ಛತ್ತೀಸ್‌ಗಡ: ಚುನಾವಣೆ(Election) ಅಂದ್ರೆನೇ ಹಾಗೆಯೇ ಅದೊಂದು ತರಹ ಯುದ್ಧದ ರೀತಿಯೇ ಭಾಸವಾಗುತ್ತದೆ. ತಮ್ಮ ತಮ್ಮ ನೆಚ್ಚಿನ ಪಕ್ಷಗಳು, ನಾಯಕರ ಗೆಲುವಿಗೆ ನೂರಾರು ಕಾರ್ಯಕರ್ತರು, ಬೆಂಬಲಿಗರು ಹಂಬಲಿಸೋದು ಸಹಜ. ಕೆಲವೊಮ್ಮೆ ಕಾರ್ಯಕರ್ತರ ಪಕ್ಷದ ಬಗೆಗಿನ ಒಲವು ಅತಿರೇಕಕ್ಕೆ ತಿರುಗಿದಾಗ ಅನೇಕ ಅವಘಡಗಳು ಸಂಭವಿಸುತ್ತಿರುತ್ತವೆ. ಅಂತಹದ್ದೇ ಒಂದು ಘಟನೆ(Viral News) ಛತ್ತೀಸ್‌ಗಡದಲ್ಲಿ ನಡೆದಿದ್ದು, ಎನ್‌ಡಿಎ(NDA) ಬಹುಮತದೊಂದಿಗೆ ಗೆಲವು ಸಾಧಿಸಿರುವ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಬೆರಳು ಕತ್ತರಿಸಿ ಕಾಳಿ ದೇವಿಗೆ ಅರ್ಪಿಸಿದ್ದಾನೆ.
ಏನಿದು ಘಟನೆ?
ಛತ್ತೀಸ್‌ಗಡದ ಬಾಲರಾಮ್‌ಪುರದಲ್ಲಿ ಈ ಘಟನೆ ನಡೆದಿದ್ದು, ದುರ್ಗೇಶ್ ಪಾಂಡೆ ಎಂಬಾತನೇ ಬಿಜೆಪಿ ಬೆಂಬಲಿಗ. ಜೂ.4ರಂದು ಚನಾವಣಾ ಫಲಿತಾಂಶ ಹೊರಬಿದ್ದಾಗ ಆರಂಭದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದಂತೆ ತೀವ್ರ ಬೇಸರಗೊಂಡಿದ್ದನಂತೆ. ಈ ಬಾರಿ ಅಧಿಕಾರ ಎನ್‌ಡಿಎ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕಕ್ಕೆ ಬಿದ್ದ ದುರ್ಗೇಶ್, ಕಾಳಿ ಮಂದಿರಕ್ಕೆ ತೆರಳಿ ಬಿಜೆಪಿ ಗೆಲುವಿಗೆ ಪ್ರಾರ್ಥಿಸಿದ್ದಾನೆ. ಅಲ್ಲದೇ ತನ್ನ ಒಂದು ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ.
ಇನ್ನು ಬೆರಳು ಕತ್ತರಿಸಿಕೊಂಡ ದುರ್ಗೇಶ್ ಪಾಂಡೆ, ಬಟ್ಟೆಯನ್ನು ಕಟ್ಟಿ ಸುರಿಯುತ್ತಿದ್ದ ರಕ್ತವನ್ನು ತಡೆಯಲು ಯತ್ನಿಸಿದ್ದಾನೆ. ಆದರೆ ರಕ್ತ ಮಾತ್ರ ನಿಲ್ಲಲೇ ಇಲ್ಲ. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಆತನ ಕುಟುಂಬಸ್ಥರು ಆತನನ್ನು ತಕ್ಷಣ ಸಮಾರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಆತನನ್ನು ಅಂಬಿಕಾಪುರದ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿತ್ತು. ಬಹಳ ಹೊತ್ತಾದ ಕಾರಣ ನಜ್ಜುಗುಜ್ಜಾಗಿದ್ದ ಆತನ ಬೆರಳನ್ನು ಮತ್ತೆಜೋಡಿಸಲು ಸಾಧ್ಯವಾಗಿಲ್ಲ. ಅದ್ಯ ಚಿಕಿತ್ಸೆ ಮುಂದುವರೆದಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ದುರ್ಗೇಶ್ ಪಾಂಡೆ, ಆರಂಭಿಕ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುವುದನ್ನು ಕಂಡು ನಾನು ವಿಚಲಿತನಾದೆ. ಮತ್ತೊಂದೆಡೆ ಕಾಂಗ್ರೆಸ್ ಬೆಂಬಲಿಗರು ಕೂಡ ಉತ್ಸಾಹದಲ್ಲಿದ್ದರು. ಇಡೀ ಗ್ರಾಮವು ನಂಬಿರುವ ಕಾಳಿ ದೇವಸ್ಥಾನಕ್ಕೆ ನಾನು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಬಿಜೆಪಿ ಗೆಲುವಿಗೆ ಬೆರಳು ಕೊಡುವುದಾಗಿ ಪ್ರತಿಜ್ಞೆ ಮಾಡಿದ್ದೆ. ಅಂದು ಸಂಜೆ ಬಿಜೆಪಿ ಚುನಾವಣೆಯಲ್ಲಿ ಗೆದ್ದಾಗ, ನಾನು ದೇವಸ್ಥಾನಕ್ಕೆ ಹೋಗಿ, ನನ್ನ ಬೆರಳು ಕತ್ತರಿಸಿ ಅದನ್ನು ಅರ್ಪಿಸಿದೆ, ಬಿಜೆಪಿ ಈಗ ಸರ್ಕಾರ ರಚಿಸುತ್ತದೆ, ಆದರೆ ಅವರು (ಎನ್‌ಡಿಎ) 400 ರ ಗಡಿ ದಾಟಿದರೆ ನನಗೆ ಹೆಚ್ಚು ಸಂತೋಷವಾಗುತ್ತಿತ್ತು ಎಂದಿದ್ದಾನೆ.
ಇದನ್ನೂ ಓದಿ:Rahul Gandhi: ಷೇರುಪೇಟೆಯಲ್ಲಿ ಭಾರಿ ಹಗರಣವಾಗಿದೆ ಎಂದಿದ್ದ ರಾಹುಲ್ ಗಾಂಧಿಗೆ ಐದೇ ದಿನದಲ್ಲಿ 25 ಲಕ್ಷ ರೂ. ಲಾಭ!
ಕೆಲವು ದಿನಗಳ ಹಿಂದೆ ಆಪ್ ನಾಯಕ, ನವದೆಹಲಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಸೋಮನಾಥ್ ಭಾರ್ತಿ, ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾದರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆ” ಎಂದಿದ್ದರು. ಜೂನ್ 4ರಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ತಪ್ಪು ಎಂಬುದು ಸಾಬೀತಾಗಲಿದೆ. ಖಂಡಿತವಾಗಿಯೂ, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದಿಲ್ಲ. ದೆಹಲಿಯ ಎಲ್ಲ 7 ಲೋಕಸಭೆ ಕ್ಷೇತ್ರಗಳಲ್ಲೂ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇನ್ನು, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾದರೆ, ನಾನು ನನ್ನ ತಲೆಯನ್ನು ಬೋಳಿಸಿಕೊಳ್ಳುತ್ತೇನೆ” ಎಂಬುದಾಗಿ ಮತಗಟ್ಟೆ ಸಮೀಕ್ಷೆಗಳ ವರದಿಗಳ ಬಳಿಕ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.