Site icon Vistara News

Viral News: ಗೇಟ್‌ಗೆ ತೂಗು ಹಾಕಿ ನಾಯಿಯನ್ನು ಕೊಂದ ಕಟುಕರು; ಸಿಸಿ ಟಿವಿ ಕ್ಯಾಮೆರಾದಲ್ಲಿ ನೀಚ ಕೃತ್ಯ ಸೆರೆ

dog mp

dog mp

ಭೋಪಾಲ್‌: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶ್ವಾನ ತರಬೇತುದಾರ ತನ್ನ ಇಬ್ಬರು ಸಿಬ್ಬಂದಿಯೊಂದಿಗೆ ಸೇರಿ ನಾಯಿಯೊಂದನ್ನು ತರಬೇತಿ ಕೇಂದ್ರದ (Training center) ಗೇಟ್‌ಗೆ ತೂಗು ಹಾಕಿ ಕೊಂದಿರುವ ಭೀಕರ ಘಟನೆ (kill dog by hanging it) ನಡೆದಿದ್ದು, ಮೂವರನ್ನು ಬಂಧಿಸಲಾಗಿದೆ. ಸದ್ಯ ಈ ಕುರಿತಾದ ವಿಡಿಯೊ ವೈರಲ್‌ ಆಗಿದೆ (Viral News).

ರವಿ ಕುಶ್ವಾಹ, ನೇಹಾ ತಿವಾರಿ ಮತ್ತು ತರುಣ್ ದಾಸ್ ಮತ್ತಿತರರು ನಾಯಿಯನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಶ್ವಾನದ ಮಾಲಕ, ಉದ್ಯಮಿ ನಿಲೇಶ್ ಜೈಸ್ವಾಲ್ ನಾಯಿಯನ್ನು ನಾಲ್ಕು ತಿಂಗಳ ಕಾಲದ ತರಬೇತಿಗಾಗಿ ಆಲ್ಫಾ ಡಾಗ್ ಟ್ರೈನಿಂಗ್ ಮತ್ತು ಬೋರ್ಡಿಂಗ್ ಸೆಂಟರ್ ತರಬೇತಿ ಕೇಂದ್ರಕ್ಕೆ ಸೇರಿಸಿದ್ದರು.

ಜೈಸ್ವಾಲ್‌ ತಮ್ಮ ಶ್ವಾನವನ್ನು ಮೇ ತಿಂಗಳಲ್ಲಿ ಈ ತರಬೇತಿ ಕೇಂದ್ರಕ್ಕೆ ಸೇರಿಸಿದ್ದರು. ತಿಂಗಳಿಗೆ 13,000 ರೂ. ಫೀಸ್‌ ಚಾರ್ಜ್‌ ಮಾಡಲಾಗಿತ್ತು. ಸೆಪ್ಟಂಬರ್‌ನಲ್ಲೇ ತರಬೇತಿ ಅವಧಿ ಕೊನೆಗೊಂಡಿತ್ತು. ಜೈಸ್ವಾಲ್ ತನ್ನ ನಾಯಿಯನ್ನು ಮನೆಗೆ ಕರೆದೊಯ್ಯಲು ಕೇಂದ್ರವನ್ನು ಸಂಪರ್ಕಿಸಿದಾಗ ನಾಯಿ ಸತ್ತಿದೆ ಎಂದು ತಿಳಿಸಿದ್ದರು. ಅನುಮಾನಗೊಂಡ ಜೈಸ್ವಾಲ್ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಬೇಕೆಂದು ಆಗ್ರಹಿಸಿದ್ದರು. ಅಲ್ಲದೆ ದೂರು ನೀಡಿದ್ದರು. ಅದರ ಮೇರೆಗೆ ಮಿಸ್ರೋಡ್ ಪೊಲೀಸರು ತನಿಖೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆಯ ದಿನದ ಸಿಸಿಟಿವಿ ವಿಡಿಯೊವನ್ನು ಅಳಿಸಲಾಗಿದೆ ಎಂದು ತಿಳಿದುಬಂತು ಎಂದು ಅಧಿಕಾರಿಗಳು ತಿಳಿಸಿದರು.

