Site icon Vistara News

Vikram S Rocket | ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್ ಎಸ್ ಉಡಾವಣೆ ಸಕ್ಸೆಸ್! ಹೊಸ ಇತಿಹಾಸ ಸೃಷ್ಟಿ

Vikram S launched

ಹೈದರಾಬಾದ್:‌ ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸುವ ಕೇಂದ್ರ ಸರ್ಕಾರದ ಉದ್ದೇಶದಂತೆ ಶುಕ್ರವಾರ (ನವೆಂಬರ್‌ 18) ದೇಶದ ಮೊದಲ ಖಾಸಗಿ ರಾಕೆಟ್‌ ಉಡಾವಣೆಯಾಯಿತು. ತೆಲಂಗಾಣ ಮೂಲದ ಸ್ಕೈರೂಟ್‌ ಏರೋಸ್ಪೇಸ್‌‌ (Skyroot Aerospace) ಎಂಬ ಕಂಪನಿಯು ರಾಕೆಟ್‌ ಅನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ವಿಕ್ರಮ್‌ ಎಸ್‌ (Vikram S Rocket) ಎಂದು ನಾಮಕರಣ ಮಾಡಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ಮೂಲಕ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ನೆಟ್ಟಿತು. ಹಾಗೆಯೇ ಭಾರತೀಯ ಬಾಹ್ಯಾಕಾಶ ಸಂಸ್ಧೆ(ಇಸ್ರೋ)ಯ ಕೀರ್ತಿಗೆ ಮತ್ತೊಂದು ಗರಿ ಸೇರಿತು.

ವಿಕ್ರಮ್‌ ಎಸ್‌ ದೇಶದ ಮೊದಲ ಖಾಸಗಿ ರಾಕೆಟ್‌ ಎನಿಸಿದ್ದು, ಸ್ಕೈರೂಟ್‌ ಏರೋಸ್ಪೇಸ್‌ ಕಂಪನಿಯು ಇದನ್ನು ಅಭಿವೃದ್ಧಿಪಡಿಸಲು ಎರಡು ವರ್ಷ ತೆಗೆದುಕೊಂಡಿದೆ. ದೇಶದ ಮೊದಲ ಖಾಸಗಿ ರಾಕೆಟ್ ಯಶಸ್ಸಿನ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿ, ”ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ ವಿಕ್ರಮ್-ಎಸ್ ಇಂದು ಯಶಸ್ವಿಯಾಗಿ ನಭಕ್ಕೆ ಹಾರಿದ್ದು ಭಾರತದ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ. ಭಾರತದಲ್ಲಿ ಖಾಸಗಿ ಬಾಹ್ಯಾಕಾಶ ಉದ್ಯಮದ ಪಯಣದಲ್ಲಿ ಇದೊಂದು ಮಹತ್ವದ ಮೈಲುಗಲ್ಲಾಗಿದೆ,” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಇದು ಆರಂಭವಷ್ಟೇ!
ಭಾರತದ ಮೊದಲ ಖಾಸಗಿ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದೇವೆ. ಇದು ನವ ಭಾರತದ ಹೊಸ ಸಂಕೇತವಾಗಿದೆ ಮತ್ತು ಇದು ಭವಿಷ್ಯಾದ ‘ಆರಂಭ’ವಷ್ಟೇ ಎಂದು ಸ್ಕೈರೂಟ್ ಏರೋಸ್ಪೇಸ್ ಸಹ ಸಂಸ್ಥಾಪಕ ಪವನ್ ಕುಮಾರ್ ಚಂದನ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಒತ್ತಾಸೆ
ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿ ಸಹಭಾಗಿತ್ವ ಇರಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಇದನ್ನು ಸಾಕಾರಗೊಳಿಸುವ ದಿಸೆಯಲ್ಲಿ ಮೊದಲ ಬಾರಿಗೆ ಇಸ್ರೊ ಹಾಗೂ ಸ್ಕೈರೂಟ್‌ ಏರೋಸ್ಪೇಸ್‌ ಕಂಪನಿಯು ಒಡಂಬಡಿಕೆಗೆ (MoU) ಸಹಿ ಹಾಕಿವೆ. ಒಡಂಬಡಿಕೆಯಂತೆ ಸ್ಕೈರೂಟ್‌ ಏರೋಸ್ಪೇಸ್‌ ಕಂಪನಿಯು ರಾಕೆಟ್‌ ಅಭಿವೃದ್ಧಿಪಡಿಸಿದ್ದು, ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ವಿಕ್ರಮ್‌ ಸಾರಾಭಾಯಿ ಅವರ ಹೆಸರನ್ನು ರಾಕೆಟ್‌ಗೆ ಇಟ್ಟಿದೆ. ಹಾಗೆಯೇ, ತನ್ನ ಮೊದಲ ಮಿಷನ್‌ಗೆ ‘ಪ್ರಾರಂಭ್’‌ ಎಂದು ಹೆಸರಿಸಿದೆ.

