ಉದ್ದ ಕೂದಲು ಕೆಲವರಿಗೆ ಇಷ್ಟವಾದರೆ, ಇನ್ನೂ ಕೆಲವರಿಗೆ ಗಿಡ್ಡ ಕೂದಲು ಎಂದರೆ ಪಂಚಪ್ರಾಣ. ಅವರವರ ಆಸಕ್ತಿಗೆ ಅನುಗುಣವಾಗಿ ಪ್ರತಿಯೊಬ್ಬರೂ ತಮ್ಮ ಕೂದಲನ್ನು ಬೆಳೆಸುತ್ತಾರೆ. ಆದರೆ, ವಿಶೇಷವೆಂದರೆ, ಆಸಕ್ತಿ ಇದ್ದರೂ ಬಹಳಷ್ಟು ಸಲ, ಅಂದುಕೊಂಡ ಹಾಗೆ ಕೂದಲು ಬೆಳೆಯುವುದೂ ಇಲ್ಲ. ಹಾಗಾಗಿ, ಉದ್ದ ಕೂದಲು ಎಂದರೆ ಸಣ್ಣ ವಿಚಾರವಂತೂ ಖಂಡಿತ ಅಲ್ಲ. ಉದ್ದ ಕೂದಲನ್ನು ಕಾಳಜಿಯಿಂದ ಬೆಳೆಸುವಲ್ಲಿ ಅವರು ವಹಿಸಿದ ಶ್ರಮ, ಶ್ರದ್ಧೆ, ತಾಳ್ಮೆ ಎಲ್ಲವೂ ಅವರ ಕೂದಲಿನಲ್ಲಿ ಕಾಣುತ್ತವೆ. ಇಲ್ಲೊಬ್ಬ ಉತ್ತರ ಪ್ರದೇಶದ ಮಹಿಳೆಯೊಬ್ಬರು ತನ್ನ ಉದ್ದ ಕೂದಲ ಮೂಲಕವೇ (Longest Hair) ಗಿನ್ನೆಸ್ ವಿಶ್ವ ದಾಖಲೆ (Guinness World Records) ಕೀರ್ತಿಗೆ ಭಾಜನರಾಗಿದ್ದಾರೆ. ಪ್ರಪಂಚದಲ್ಲೇ ಅತ್ಯಂತ ಉದ್ದ ಕೂದಲಿನ ಮಹಿಳೆ ಎಂಬ ಬಿರುದಿಗೆ (Viral News) ಪಾತ್ರವಾಗಿದ್ದೂ ಅಲ್ಲದೆ, ಗಿನ್ನೆಸ್ ದಾಖಲೆಯಲ್ಲಿ ತನ್ನ ಹೆಸರನ್ನು ಬರೆದಿದ್ದಾರೆ.
ಈಕೆಯ ಹೆಸರು ಸ್ಮಿತಾ ಶ್ರೀವಾಸ್ತವ. 46ರ ಹರೆಯದ ಈಕೆ ಇರುವುದು ಉತ್ತರ ಪ್ರದೇಶದಲ್ಲಿ. ಸದ್ಯ ಈಕೆ ಪ್ರಪಂಚದ ಅತ್ಯಂತ ಉದ್ದ ಕೂದಲು ಹೊಂದಿದ ಮಹಿಳೆ. ಸುಮಾರು 14ನೇ ವಯಸ್ಸಿನಿಂದ ಕೂದಲು ಬೆಳೆಸಲು ಆರಂಭಿಸಿದ ಈಕೆ ಈಗ ಬರೋಬ್ಬರಿ, ಏಳು ಅಡಿ ಒಂಭತ್ತು ಇಂಚು ಉದ್ದದ ಕೂದಲ ಒಡತಿಯಾಗಿದ್ದಾರೆ. ಅಂದರೆ, ಸ್ವತಃ ತನಗಿಂಥಲೂ ಉದ್ದದ ಕೂದಲನ್ನು ಆಕೆ ಹೊಂದಿದ್ದಾರೆ. 1980ರ ದಶಕದ ಹಿಂದಿ ಚಿತ್ರತಾರೆಯರರಿಂದ ಪ್ರೇರಣೆಗೊಂಡು ಕೂದಲು ಬೆಳೆಸಲು ಆರಂಭಿಸಿದ ಈಕೆ ಆಮೇಲೆ ಹಿಂತಿರುಗಿ ನೋಡಿದ್ದೇ ಇಲ್ಲ.
