ಭೋಪಾಲ್: ಮಧ್ಯಪ್ರದೇಶದ ಇಂದೋರ್ (Indore) ಇತ್ತೀಚೆಗೆ ಅಪರೂಪದ ವಿವಾಹವೊಂದಕ್ಕೆ ಸಾಕ್ಷಿಯಾಯಿತು. ಇಂದೋರ್‌ನ ಅಲ್ಕಾ ಎಂಬ ಮಹಿಳೆ ಪುರಷನಾಗಿ ಲಿಂಗ ಪರಿವರ್ತನೆ ಮಾಡಿಕೊಂಡು ತನ್ನ ದೀರ್ಘಕಾಲದ ಗೆಳತಿ ಆಸ್ತಾಳನ್ನು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಈ ರೀತಿಯ ವಿವಾಹವು ಇಂದೋರ್‌ನಲ್ಲಿ ಮೊದಲನೆಯದು ಎನ್ನಲಾಗಿದೆ. ವಿಶೇಷ ವಿವಾಹ ಕಾಯ್ದೆಯಡಿ (Special Marriage Act) ಡಿಸೆಂಬರ್ 7ರಂದು ಮದುವೆ ನೆರವೇರಿದೆ. ಸದ್ಯ ಈ ವಿಶೇಷ ಮದುವೆ ಸುದ್ದಿ ವೈರಲ್ ಆಗಿದೆ (Viral News).
ಅಲ್ಕಾ ಎನ್ನುವ ಮಹಿಳೆ ತನ್ನ 47ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಅಸ್ತಿತ್ವ ಎಂಬ ಹೆಸರಿನಲ್ಲಿ ಪುರುಷನಾಗಿ ಬದಲಾಗಿದ್ದಾರೆ. ಬಳಿಕ ಅವರು ಕುಟುಂಬ ನ್ಯಾಯಾಲಯದಲ್ಲಿ ತಮ್ಮ ಗೆಳತಿ ಆಸ್ತಾ ಅವರನ್ನು ವಿವಾಹವಾದರು. ಈ ಕಾರ್ಯಕ್ರಮದಲ್ಲಿ ಎರಡೂ ಕಡೆಯ ಕುಟುಂಬ ಸದಸ್ಯರು ಭಾಗವಹಿಸಿದ್ದರು.
ಆಸ್ತಾ ಏನು ಹೇಳುತ್ತಾರೆ?
ಅಸ್ತಿತ್ವ ಅವರನ್ನು ಅವರ ಮನೆಯಲ್ಲಿ ಆಸ್ತಾ ಮೊದಲು ಭೇಟಿಯಾಗಿದ್ದರು. ಅಸ್ತಿತ್ವ ಮತ್ತು ಆಸ್ತಾ ಅವರ ಸಹೋದರಿ ಸ್ನೇಹಿತರಾಗಿದ್ದರು. ಪರಸ್ಪರ ಭೇಟಿ ಮುಂದೊಂದು ದಿನ ಇಬ್ಬರ ಮಧ್ಯೆ ಪ್ರೀತಿಯಾಗಿ ಅರಳಿತು. ಅಂತಿವಾಗಿ ಎರಡು ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆ ನಡೆಸಲಾಯಿತು ಎಂದು ಆಸ್ತಾ ತಿಳಿಸಿದ್ದಾರೆ. ಡಿಸೆಂಬರ್ 11ರಂದು ‘ಸಾತ್ ಫೆರಾಸ್’ (ಸಪ್ತಪದಿ) ಸಂಪ್ರದಾಯ ನೆರವೇರಿಸುವುದಾಗಿಯೂ ಅವರು ಹೇಳಿದ್ದಾರೆ.