ವಿಕ್ರಮ್‌ ಎಸ್‌ ರಾಕೆಟ್‌ ಒಟ್ಟು 80 ಕೆಜಿ ತೂಕದ ಮೂರು ಪೇಲೋಡ್‌ಗಳನ್ನು ಹೊತ್ತು ನಭಕ್ಕೆ ಹಾರಿದೆ. ಮೂರರಲ್ಲಿ ಎರಡು ಪೇಲೋಡ್‌ ಭಾರತದ್ದಾದರೆ, ಇನ್ನೊಂದು ವಿದೇಶದ್ದಾಗಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 120 ಕಿ.ಮೀ ಎತ್ತರಕ್ಕೆ ರಾಕೆಟ್‌ ಹಾರಲಿದೆ. ಕಾರ್ಬನ್‌ ಕಾಂಪೊಸಿಟ್‌ ಸ್ಟ್ರಕ್ಚರ್ಸ್‌ ಹಾಗೂ 3ಡಿ ಪ್ರಿಂಟೆಡ್‌ ಕಾಂಪೊನೆಂಟ್‌ಗಳನ್ನು ಬಳಸಿ ರಾಕೆಟ್‌ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಇನ್ನೂ ವಿವಿಧ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ನವೆಂಬರ್‌ 15ರಂದೇ ರಾಕೆಟ್‌ ಉಡಾವಣೆಯಾಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ನವೆಂಬರ್‌ 18ಕ್ಕೆ ಮುಂದೂಡಲಾಗಿತ್ತು.

ಭವಿಷ್ಯದ ಯೋಜನೆಗಳೇನು?
ಸ್ಕೈರೂಟ್‌ ಏರೋಸ್ಪೇಸ್‌ ಕಂಪನಿಯು ವಿಕ್ರಮ್‌ ಎಸ್‌ ರಾಕೆಟ್‌ ಉಡಾವಣೆ ಮಾಡುವ ಜತೆಗೆ ಭವಿಷ್ಯದಲ್ಲೂ ಹಲವು ಯೋಜನೆಗಳನ್ನು ಹೊಂದಿದೆ. ವಿಕ್ರಮ್‌ I, ವಿಕ್ರಮ್‌ II ಹಾಗೂ ವಿಕ್ರಮ್‌ III ಎಂಬ ಮಿಷನ್‌ಗಳ ಜಾರಿಗೆ ಸ್ಕೈರೂಟ್‌ ಯೋಜನೆ ರೂಪಿಸಿದೆ. ವಿಕ್ರಮ್‌ I ಮಿಷನ್‌ಅನ್ನು 2023ರ ದ್ವಿತೀಯಾರ್ಧದಲ್ಲಿ ಜಾರಿಗೊಳಿಸುವ ಯೋಜನೆ ಇದೆ. ಹಾಗೆಯೇ, ಒಂದು ದಶಕದಲ್ಲಿ ಸ್ಕೈರೂಟ್‌ ಏರೋಸ್ಪೇಸ್‌ ಕಂಪನಿಯು 20 ಸಾವಿರಕ್ಕೂ ಅಧಿಕ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿ ಹೊಂದಿದೆ.

ಇದನ್ನೂ ಓದಿ | ವಿಸ್ತಾರ Explainer | ಸ್ಕೈರೂಟ್ ಉಡಾಯಿಸಲಿದೆ ಭಾರತದ ಪ್ರಥಮ ಖಾಸಗಿ ಸ್ವದೇಶಿ ರಾಕೆಟ್

Exit mobile version