ ಬಂದರು ಸೇರಿ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ ಇದೆ. ಇದಕ್ಕೆ ಶೇಖ್‌ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ ಅವರ ಯೋಗದಾನ ಹೆಚ್ಚಿದೆ. ಅವರಿಗೆ ನನ್ನ ಅಭಿನಂದನೆಗಳು” ಎಂದು ನರೇಂದ್ರ ಮೋದಿ ಹೇಳಿದರು.

3ನೇ ಆರ್ಥಿಕತೆ ದೇಶ; ಇದು ನನ್ನ ಗ್ಯಾರಂಟಿ

“ಭಾರತವು ಆರ್ಥಿಕವಾಗಿ ಬಲಾಢ್ಯವಾಗುತ್ತಿದೆ. ನಮ್ಮ ದೇಶವು ಕಳೆದ 10 ವರ್ಷಗಳ ಹಿಂದೆ ಜಗತ್ತಿನಲ್ಲಿ 11ನೇ ಬೃಹತ್‌ ಆರ್ಥಿಕ ರಾಷ್ಟ್ರವಾಗಿತ್ತು. ಆದರೆ, ದೇಶವೀಗ ಐದನೇ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ, ಭಾರತವು ಕೆಲವೇ ವರ್ಷಗಳಲ್ಲಿ ಮೂರನೇ ಬೃಹತ್‌ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ. ಯಾರು ಏನು ಬೇಕಾದರೂ ವಿಶ್ಲೇಷಣೆ ಮಾಡಲಿ, ಇದು ಮೋದಿ ನೀಡುತ್ತಿರುವ ಗ್ಯಾರಂಟಿಯಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಯುಎಇ ಅಧ್ಯಕ್ಷರ ಜತೆ ಗುಜರಾತ್‌ನಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಇಲ್ಲಿವೆ ಫೋಟೊಗಳು

“ಭಾರತವು ಮೂಲ ಸೌಕರ್ಯದಿಂದ ಹಿಡಿದು ತಂತ್ರಜ್ಞಾನದವರೆಗೆ ಸಕಲ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಡಿಜಿಟಲ್‌ ಇಂಡಿಯಾಗೆ ಆದ್ಯತೆ ನೀಡಲಾಗಿದೆ. ಕಳೆದ 10 ವರ್ಷದಲ್ಲಿ ಮೊಬೈಲ್‌ ಉತ್ಪಾದನೆ, ತಂತ್ರಜ್ಞಾನದ ಏಳಿಗೆ ಹೊಂದಿವೆ. ನವೋದ್ಯಮಗಳಿಗೆ ಎಕೊ ಸಿಸ್ಟಮ್‌ ರೂಪಿಸಿದ್ದೇವೆ. ದೇಶದ ರಫ್ತು ಪ್ರಮಾಣವೂ ದಾಖಲೆಯಾಗಿದೆ. ದೇಶದ ಜನರ ಜೀವನವೂ ಸುಗಮಗೊಳಿಸಿದ್ದೇವೆ. ಹಳ್ಳಿಗಳಿಗೆ ಆಪ್ಟಿಕಲ್‌ ಫೈಬರ್‌ ತಲುಪಿದೆ. ಜನ ಬಡತನದಿಂದ ಹೊರಬಂದಿದ್ದಾರೆ. ಹಾಗಾಗಿ, ಎಲ್ಲ ದೇಶಗಳೂ ಭಾರತದ ಏಳಿಗೆಯಲ್ಲಿ ಸಹಭಾಗಿತ್ವ ಹೊಂದಿ ಎಂದು ಮನವಿ ಮಾಡುತ್ತಿದ್ದೇನೆ. ನಿಮ್ಮೆಲ್ಲರಿಗೂ ಭಾರತ ಕೈ ಬೀಸಿ ಕರೆಯುತ್ತಿದೆ” ಎಂದು ಮೋದಿ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version