ನಂತರ ಪೊಲೀಸರು ಹಾರ್ಡ್ ಡ್ರೈವ್ ಅನ್ನು ವಶಪಡಿಸಿಕೊಂಡು ಅಕ್ಟೋಬರ್ 9ರ ಘಟನೆಯ ದಿನದ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದರು. ಇದರಲ್ಲಿ ಕುಶ್ವಾಹ, ತಿವಾರಿ ಮತ್ತು ದಾಸ್ ನಾಯಿಯನ್ನು ಕಟ್ಟಿ ಗೇಟ್‌ಗೆ ತೂಗು ಹಾಕುತ್ತಿರುವುದು ಕಂಡು ಬಂದಿದೆ. ನಾಯಿ ಸುಮಾರು 10 ನಿಮಿಷಗಳ ಕಾಲ ಪರದಾಡಿ ಉಸಿರುಗಟ್ಟಿ ಮೃತಪಟ್ಟಿತು.

ಪ್ರಾಣಿ ಕ್ರೌರ್ಯ ಸೇರಿದಂತೆ ವಿವಿಧ ಆರೋಪಗಳ ಮೇಲೆ ಮೂವರನ್ನು ಬಂಧಿಸಲಾಗಿದೆ. ನಾಯಿ ಆಕ್ರಮಣಕಾರಿ ಮನೋಭಾವ ಹೊಂದಿತ್ತು ಮತ್ತು ತರಬೇತಿಯ ಭಾಗವಾಗಿ ಅದನ್ನು ಗೇಟಿಗೆ ಕಟ್ಟಲು ಪ್ರಯತ್ನಿಸಿದೆವು. ಆದರೆ ನಾಯಿಯ ಕುತ್ತಿಗೆಯ ಹಗ್ಗವು ಬಿಗಿಯಾಗಿದ್ದರಿಂದ ಅದು ಪ್ರಜ್ಞಾಹೀನವಾಯಿತು ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Viral Video: ಕಾಳಿಂಗ ಸರ್ಪಕ್ಕೇ ಸ್ನಾನ ಮಾಡಿಸಿದ ರಣಧೀರ!

ಕೂಡಲೇ ನಾಯಿಯ ಆರೈಕೆ ಮಾಡಲಾಯಿತು. ಆದರೆ ಎಷ್ಟು ಪ್ರಯತ್ನಿಸಿದೂ ಅದು ಪ್ರತಿಕ್ರಿಯಿಸಲಿಲ್ಲ. ನಂತರ ನಾಯಿಯನ್ನು ಪಶುವೈದ್ಯರ ಬಳಿಗೆ ಕರೆದೊಯ್ದೆವು. ಅಲ್ಲಿ ವೈದ್ಯರು ಆ ಶ್ವಾನ ಸತ್ತಿದೆ ಎಂದು ಘೋಷಿಸಿದರು ಎಂದು ಆರೋಪಿಗಳು ತಿಳಿಸಿದ್ದಾರೆ. ಬಳಿಕ ಷರತ್ತು ಮೇರೆಗೆ ಆರೋಪಿಗಳನ್ನು ಬೇಲ್‌ ಮೂಲಕ ಬಿಡುಗಡೆ ಮಾಡಲಾಯಿತು.

“ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದರು. ಕೇಂದ್ರದಲ್ಲಿ ಇನ್ನೂ 10ರಿಂದ 15 ನಾಯಿಗಳಿವೆ ಮತ್ತು ಪೊಲೀಸರು ಅವುಗಳ ಮಾಲಕರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸ್ಥಳೀಯ ಎನ್‌ಜಿಒಗೂ ಮಾಹಿತಿ ನೀಡಲಾಯಿತು. ಮಾಲಕರು ನಾಯಿಯನ್ನು ಮರಳಿ ಕರೆದುಕೊಂಡು ಹೋಗಲು ತಡವಾಗಿದ್ದರೆ, ಎನ್‌ಜಿಒ ರಕ್ಷಿಸಲಿದೆ. ಹೆಚ್ಚಿನ ದೂರು ಬಂದರೆ, ವಿವರವಾದ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version