ನವ ದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ (Vice President Election 2022) ಬಿಜೆಪಿಯ ಅಭ್ಯರ್ಥಿ ಯಾರಾಗಬಹುದೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಶನಿವಾರ ನಡೆದ ಹೈ ವೊಲ್ಟೇಜ್ ಸಂಸದೀಯ ಸಮಿತಿಯ ಸಭೆಯಲ್ಲಿ ಈಗಾಗಲೇ ಪಕ್ಷದ ನಾಯಕರು ತೀರ್ಮಾನಿಸಿದಂತೆ ಪಶ್ಚಿಮ ಬಂಗಾದ ೨೭ನೇ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಜಗದೀಪ್ ಧನಕರ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ವಿಷಯವನ್ನು ಸಭೆಯ ನಂತರ ಪ್ರಕಟಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ “ರೈತನ ಮಗನನ್ನು ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ʼʼ ಎಂದು ಪ್ರಕಟಿಸುತ್ತಿದ್ದಂತೆಯೇ ಅವರ ಬಗೆಗಿನ ಕುತೂಹಲ ಹೆಚ್ಚಾಗಿದೆ.
ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅಂದರೆ ೨೦೧೯ರಿಂದ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೊಂದಿಗೆ ಸಂಘರ್ಷ ನಡೆಸುತ್ತಲೇ ದೇಶದ ಗಮನ ಸೆಳೆದಿದ್ದ ಜಗದೀಪ್ ಧನಕರ್ ಮೂಲತಃ ರಾಜಸ್ಥಾನದವರು. ಅವರ ಆಯ್ಕೆಯ ಹಿಂದೆ ರಾಜಸ್ಥಾನದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಲೆಕ್ಕಾಚಾರಗಳೂ ಬಿಜೆಪಿ ನಾಯಕರಿಗಿವೆ.
ಮಾಜಿ ಪ್ರಧಾನಿ ಚಂದ್ರಶೇಖರ್ ಸಚಿವ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ೭೧ ವರ್ಷದ ಜಗದೀಪ್ ಧನಕರ್, ರಾಜಸ್ಥಾನದ ಜುನ್‌ಜುನು ಲೋಕಸಭಾ ಕ್ಷೇತ್ರದಿಂದ ಆಗ ಆಯ್ಕೆಯಾಗಿದ್ದರು. ೧೯೯೩ರಿಂದ ೯೮ರ ವರೆಗೆ ಕಿಶಾನ್‌ಘರ್ ಕ್ಷೇತ್ರದ ಶಾಸಕರಾಗಿಯೂ ಕೆಲಸ ಮಾಡಿದ್ದರು.
೧೯೫೧ರ ಮೇ ೧೮ರಂದು ರಾಜಸ್ಥಾನದ ಕಿಥಾಣ ಎಂಬ ಹಳ್ಳಿಯಲ್ಲಿ ಜನಿಸಿದ ಅವರು, ಜೈಪುರ ವಿವಿಯಿಂದ ಕಾನೂನು ಪದವಿ ಪಡೆದಿದ್ದಾರೆ. ಜನತದಾಳದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಅವರು ಜನತಾದಳದಿಂದಲೇ ಲೋಕಸಭಾ ಸದಸ್ಯರಾಗಿ ಸಚಿವರೂ ಆಗಿದ್ದರು. ನಂತರ ಅವರು ಕರ್ನಾಟಕದಲ್ಲಿನ ಹಲವು ಜನತಾಪರಿವಾರದ ನಾಯಕರಂತೆಯೇ ರಾಜಸ್ಥಾನದಲ್ಲಿ ಬಿಜೆಪಿ ಸೇರಿ, ಈ ಹಿಂದೆ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಜೈಪುರ ಹೈಕೋರ್ಟ್‌ನ ವಕೀಲರ ಸಂಘದ ಅಧ್ಯಕ್ಷರಾಗಿದ್ದ ಧನಕರ್ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳುವವರೆಗೂ ವಕೀಲ ವೃತ್ತಿ ಬಿಟ್ಟಿರಲಿಲ್ಲ. ಸುಪ್ರೀಂ ಕೋರ್ಟ್‌ನ ವಕೀಲರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಧನಕರ್ ಆರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುದೇಶ್ ಎಂಬುವರನ್ನು ಮದುವೆಯಾಗಿದ್ದರು. ಸುದೇಶ್ ಧನಕರ್ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಅವರ ಮಗಳು ಕಮ್ನಾ ಸುಪ್ರೀಂಕೋರ್ಟ್‌ನ ಹೆಸರಾಂತ ವಕೀಲ ಕಾರ್ತಿಕೇಯ ವಾಜಪೇಯಿ ಅವರನ್ನು ಮದುವೆಯಾಗಿದ್ದಾರೆ.
ಇದನ್ನೂ ಓದಿ | Vice President Election 2022 | ಪಶ್ಚಿಮ ಬಂಗಾಲದ ರಾಜ್ಯಪಾಲ ಜಗದೀಪ್ ಧನಕರ್ ಬಿಜೆಪಿ ಅಭ್ಯರ್ಥಿ