ವಿನಾಯಕ ದಾಮೋದರ ಸಾವರ್ಕರ್ ಅವರನ್ನು ʼಸ್ವಾತಂತ್ರ್ಯವೀರʼ ಎಂದು ಕರೆಯಲಾಗಿದೆ. ಮಹಾತ್ಮ ಗಾಂಧಿ ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ಎದ್ದು ನಿಲ್ಲುವ ಎಷ್ಟೋ ಮೊದಲೇ ಭಾರತದ ಸ್ವಾತಂತ್ರ್ಯ ಚಳವಳಿಗೆ ಉಗ್ರವಾದ ಒಂದು ಸ್ವರೂಪವನ್ನು ನೀಡಿದವರು ಸಾವರ್ಕರ್. ಇವರ ನೇತೃತ್ವದಲ್ಲಿ ಹಲವಾರು ಕ್ರಾಂತಿಕಾರಿಗಳು ರೂಪುಗೊಂಡು, ಬ್ರಿಟಿಷ್ ಆಡಳಿತಕ್ಕೆ ನಡುಕು ಹುಟ್ಟಿಸಿದ್ದರು.
ಇಂಥ ಸ್ವಾತಂತ್ರ್ಯವೀರ, ಅದಮ್ಯ ಚೇತನದ ಬಗ್ಗೆ ನೀವು ತಿಳಿದಿರಬೇಕಾದ ಹದಿಮೂರು ಸಂಗತಿಗಳು ಇಲ್ಲಿವೆ.
- ವಿನಾಯಕರು ಮೇ 28, 1883ರಲ್ಲಿ ಜನಿಸಿದರು. ಸಂಸ್ಕೃತ ವಿದ್ವಾಂಸರ ಪೀಳಿಗೆಯಲ್ಲಿ ಹುಟ್ಟಿದ ಸಾವರ್ಕರರಿಗೆ ಇತಿಹಾಸ, ರಾಜನೀತಿ, ಸಾಹಿತ್ಯ, ಭಾರತೀಯ ಸಂಸ್ಕೃತಿಗಳಲ್ಲಿ ತುಂಬಾ ಆಸಕ್ತಿಯಿತ್ತು. ದಾಮೋದರಪಂತ ಮತ್ತು ರಾಧಾಬಾಯಿಯ ನಾಲ್ಕು ಮಕ್ಕಳಲ್ಲಿ ಒಬ್ಬರಾದ ವಿನಾಯಕ ಹುಟ್ಟಿದ್ದು ಮಹಾರಾಷ್ಟ್ರದ ನಾಸಿಕದಲ್ಲಿ. ಒಂಬತ್ತನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, 16ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡು ಬೆಳೆದರು.
- 1901ರಲ್ಲಿ ಅವರಿಗೆ ಯಮುನಾಬಾಯಿ ಅವರೊಂದಿಗೆ ಮದುವೆಯಾಯಿತು. 1906ರಲ್ಲಿ ಕಾನೂನು ಶಾಸ್ತ್ರ ವ್ಯಾಸಂಗಕ್ಕಾಗಿ ಲಂಡನ್ಗೆ ತೆರಳಿದ್ದರು.
- ಸಾವರ್ಕರ್ ವಿದ್ಯಾರ್ಥಿಯಾಗಿದ್ದಾಗ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದ್ದರು. ನಂತರ ಬಾಲಗಂಗಾಧರ ತಿಲಕ್ ಅವರ ಸ್ವರಾಜ್ಯ ಪಕ್ಷದ ಸದಸ್ಯರಾದರು. ಲಂಡನ್ನಿನಲ್ಲಿ ಕಾನೂನು ಶಾಸ್ತ್ರ ಕಲಿತರು. ಆಗಲೇ Free India Society ಸ್ಥಾಪಿಸಿ, ಭಾರತೀಯ ಹಬ್ಬಗಳನ್ನು, ಸ್ವಾತಂತ್ರ್ಯ ಸಂಗ್ರಾಮದ ಮೈಲಿಗಲ್ಲುಗಳನ್ನೂ ಆಚರಿಸತೊಡಗಿದರು. ಈ ಸಂಸ್ಥೆಯ ಮೇಲೆ ಬ್ರಿಟಿಷರ ಕೆಂಗಣ್ಣು ಬಿತ್ತು.