ಸ್ಮಿತಾ ಹೇಳುವಂತೆ, ಬಾರತೀಯ ಸಂಸ್ಕೃತಿಯ ಪ್ರಕಾರ ದೇವಿದೇವತೆಗಳು ಉದ್ದದ ಕೂದಲುಗಳನ್ನು ಹೊಂದಿರುತ್ತಿದ್ದರು. ಫೋಟೋಗಳಲ್ಲಿ, ದೇವತೆಯರನ್ನು ಉದ್ದ ಕೂದಲಿರುವಂತೆ ಚಿತ್ರಿಸಲಾಗುತ್ತಿತ್ತು. ನಮ್ಮ ಸಂಸ್ಕೃತಿಯಲ್ಲಿ ಗಿಡ್ಡ ಕೂದಲು ಮಹಿಳೆಯರಿಗೆ ಶೋಭಿಸುವುದಿಲ್ಲ ಎಂಬ ಮಾತಿದೆ. ಹಿಂದೆ ಆ ನಂಬಿಕೆಯಿತ್ತು. ಅದಕ್ಕಾಗಿ ಎಲ್ಲರೂ ಕೂದಲನ್ನು ಉದ್ದ ಬೆಳೆಸುತ್ತಿದ್ದರು. ಉದ್ದ ಕೂದಲೆಂದರೆ ಮಹಿಳೆಯರ ಸೌಂದರ್ಯದ ಪ್ರತೀಕ ಎಂದು ಆಕೆ ಗಿನ್ನಿಸ್ ದಾಖಲೆ ಬರೆದ ಸಂದರ್ಭ ವಿವರಿಸಿದ್ದಾರೆ.
ಎಷ್ಟೇ ಜತನದಿಂದ ಕಾಳಜಿ ಮಾಡಿದರೂ ಇಷ್ಟು ಉದ್ದದ ಕೂದಲನ್ನು ಪಡೆಯುವುದೆಂದರೆ ಸುಲಭದ ಮಾತಲ್ಲ. ಆಸೆಪಟ್ಟು ಕಷ್ಟಪಟ್ಟರೂ ಬಹುತೇಕರಿಗೆ ಕೂದಲು ಹೀಗೆ ಬೆಳೆಯುವುದಿಲ್ಲ. ಆದರೆ ಈಕೆ ಒಮ್ಮೆಯೂ ಕೂದಲನ್ನು ಕತ್ತರಿಸದೆ ಬೆಳೆಸುತ್ತಲೇ ಬಂದಿದ್ದಾರೆ. ಜೊತೆಗೆ ಬಹಳ ತಾಳ್ಮೆಯಿಂದ ಪೋಷನೆಯನ್ನೂ ಮಾಡಿದ್ದಾರೆ. ಆಕೆ ಹೇಳುವಂತೆ, ವಾರಕ್ಕೆರಡು ಬಾರಿ ತಲೆಗೆ ಸ್ನಾನ ಮಾಡುವ ಜೊತೆಗೆ ಸುಮಾರು ಎರಡು ಗಂಟೆ ಕಾಲ ಅದರ ಸಿಕ್ಕು ಬಿಡಿಸುವುದು, ಒಣಗಿಸುವುದು, ಬಾಚುವುದು ಇತ್ಯಾದಿಗಳಿಗೇ ಸಮಯ ಕಳೆದು ಹೋಗುತ್ತದೆ. ಆದರೆ, ಉದ್ದ ಕೂದಲ ಸಂತೃಪ್ತಿಯೇ ಬೇರೆ. ಜನರು ನನ್ನ ಕೂದಲನ್ನು ನೋಡಿ ಆಶ್ಚರ್ಯ ಪಡುವುದು, ಸೆಲ್ಫಿ ತೆಗೆದುಕೊಳ್ಳುವುದು ಇತ್ಯಾದಿ ಮಾಡುವಾಗ ಖಷಿಯಾಗುತ್ತೇನೆ. ಕೂದಲಿಗೆ ಏನು ಹಚ್ಚುತ್ತೀರಿ ಎಂದೂ ಜನರು ಕೇಳುವಾಗ ಹೆಮ್ಮೆಯೆನಿಸುತ್ತದೆ ಎಂದಿದ್ದಾರೆ ಸ್ಮಿತಾ.
ಮಂಚದ ಮೇಲೆ ಹತ್ತಿ ನಿಂತರೂ ಕೂದಲು ಮಂಚವನ್ನು ದಾಟಿ ನೆಲವನ್ನು ತಲುಪುವಷ್ಟು ಉದ್ದವಿರುವ ಕೂದಲನ್ನು ಅವರು ನಿತ್ಯವೂ ಬಾಚಿ, ಸಿಕ್ಕು ಬಿಡಿಸಿ, ತುರುಬು ಕಟ್ಟಿಕೊಳ್ಳುತ್ತಾರಂತೆ. ಗಿನ್ನಿಸ್ ದಾಖಲೆ ಬರೆದುದಕ್ಕೆ ಅವರಿಗೀಗ ಅತೀವ ಹೆಮ್ಮೆ!
ಇದನ್ನೂ ಓದಿ: Viral News: ಇವರು ಅತಿ ಉದ್ದದ ಗಡ್ಡಧಾರಿ ಮಹಿಳೆ… ದಾಖಲಾಯಿತು ಗಿನ್ನೆಸ್ ರೆಕಾರ್ಡ್!