Site icon Vistara News

Gujarat Election | ಸ್ಪರ್ಧಿಸದಿರಲು ಮಾಜಿ ಸಿಎಂ ರೂಪಾನಿ ತೀರ್ಮಾನ, ಬಿಜೆಪಿಯ 20% ಶಾಸಕರಿಗಿಲ್ಲ ಟಿಕೆಟ್?

Vijay Rupani

ಗಾಂಧಿನಗರ: ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆಯಲಿ, ಆಗ ಹೊಸಬರಿಗೆ ಅವಕಾಶ ನೀಡುವುದು, ಅದರಲ್ಲೂ ಯುವಕರಿಗೆ ಮನ್ನಣೆ ನೀಡುವುದನ್ನು ಬಿಜೆಪಿ ರೂಢಿಸಿಕೊಂಡಿದೆ. ಅದರಲ್ಲೂ, ಗುಜರಾತ್‌ ವಿಧಾನಸಭೆ ಚುನಾವಣೆಯನ್ನು (Gujarat Election) ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಬಿಜೆಪಿಯು, ಹಲವು ರಣತಂತ್ರಗಳನ್ನು ರೂಪಿಸುತ್ತಿದೆ. ಇದರ ಭಾಗವಾಗಿಯೇ ಈ ಬಾರಿ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಹಾಗೂ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಸೇರಿ ಹಲವರು ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಹಾಗೆಯೇ, ಬಿಜೆಪಿಯ ಒಟ್ಟು ಶಾಸಕರಲ್ಲಿ ಶೇ.20ರಷ್ಟು ಶಾಸಕರಿಗೆ ಈ ಬಾರಿ ಟಿಕೆಟ್‌ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಪರ್ಧೆ ಮಾಡದಿರುವ ಕುರಿತು ವಿಜಯ್‌ ರೂಪಾನಿ ಅವರು ಮಾಹಿತಿ ನೀಡಿದ್ದಾರೆ. “ಎಲ್ಲರ ಸಹಕಾರದಿಂದ ನಾನು ಐದು ವರ್ಷ ಗುಜರಾತ್‌ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದೇನೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಹೊಸಬರಿಗೆ ಆದ್ಯತೆ ಸಿಗಬೇಕು ಎಂಬ ದೃಷ್ಟಿಯಿಂದ ಸ್ಪರ್ಧಿಸದಿರಲು ತೀರ್ಮಾನಿಸಿದ್ದೇನೆ. ದೆಹಲಿಯಲ್ಲಿರುವ ಪಕ್ಷದ ನಾಯಕರಿಗೆ ಇದರ ಕುರಿತು ಪತ್ರ ಬರೆದಿದ್ದೇನೆ. ಹೊಸ ಅಭ್ಯರ್ಥಿಯ ಗೆಲುವಿಗೆ ನಾನು ಶ್ರಮಿಸುತ್ತೇನೆ” ಎಂದು ತಿಳಿಸಿದ್ದಾರೆ.

ವಿಜಯ್‌ ರೂಪಾನಿ, ನಿತಿನ್‌ ಪಟೇಲ್‌ ಜತೆಗೆ ಬಿಜೆಪಿ ಹಿರಿಯ ನಾಯಕ, ಒಂಬತ್ತು ಬಾರಿಯ ಶಾಸಕ ಭೂಪೇಂದ್ರಸಿಂಗ್‌ ಚೂಡಾಸಮ ಅವರೂ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಇನ್ನು ಟಿಕೆಟ್‌ ಹಂಚಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಭೆ ನಡೆಸುತ್ತಿದ್ದು, ಈ ಕುರಿತು ಅಂತಿಮ ತೀರ್ಮಾನ ಹೊರಬೀಳಬೇಕಿದೆ. ಗುಜರಾತ್‌ನಲ್ಲಿ ಡಿಸೆಂಬರ್‌ 1 ಹಾಗೂ 5ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್‌ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ | Gujarat Election | ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಕಮಲ ಮುಡಿದ ಗುಜರಾತ್‌ನ ಪ್ರಮುಖ ನಾಯಕ

Exit mobile version