Site icon Vistara News

Viral News: ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಲ್ಲಿ ಮೊಬೈಲ್‌ ಟವರ್‌; ದೊಡ್ಡ ಸುದ್ದಿ ಎಂದ ಆನಂದ್‌ ಮಹೀಂದ್ರಾ

Siachen

Siachen

ನವ ದೆಹಲಿ: ಭಾರತೀಯ ಸೇನೆ (Indian Army) ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ (Siachen) ಮೊಬೈಲ್‌ ಟವರ್‌ ಅನ್ನು ಮೊದಲ ಬಾರಿಗೆ ಸ್ಥಾಪಿಸಲಾಗಿದೆ. ಭಾರತೀಯ ಸೇನೆ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌(ಬಿಎಸ್‌ಎನ್‌ಎಲ್‌) ಜತೆಗೂಡಿ ಈ ಸಾಹಸ ಕೈಗೊಂಡಿದೆ. ಈ ಮಾಹಿತಿಯನ್ನು ಫೈರ್‌ ಆ್ಯಂಡ್‌ ಫ್ಯೂರಿ ಕಾರ್ಪ್‌ ಎಕ್ಸ್‌ ಮೂಲಕ ಹಂಚಿಕೊಂಡಿದ್ದು, ಸಚಿವ ದೇವುಸಿನ್ಹ ಚೌಹಾಣ್ ಮತ್ತು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಮಹತ್ವದ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ.

ʼʼಸಿಯಾಚಿನ್‌ ವಾರಿಯರ್ಸ್ ಬಿಎಸ್ಎನ್ಎಲ್ ಸಹಯೋಗದೊಂದಿಗೆ 15,500 ಅಡಿಗಳಿಗಿಂತ ಹೆಚ್ಚಿನ ಎತ್ತರದ ಪ್ರದೇಶದಲ್ಲಿ ನಿಯೋಜಿಸಲಾದ ಸೈನಿಕರಿಗಾಗಿ ಮೊಬೈಲ್ ಸಂವಹನವನ್ನು ವಿಸ್ತರಿಸಲು ಅಕ್ಟೋಬರ್ 6ರಂದು ಯುದ್ಧಭೂಮಿಯ ಮೊದಲ ಬಿಎಸ್ಎನ್ಎಲ್ ಟವರ್‌ ಸ್ಥಾಪಿಸಿತು” ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಜತೆಗೆ ಕೆಲವೊಂದು ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.

ಕೇಂದ್ರ ಸಚಿವ ದೇವುಸಿನ್ಹ ಚೌಹಾಣ್ ಈ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ʼʼಬಿಎಸ್‌ಎನ್‌ಎಲ್‌ ಜತೆಗೆ ಕೈಜೋಡಿಸಿ ಯೋಧರು ಸಿಯಾಚಿನ್‌ನಲ್ಲಿ ಮೊದಲ ಟವರ್‌ ಸ್ಥಾಪಿಸಿದ್ದಾರೆ. ಈಗ ನಮ್ಮ ಹೀರೋಗಳು ಅವರ ಪ್ರೀತಿಪಾತ್ರರೊಂದಿಗೆ ಮಾತನಾಡಬಹುದು. ಬಿಎಸ್‌ಎನ್‌ಎಲ್‌ ಮತ್ತು ಸಿಯಾಚಿನ್‌ ವಾರಿಯರ್ಸ್‌ಗೆ ಅಭಿನಂದನೆಗಳುʼʼ ಎಂದು ಬರೆದುಕೊಂಡಿದ್ದಾರೆ.

