Site icon Vistara News

Viral News: 4 ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪಡೆದ ವ್ಯಕ್ತಿಯ ಉದ್ಯೋಗ ತರಕಾರಿ ಮಾರಾಟ; ಕಾರಣವೇನು?

phd

phd

ಚಂಡೀಗಢ: ಯಾವ ಕೆಲಸವೂ ಕೀಳಲ್ಲ; ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವವಿದೆ ಎನ್ನುವ ಮಾತನ್ನು ಅಕ್ಷರಶಃ ಸಾಬೀತು ಪಡಿಸಿದ್ದಾರೆ ಈ ವ್ಯಕ್ತಿ. ನಾಲ್ಕು ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಹೊಂದಿರುವ ಪಂಜಾಬ್‌ನ ವ್ಯಕ್ತಿಯೊಬ್ಬರು ಜೀವನೋಪಾಯಕ್ಕಾಗಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. 39 ವರ್ಷದ ಡಾ. ಸಂದೀಪ್ ಸಿಂಗ್ (Dr. Sandeep Singh) ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ (Punjabi University in Patiala) ಗುತ್ತಿಗೆ ಪ್ರಾಧ್ಯಾಪಕರಾಗಿದ್ದರು. ಆದರೆ ಕೆಲವು ಅನಿವಾರ್ಯ ಅವರು ಆ ಉದ್ಯೋಗ ತೊರೆಯ ಬೇಕಾಯಿತು. ಸದ್ಯ ಅವರು ಜೀವನೋಪಾಯಕ್ಕಾಗಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಈ ವಿಚಾರ ವೈರಲ್‌ ಆಗಿದೆ (Viral News).

11 ವರ್ಷ ಅತಿಥಿ ಪ್ರಾಧ್ಯಾಪಕ

ಡಾ. ಸಂದೀಪ್ ಸಿಂಗ್ ಸುಮಾರು 11 ವರ್ಷಗಳ ಕಾಲ ಅತಿಥಿ ಪ್ರಾಧ್ಯಾಪಕರಾಗಿದ್ದರು. ಪಂಜಾಬ್ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು. ಕಾನೂನು ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಜತೆಗೆ ಪಂಜಾಬಿ, ಪತ್ರಿಕೋದ್ಯಮ, ರಾಜಕೀಯ ಹಾಗೂ ವಿಜ್ಞಾನ ಸೇರಿದಂತೆ ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ವಿಶೇಷ ಎಂದರೆ ಅವರು ಈಗಲೂ ತಮ್ಮ ಬಿಡುವಿನ ವೇಳೆಯನ್ನು ಅಧ್ಯಯನಕ್ಕೆ ಮೀಸಲಿಡುತ್ತಿದ್ದಾರೆ.

ಉದ್ಯೋಗ ತೊರೆಯಲು ಕಾರಣವೇನು?

ಕೆಲವು ಸಮಯಗಳ ಹಿಂದೆ ಸಂಬಳ ಕಡಿತ ಮತ್ತು ಅನಿಯಮಿತ ವೇತನದಂತಹ ಸಂಕಷ್ಟಗಳು ಎದುರಾಗಿದ್ದರಿಂದ ಅವರು ತಮ್ಮ ಅಧ್ಯಾಪನ ಉದ್ಯೋಗವನ್ನು ತೊರೆದಿದ್ದರು. ಈ ಬಗ್ಗೆ ಮಾತನಾಡುವ ಡಾ. ಸಂದೀಪ್ ಸಿಂಗ್, ʼʼಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿರಲಿಲ್ಲ. ಅಲ್ಲದೆ ಇದ್ದ ಸಂಬಳದಿಂದಲೂ ಕಡಿತ ಮಾಡಲಾಗುತ್ತಿತ್ತು. ಹೀಗಾಗಿ ಜೀವನ ನಡೆಸುವುದು ಕಷ್ಟವಾಯಿತು. ಅದೇ ಕಾರಣಕ್ಕಾಗಿ ಕುಟುಂಬದ ಪೋಷಣೆಗೆ ತರಕಾರಿ ಮಾರಾಟ ಮಾಡಲು ಆರಂಭಿಸಿದೆʼʼ ಎಂದು ವಿವರಿಸಿದ್ದಾರೆ.

ಮನೆ ಮನೆಗೆ ತೆರಳಿ ತರಕಾರಿ ಮಾರಾಟ

ಗಾಡಿಯಲ್ಲಿ ತರಕಾರಿ ತುಂಬಿಕೊಂಡು ಡಾ. ಸಂದೀಪ್ ಸಿಂಗ್ ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಾರೆ. ಅವರು ತರಕಾರಿ ಗಾಡಿಯಲ್ಲಿ ʼಪಿಎಚ್‌ಡಿ ಸಬ್ಜಿ ವಾಲಾʼ ಎನ್ನುವ ಬೋರ್ಡ್‌ ಅಳವಡಿಸಿದ್ದು, ಸದ್ಯ ಈ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ʼʼಪ್ರತಿದಿನ ತರಕಾರಿ ಮಾರಲು ಮನೆ ಮನೆಗೆ ತೆರಳುತ್ತೇನೆ. ಪ್ರೊಫೆಸರ್ ಆಗಿದ್ದಕ್ಕಿಂತ ತರಕಾರಿ ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತಿದ್ದೇನೆʼʼ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ತರಕಾರಿ ಮಾರಾಟ ಮಾಡಿ ಮನೆಗೆ ಹಿಂದಿರುಗುವ ಅವರು, ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಾರೆ.

ಇದನ್ನೂ ಓದಿ: Viral Video: ʼಇರುವೆʼ ಜ್ಯೂಸ್‌ನಲ್ಲೂ ನೀ ಇರುವೆ; ಪಾನೀಯ ತಯಾರಿಕೆಗೆ ಕಪ್ಪಿರುವೆ ಬಳಕೆ!

ಕಷ್ಟಪಟ್ಟು ಓದಿ, ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿ ಬೋಧಕರಾಗಿದ್ದ ಡಾ. ಸಂದೀಪ್ ಸಿಂಗ್ ಈಗ ಅನಿವಾರ್ಯ ಕಾರಣದಿಂದ ತರಕಾರಿ ಮಾರಾಟ ಮಾಡುತ್ತಿದ್ದರೂ ಆ ಬಗ್ಗೆ ಅವರಿಗೆ ಸ್ವಲ್ಪವೂ ಬೇಸರ ಇಲ್ಲ. ಅಲ್ಲದೆ ಇದು ಅವರ ಉತ್ಸಾಹವನ್ನು ಒಂದಿನಿತೂ ಕುಗ್ಗಿಸಿಲ್ಲ. ಹಣ ಗಳಿಸಿ ಮುಂದೊಂದು ದಿನ ಸ್ವಂತ ಟ್ಯೂಷನ್ ಸೆಂಟರ್ ತೆರೆಯುವ ಗುರಿ ಹೊಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version