ಖುಷಿ ವ್ಯಕ್ತಪಡಿಸಿದ ದಂಪತಿ
ಮದುವೆಗೂ ಮುನ್ನ ದಂಪತಿ ಇಂದೋರ್ ಜಿಲ್ಲಾಧಿಕಾರಿ ರೋಶನ್ ರಾಯ್ ಅವರಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ ಮದುವೆಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಅರ್ಜಿಯನ್ನು ಸಮರ್ಪಕವಾಗಿ ಪರಿಶೀಲಿಸಿ ಎರಡೂ ಕಡೆಯ ಕಟುಂಬಸ್ಥರಿಗೆ ತಿಳಿಸಿ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಡಿಸೆಂಬರ್ 7ರಂದು ಅಸ್ತಿತ್ವ ಮತ್ತು ಆಸ್ತಾ ಎರಡೂ ಕಡೆಯ ಇಬ್ಬರು ಸಾಕ್ಷಿಗಳು ಮತ್ತು ಜಂಟಿ ಸಾಕ್ಷಿಯ ಸಮ್ಮುಖದಲ್ಲಿ ತಮ್ಮ ವಿವಾಹ ಪ್ರಮಾಣಪತ್ರವನ್ನು ಪಡೆದುಕೊಂಡರು. ಮದುವೆಯ ನಂತರ ಅಸ್ತಿತ್ವ ಮತ್ತು ಆಸ್ತಾ ಇಬ್ಬರೂ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಮದುವೆಯಾಗುವ ನಿರ್ಧಾರಕ್ಕೆ ಬರಲು ಹಲವು ತಿಂಗಳು ಸಮಾಲೋಚನೆ ನಡೆಸಿದ್ದೆವು. ಅಂತಿಮವಾಗಿ ಕುಟುಂಬದ ಒಪ್ಪಿಗೆ ಪಡೆದು ಲಿಂಗ ಪರಿವರ್ತನೆಗೆ ಮುಂದಾಗಿದ್ದೆವು ಎಂದು ದಂಪತಿ ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಎಣ್ಣೆಗೆ ಕಾಸು ಕೊಡದ ಪತ್ನಿಯನ್ನೇ ಕೊಂದ!
ಹಿಂದೆಯೂ ನಡೆದಿತ್ತು
ಈ ಮಾದರಿಯ ಘಟನೆ ಹಿಂದೆಯೂ ದೇಶದಲ್ಲಿ ನಡೆದಿತ್ತು. ಕಳೆದ ವರ್ಷ ರಾಜಸ್ಥಾನದ ಭರತ್‌ಪುರದಲ್ಲಿ, ಮೀರಾ ಎಂಬ ಶಿಕ್ಷಕಿ ಆರವ್ ಆಗಿ ಲಿಂಗ ಪರಿವರ್ತನೆಗೆ ಒಳಗಾಗಿ ಕಲ್ಪನಾ ಅವರನ್ನು ವಿವಾಹವಾಗಿದ್ದರು. ಈ ಜೋಡಿ ಮದುವೆಯ ವೇಳೆ ಎಲ್ಲ ಸಾಂಪ್ರದಾಯಿಕ ವಿವಾಹ ಆಚರಣೆಗಳನ್ನು ನಡೆಸಿತ್ತು. ಹಲವು ತಿಂಗಳ ಶ್ರಮದ ಬಳಿಕ ಮೀರಾ ಅಂತಿಮವಾಗಿ 2022ರ ನವೆಂಬರ್‌ನಲ್ಲಿ ಆರವ್ ಆಗಿ ಬದಲಾಗಿದ್ದರು.
ಈ ಅಸಾಂಪ್ರದಾಯಿಕ ವಿವಾಹಗಳು ಭಾರತದಲ್ಲಿ ತೃತೀಯ ಲಿಂಗಿಗಳ ವಿವಾಹದ ಹಕ್ಕುಗಳನ್ನು ಸಮಾಜ ನಿಧಾನವಾಗಿ ಒಪ್ಪಿಕೊಳ್ಳುತ್ತಿದೆ ಎನ್ನುವುದಕ್ಕೆ ಉದಾಹರಣೆ. ಇದು ಎಲ್ಲರಿಗೂ ಸಮಾನ ಹಕ್ಕುಗಳು ಎನ್ನುವ ಗುರಿಯನ್ನು ಸಾಧಿಸಲಿರುವ ದಿಟ್ಟ ಹೆಜ್ಜೆ ಎಂದೇ ಪರಿಗಣಿಸಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.