ʼʼಈ ಜಗತ್ತಿನ ದೃಷ್ಟಿಯಲ್ಲಿ ಇದೊಂದು ಒಂದು ಸಣ್ಣ ಘಟನೆ. ಆದರೆ ನಮ್ಮನ್ನು ರಕ್ಷಿಸಲು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಪ್ರತಿದಿನ ತಮ್ಮ ಪ್ರಾಣವನ್ನು ಪಣಕ್ಕಿಡುವ ನಮ್ಮ ಸೈನಿಕರು ಈಗ ತಮ್ಮ ಕುಟುಂಬಗಳೊಂದಿಗೆ ಬಲವಾದ ಸಂಪರ್ಕ ಹೊಂದಲಿದ್ದಾರೆ. ಅವರಿಗೆ ಈ ಉಪಕರಣವು ವಿಕ್ರಮ್ ಲ್ಯಾಂಡರ್‌ನಷ್ಟೇ ಮುಖ್ಯವಾಗಿದೆ. ನನ್ನ ಪಾಲಿಗೆ ಇದು ನಿಜವಾಗಿಯೂ ದೊಡ್ಡ ಸುದ್ದಿʼʼ ಎಂದು ಆನಂದ್‌ ಮಹೀಂದ್ರಾ ಸಂತಸ ಹಂಚಿಕೊಂಡಿದ್ದಾರೆ.

ಫೈರ್‌ ಆ್ಯಂಡ್‌ ಫ್ಯೂರಿ ಕಾರ್ಪ್‌ ಈ ಫೋಸ್ಟ್‌ ಅನ್ನು ಅಕ್ಟೋಬರ್‌ 12ರಂದು ಹಂಚಿಕೊಂಡಿದ್ದು ವೈರಲ್‌ ಆಗಿದೆ. ಈಗಾಗಲೇ 11,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Viral video: ಅತಿ ದೊಡ್ಡ ʼಇಸ್ಪೀಟೆಲೆಯ ಕಟ್ಟಡʼ; ಭಾರತೀಯ ವಿದ್ಯಾರ್ಥಿಯ ವಿಶ್ವದಾಖಲೆ!

ನೆಟ್ಟಿಗರಿಂದ ಪ್ರಶಂಸೆ

ʼʼಉತ್ತಮ ಕೆಲಸ. ಈ ಎತ್ತರದ ಪ್ರದೇಶದಲ್ಲಿ ಇದು ತುಂಬಾ ಅತ್ಯಗತ್ಯವಾಗಿತ್ತುʼʼ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, ʼʼಈ ಕೆಲಸ ನಿರ್ವಹಿಸಿದವರಿಗೆ ಸೆಲ್ಯೂಟ್‌ʼʼ ಎಂದು ಹೇಳಿದ್ದಾರೆ. ʼʼಸೈನಿಕರೇ ನಿಜವಾದ ಹೀರೊಗಳು. ಯಾಕೆಂದರೆ ಅವರಿಂದಾಗಿಯೇ ನಾವು ಸುರಕ್ಷಿತರಾಗಿದ್ದೇವೆʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼʼಈ ಸರ್ಕಾರ ಕೈಗೊಂಡ ಇನ್ನೊಂದು ಅತ್ಯುನ್ನತ ಕಾರ್ಯʼʼ ಎಂದು ನೆಟ್ಟಿಗರೊಬ್ಬರು ಶ್ಲಾಘಿಸಿದ್ದಾರೆ. ʼʼಇದೊಂದು ಅತ್ಯುತ್ತಮ ಸುದ್ದಿ. ಟವರ್‌ ಸ್ಥಾಪನೆಯೊಂದಿಗೆ ನಮ್ಮ ಧೈರ್ಯವಂತ ಯೋಧರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸಬಹುದು. ಈ ಚಿಕ್ಕ ಉಪಕರಣ ಬಹು ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಲಿದೆ. ನಮಗಾಗಿ ತಮ್ಮ ಜೀವದ ಹಂಗನ್ನೇ ತೊರೆದು ಯುದ್ಧ ಭೂಮಿಯಲ್ಲಿ ಹೋರಾಡುವವರು ಇದು ನೆರವಾಗಲಿದೆʼʼ ಎಂದು ಮಗದೊಬ್ಬರು ಕಮೆಂಟ್‌ ಮಾಡಿದ್ದಾರೆ. ಹಲವರು ಜೈ ಹೋ, ಜೈ ಹಿಂದ್‌ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version