- 1908ರಲ್ಲಿ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ- 1857” ಕೃತಿಯನ್ನು ಬರೆದರು. ಬ್ರಿಟಿಷ್ ಸರಕಾರ ತಕ್ಷಣವೇ ಭಾರತ ಮತ್ತು ಬ್ರಿಟನ್ನುಗಳಲ್ಲಿ ಅದನ್ನು ನಿಷೇಧಿಸಿತು. ಮುಂದೆ ಭಿಕಾಜಿ ಕಾಮಾ ಅದನ್ನು ಹಾಲೆಂಡಿನಲ್ಲಿ ಪ್ರಕಾಶಿಸಿದರು. ಅಲ್ಲಿಂದ ಅದನ್ನು ಗುಪ್ತವಾಗಿ ಭಾರತಕ್ಕೆ ಸಾಗಿಸಿ ಬ್ರಿಟಿಷರ ವಿರುದ್ಧ ಸಕ್ರಿಯರಾಗಿದ್ದ ಕ್ರಾಂತಿಕಾರಿಗಳಿಗೆ ಹಂಚಲಾಯಿತು.
- 1909ರಲ್ಲಿ ಸಾವರ್ಕರರ ನಿಕಟ ಅನುಯಾಯಿ ಮದನಲಾಲ್ ಧಿಂಗ್ರಾ, ಆಗಿನ ವೈಸರಾಯ್ ಲಾರ್ಡ್ ಕರ್ಜನ್ನನ ವಧೆಯ ವಿಫಲ ಪ್ರಯತ್ನ ಮಾಡಿ, ಸರ್ ವಾಯ್ಲೀ ಎಂಬ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ. ನಾಸಿಕ್ ಪಟ್ಟಣದ ಕಲೆಕ್ಟರ್ ಎ.ಎಂ.ಟಿ. ಜಾಕ್ಸನ್ ಯುವಕನೊಬ್ಬನ ಗುಂಡಿಗೆ ಬಲಿಯಾದಾಗ, ಸಾವರ್ಕರ್ ಬ್ರಿಟಿಷರ ಬಂಧನಕ್ಕೆ ಒಳಗಾದರು.
- 1910ರಲ್ಲಿ ಪ್ಯಾರಿಸಿನಲ್ಲಿ ಅವರನ್ನು ಬಂಧಿಸಲಾಯಿತು. ಮಾರ್ಸೇಲ್ಸ್ನಿಂದ ಪರಾರಿಯಾಗುವ ಅವರ ಪ್ರಯತ್ನ ವಿಫಲವಾಯಿತು. ಅವರನ್ನು ಹಿಡಿದು ಮುಂಬಯಿಗೆ ತಂದು, ಯೆರವಡಾ ಜೈಲಿನಲ್ಲಿಡಲಾಯಿತು.
- ನಂತರ ಅವರ ವಿರುದ್ಧ ಮೊಕದ್ದಮೆ ನಡೆಸಿ ಕುಪ್ರಸಿದ್ಧ ಅಂಡಮಾನಿನ ಜೈಲಿನಲ್ಲಿ 50 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. 1911ರ ಜುಲೈನಲ್ಲಿ ಅವರನ್ನು ಅಂಡಮಾನಿಗೆ ಸಾಗಿಸಲಾಯಿತು.
- ಜೈಲಿನಲ್ಲಿ ಅವರ ಆರೋಗ್ಯ ಕೆಡುತ್ತಿತ್ತು. ಮತ್ತೆ ಭಾರತದ ಭೂಮಿಗೆ ಹಿಂದಿರುಗಿ , ಬ್ರಿಟಿಷರ ವಿರುದ್ಧ ಹೋರಾಟಕ್ಕೆ ತೊಡಗುವ ಚಾಣಾಕ್ಷ ಉದ್ದೇಶದಿಂದ ಸಾವರ್ಕರ್ 1911 ಹಾಗೂ 1913ರಲ್ಲಿ ಬ್ರಿಟಿಷ್ ಸರಕಾರಕ್ಕೆ ಕ್ಷಮಾ ಅರ್ಜಿ ಸಲ್ಲಿಸಿದರು.
