ನವ ದೆಹಲಿ: ಆಗಸ್ಟ್ ೬ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಯಾರು ಎನ್ನುವುದನ್ನು ನಿರ್ಧರಿಸುವ ಅತ್ಯಂತ ಮಹತ್ವದ ಸಭೆ ಶನಿವಾರ ನಡೆಯಲಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ನಾಯಕರನ್ನು ಒಳಗೊಂಡ ಸಂಸದೀಯ ಮಂಡಳಿ ಸಭೆಯಲ್ಲಿ ಈ ವಿಚಾರ ಅಂತಿಮಗೊಳ್ಳಲಿದೆ.
ಎನ್‌ಡಿಎಯಲ್ಲಿರುವ ಬಿಜೆಪಿಯ ಮಿತ್ರ ಪಕ್ಷಗಳು ಕೂಡಾ ತಮ್ಮ ಆಯ್ಕೆಗಳನ್ನು ಕಳುಹಿಸಿಕೊಡಲಿದ್ದಾರೆ. ಇವುಗಳನ್ನೆಲ್ಲ ಪರಿಗಣಿಸಿ ಬಿಜೆಪಿ ಸಂಸದೀಯ ಮಂಡಳಿ ಅಂತಿಮ ತೀರ್ಮಾನವನ್ನು ಮಾಡಲಿದೆ.
ಸಹಮತಕ್ಕೆ ಪ್ರಯತ್ನ?
ಬಿಜೆಪಿ ಸಂಸದೀಯ ಮಂಡಳಿ ಸಭೆ ಒಬ್ಬ ಅಬ್ಯರ್ಥಿಯನ್ನು ಅಂತಿಮಗೊಳಿಸಿದ ಬಳಿಕ ಈ ಬಗ್ಗೆ ಪ್ರತಿಪಕ್ಷಗಳ ಜತೆಗೂ ಚರ್ಚಿಸಿ ಸಹಮತವನ್ನು ರೂಪಿಸುವ ಪ್ರಯತ್ನವೊಂದು ನಡೆಯಲಿದೆ ಎಂದು ಹೇಳಲಾಗಿದೆ. ಒಂದು ವೇಳೆ ಸಹಮತ ಮೂಡದಿದ್ದರೆ ಸ್ಪರ್ಧೆ ಖಚಿತವಾಗಲಿದೆ.
ಯಾರಿಗಿದೆ ಅವಕಾಶ?
ಎನ್‌ಡಿಎ ಅಭ್ಯರ್ಥಿ ಯಾರಾಗಬಹುದು ಎಂಬ ಬಗ್ಗೆ ಆಗಲೇ ಮೂರು ಹೆಸರುಗಳು ಚರ್ಚೆಯಲ್ಲಿವೆ. ಪಂಜಾಬಿನ ಮಾಜಿ ಮುಖ್ಯಮಂತ್ರಿಯಾಗಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್, ಕೇಂದ್ರದ ಮಾಜಿ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಮತ್ತು ಕೇರಳದ ರಾಜ್ಯಪಾಲರಾಗಿರುವ ಆರಿಫ್ ಮೊಹಮ್ಮದ್ ಖಾನ್ ಅವರ ಹೆಸರು ಪ್ರಮುಖವಾಗಿದೆ.
ಆಗಲೇ ನಾಮಪತ್ರ ಸಲ್ಲಿಕೆ ಆರಂಭ
ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜುಲೈ ೫ರಿಂದಲೇ ಆರಂಭವಾಗಿದ್ದು, ಜುಲೈ ೧೯ರವರೆಗೆ ಕಾಲಾವಕಾಶವಿದೆ. ಚುನಾವಣೆ ಆಗಸ್ಟ್ ೬ರಂದು ನಡೆಯಲಿದೆ. ರಾಜ್ಯಸಭೆಯ ಅಧ್ಯಕ್ಷರೂ ಆಗಲಿರುವ ಉಪರಾಷ್ಟ್ರಪತಿಗಳ ಆಯ್ಕೆಗೆ ಲೋಕಸಭಾ ಮತ್ತು ರಾಜ್ಯಸಭೆಯ ಸದಸ್ಯರು ಆಯ್ಕೆ ಮಾಡಲಿದ್ದಾರೆ. ರಾಷ್ಟ್ರಪತಿಗಳ ಚುನಾವಣೆಯಲ್ಲಿರುವಂತೆ ಇಲ್ಲಿ ಶಾಸಕರಿಗೆ ಮತಾಧಿಕಾರವಿರುವುದಿಲ್ಲ.
ಜುಲೈ ೧೮ರಂದು ರಾಷ್ಟ್ರಪತಿ ಚುನಾವಣೆ
ಜುಲೈ ೧೮ರಂದು ಸಂಸತ್ತಿನ ಅಧಿವೇಶನ ಆರಂಭವಾಗಲಿದ್ದು, ಅಂದೇ ರಾಷ್ಟ್ರಪತಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ದ್ರೌಪದಿ ಮುರ್ಮು ಅವರು ಎನ್‌ಡಿಎ ಅಭ್ಯರ್ಥಿಯಾಗಿದ್ದರೆ, ಮಾಜಿ ಸಚಿವ ಯಶ್ವಂತ್ ಸಿನ್ಹಾ ಅವರು ಪ್ರತಿಪಕ್ಷಗಳ ಅಭ್ಯರ್ಥಿಯಾಗಿದ್ದಾರೆ.
ಇದನ್ನೂ ಓದಿ| Explainer: ಶುರುವಾಗಿದೆ President Election ದಂಗಲ್