ರಾಂಚಿ: ಪೊಲೀಸರೆಂದರೆ ಎಲ್ಲರ ರಕ್ಷಣೆಗೆ ಇರುವವರು ಎನ್ನುವುದು ಎಲ್ಲರಿಗೆ ತಿಳಿದಿರುವ ವಿಚಾರ. ಆದರೆ ಜಾರ್ಖಂಡ್‌ನಲ್ಲಿ ನವಜಾತ ಶಿಶುವನ್ನು ಪೊಲೀಸರೇ ಬೂಟು ಕಾಲಿನಲ್ಲಿ ಮೆಟ್ಟಿ ಕೊಂದಿರುವ ಘಟನೆ ನಡೆದಿದೆ. ಇದೀಗ ತನಿಖೆ ನಡೆಸಿ, ಆರು ಪೊಲೀಸ್ ಸಿಬ್ಬಂದಿಯನ್ನು ಕೆಲಸದಿಂದ ಅಮಾನತು (Viral News) ಮಾಡಲಾಗಿದೆ.
ಇದನ್ನೂ ಓದಿ: Puneeth Rajkumar: ಅಪ್ಪು ಸಮಾಧಿ ದರ್ಶನಕ್ಕೆ ಬಂದ 80ರ ವೃದ್ಧ, 19 ದಿನಗಳ ನವಜಾತ ಶಿಶು ಜತೆ ಬಂದ ತಾಯಿ!
ಗಿರಿದಿಹ್ ಜಿಲ್ಲೆಯ ಕೊಸೊಗೊಂಡೋಡಿಗಿನ್ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಗ್ರಾಮದಲ್ಲಿ ಭೂಷಣ್ ಪಾಂಡೆ ಹೆಸರಿನ ವ್ಯಕ್ತಿ ತನ್ನ ಕುಟುಂಬದೊಂದಿಗೆ ವಾಸವಿದ್ದಾನೆ. ಆತನ ವಿರುದ್ಧ ಯಾವುದೋ ಪ್ರಕರಣ ಬಾಕಿಯಿದ್ದು, ಗುರುವಾರದಂದು ಆತನನ್ನು ಹುಡುಕಿಕೊಂಡು ಬಂದ ಪೊಲೀಸರು ಶಿಶುವನ್ನು ಕೊಂದಿರುವುದಾಗಿ ಕುಟುಂಬಸ್ಥರು ದೂರಿದ್ದಾರೆ.
ಈ ಬಗ್ಗೆ ಮಾತನಾಡಿರುವ ಭೂಷಣ್ ಪಾಂಡೆ, “ಮುಂಜಾನೆ 3 ಗಂಟೆ ಸಮಯಕ್ಕೆ ಪೊಲೀಸರು ಮನೆ ಬಾಗಿಲಿಗೆ ಬಂದು ಬಾಗಿಲು ಬಡಿಯಲಾರಂಭಿಸಿದರು. ನನ್ನ ವಿರುದ್ಧ ಕೇಸ್ ಒಂದು ಬಾಕಿ ಇದ್ದು, ನಾನು ಈ ಹಿಂದೆ ಜೈಲುವಾಸವನ್ನೂ ಅನುಭವಿಸಿದ್ದೆ. ಪೊಲೀಸರು ಬಂದಿದ್ದು ನೋಡಿ ನನಗೆ ಭಯವಾಯಿತು. ನನಗೆ ಏಳು ಮಕ್ಕಳಿದ್ದಾರೆ. ಅದರಲ್ಲೂ ಕೊನೆಯ ಮಗು ಐದು ವರ್ಷದ್ದು. ನಾನು ಜೈಲಿಗೆ ಹೋಗಿಬಿಟ್ಟರೆ ನನ್ನ ಕುಟುಂಬ ಹಸಿವಿನಿಂದ ಬಳಲಬೇಕಾಗುತ್ತದೆ ಎಂದು ನಾನು ಭಯದಿಂದ ಓಡಿ ಹೋದೆ. ಒಂದು ಗಂಟೆ ಬಿಟ್ಟು ಮನೆಯಿಂದ ಕರೆ ಮಾಡಿ, ನನ್ನ ಮೊಮ್ಮಗು ಸಾವನ್ನಪ್ಪಿರುವುದಾಗಿ ಹೇಳಿದರು” ಎಂದು ಹೇಳಿದ್ದಾರೆ.
ಭೂಷಣ್ ಅವರ ಸೊಸೆ ನೇಹಾ ದೇವಿ ಅವರು ವಾರದ ಹಿಂದೆ ಮಗುವಿಗೆ ಜನ್ಮ ನೀಡಿದ್ದು, ಆ ಮಗು ಈಗ ಸಾವನ್ನಪ್ಪಿದೆ. ಈ ಬಗ್ಗೆ ನೇಹಾ ಕೂಡ ಮಾತನಾಡಿದ್ದು, “ಪೊಲೀಸರು ಬಂದಾಗ ನಾನು ಮತ್ತು ನನ್ನ ಗಂಡ ಮಂಚದ ಮೇಲೆ ಮಲಗಿದ್ದೆವು. ನನ್ನ ಅತ್ತೆ ಮಾವ ನೆಲದ ಮೇಲೆ ಮಲಗಿದ್ದರು. ಪೊಲೀಸರು ಬಂದಿದ್ದನ್ನು ನೋಡಿ ನಾವು ಹೆದರಿ ಮನೆಯಿಂದ ಹೊರಗೆ ಓಡಿದ್ದೆವು. ಪೊಲೀಸರು ನಮಗೆ ಬೈಯುತ್ತ ನಮ್ಮ ಮಾವನಿಗೆ ಹುಡುಕುತ್ತಿದ್ದರು. ಅದರಲ್ಲಿ ಒಬ್ಬ ಪೊಲೀಸ್ ಮಂಚದ ಮೇಲೆ ಹತ್ತಿ ನಮ್ಮ ಮಾವ ಎಲ್ಲಾದರೂ ಅಡಗಿದ್ದಾರೆಯೇ ಎಂದು ಹುಡುಕುತ್ತಿದ್ದರು. ಪೊಲೀಸರು ಮನೆಯಿಂದ ಹೋದ ಮೇಲೆ ಮಗುವಿನ ಬಳಿ ಬಂದು ನೋಡಿದರೆ ಮಗುವಿನ ದೇಹ ತಣ್ಣಗಾಗಿತ್ತು. ಮಗುವಿನ ಕುತ್ತಿಗೆಯ ಬಳಿ ಕೆಂಪಾಗಿ ಬೂಟಿನ ಅಚ್ಚಿತ್ತು” ಎಂದು ಹೇಳಿದ್ದಾರೆ.
ಈ ಬಗ್ಗೆ ಭೂಷಣ್ ಪಾಂಡೆ ಕುಟುಂಬ ಪೊಲೀಸರಲ್ಲಿ ದೂರು ನೀಡಿದೆ. ತನಿಖೆ ನಡೆಸಿರುವ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಈ ಬಗ್ಗೆ ಸೂಕ್ತವಾಗಿ ತನಿಖೆ ನಡೆಸುವುದಕ್ಕೆ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ಪೊಲೀಸರಿಗೆ ಸೂಚಿಸಿದ್ದಾರೆ.