- ಮೇ 12, 1921ರಂದು ಸಾವರ್ಕರರನ್ನು ರತ್ನಗಿರಿ ಜೈಲಿಗೆ, ಅಲ್ಲಿಂದ ಯೆರವಡಾ ಜೈಲಿಗೆ ಸಾಗಿಸಲಾಯಿತು. ರತ್ನಗಿರಿಯ ಜೈಲಿನಲ್ಲಿದ್ದಾಗ ಅವರು “ಹಿಂದುತ್ವ” ಕೃತಿ ಬರೆದರು. ಅವರ ಚಟುವಟಿಕೆಗಳಿಗೆ ತೀವ್ರ ನಿರ್ಬಂಧಗಳನ್ನು ಹಾಕಿ ಜನವರಿ 6, 1924ರಂದು ಅವರನ್ನು ಬಿಡುಗಡೆ ಮಾಡಲಾಯಿತು.
- ಅವರ ಮರಾಠಿಯಲ್ಲಿ “ಕಮಲಾ”, “ನನ್ನ ಜೀವಾವಧಿ ಶಿಕ್ಷೆ”, ಹಾಗೂ ಅತ್ಯಂತ ಪ್ರಸಿದ್ಧವಾದ “1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಕೃತಿಗಳನ್ನು ಬರೆದರು. ಅಂಡಮಾನಿನ ಜೈಲಿನಲ್ಲಿ ಭಾರತೀಯ ಕೈದಿಗಳ ಪಾಡನ್ನು ಪ್ರತಿಬಿಂಬಿಸುವ “ಕಾಲಾಪಾನಿ” ಅವರ ಇನ್ನೊಂದು ಗಮನಾರ್ಹ ಕೃತಿ. ಭಾರತದ ಇತಿಹಾಸದ ಆರು ಸುವರ್ಣ ಯುಗಗಳು, ಹಿಂದುತ್ವ ಇನ್ನೆರಡು ಮಹತ್ವದ ಕೃತಿಗಳು.
- ಅಂಡಮಾನಿನ ಜೈಲಿನಲ್ಲಿದ್ದ ದೀರ್ಘಕಾಲದಲ್ಲಿ ಅವರಿಗೆ ಪೆನ್ ಹಾಗೂ ಕಾಗದವನ್ನು ನಿಷೇಧಿಸಲಾಗಿತ್ತು. ಸಾವರ್ಕರ್ ತಮ್ಮ ಗೀತೆಗಳನ್ನು ಜೈಲಿನ ಗೋಡೆಗಳ ಮೇಲೆ ಮುಳ್ಳಿನಿಂದ, ಕಲ್ಲುತುಂಡುಗಳಿಂದ ಕೊರೆದರು. ತಾವು ಬರೆದ ಹತ್ತು ಸಾವಿರಕ್ಕೂ ಹೆಚ್ಚಿನ ಪಂಕ್ತಿಗಳನ್ನು ವರ್ಷಾವಧಿ ನೆನಪಿಟ್ಟುಕೊಂಡಿದ್ದರು.
- ಹಿಂದೂ ಮಹಾಸಭೆಯ ಮೂಲಕ ಸಾವರ್ಕರ್ ಅಲ್ಪಸಂಖ್ಯಾತರ ಹಾಗೂ ದಲಿತರ ಹಿತಾಸಕ್ತಿಗಳಿಗಾಗಿ, ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅಂತರ್ಜಾತೀಯ ವಿವಾಹ, ಅಸ್ಪೃಶ್ಯತೆ ನಿವಾರಣೆಯನ್ನು ಪ್ರೋತ್ಸಾಹಿಸಿದ್ದರು.
- ಮಹಾತ್ಮ ಗಾಂಧಿ ಅವರ ಕಟು ಟೀಕಾಕಾರರಾಗಿದ್ದರು. ಹೀಗಾಗಿ ಗಾಂಧೀಜಿ ಹತ್ಯೆಯಾದಾಗ, ಅವರನ್ನು ಸಿಲುಕಿಸಲು ಸರಕಾರ ಪ್ರಯತ್ನಪಟ್ಟಿತು. ಆದರೆ ಸಾವರ್ಕರ್ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ದೋಷಮುಕ್ತರಾದರು.