ಹೊಸದಿಲ್ಲಿ: ಬಿಸ್ಕತ್ತು ತಯಾರಿಕೆ ಕಂಪನಿ ಪಾರ್ಲೆ-ಜಿ (Parle-G biscuit) ತನ್ನ ಪ್ಯಾಕೆಟ್‌ನ ಕವರ್‌ನಲ್ಲಿ ಐಕಾನಿಕ್ ಪಾರ್ಲೆ-ಜಿ ಹುಡುಗಿಯ ಬದಲಿಗೆ ಇನ್‌ಸ್ಟಗ್ರಾಂ ಇನ್‌ಫ್ಲುಯೆನ್ಸರ್ ಒಬ್ಬನ ಫೋಟೋ ಛಾಪಿಸಿದ ಫೋಟೋವನ್ನು ಹಂಚಿಕೊಂಡು, ಇಂಟರ್‌ನೆಟ್ ಬಳಕೆದಾರರು ಹುಬ್ಬೇರುವಂತೆ ಮಾಡಿದೆ.
ಇನ್‌ಸ್ಟಗ್ರಾಂ ಇನ್‌ಫ್ಲುಯೆನ್ಸರ್, ಕಂಟೆಂಟ್ ಕ್ರಿಯೇಟರ್ ಝೆರ್ವಾನ್ ಜೆ ಬುನ್‌ಶಾ ಅವರ ವೈರಲ್ ವೀಡಿಯೊಗೆ ಪ್ರತಿಕ್ರಿಯೆಯಾಗಿ ಪಾರ್ಲೆ ಜಿ ಈ ತಮಾಷೆ ಪೋಸ್ಟ್ ಹಾಕಿದೆ. ಬುನ್‌ಶಾ ತಮ್ಮ ಇತ್ತೀಚಿನ ಒಂದು ವಿಡಿಯೋದಲ್ಲಿ ಒಂದು ಪ್ರಶ್ನೆ ಹಾಕಿದ್ದರು. “ನೀವು ಪಾರ್ಲೆ ಮಾಲೀಕರನ್ನು ಭೇಟಿಯಾದರೆ, ನೀವು ಅವರನ್ನು ಪಾರ್ಲೆ ಸರ್, ಮಿ. ಪಾರ್ಲೆ ಅಥವಾ ಪಾರ್ಲೆ ಜಿ ಎಂದು ಕರೆಯುತ್ತೀರಾ?” ಎಂದು ವಿಡಿಯೋದಲ್ಲಿ ಪ್ರಶ್ನಿಸಿದ್ದರು. ಜೊತೆಗೆ ಗೊಂದಲದ ಮುಖಭಾವದೊಂದಿಗೆ ಕಾರಿನಲ್ಲಿ ಕುಳಿತಿರುವ ವಿಡಿಯೋ ಕ್ಲಿಪ್. ಬ್ಯಾಕ್‌ಗ್ರೌಂಡ್‌ನಲ್ಲಿ ಅನಿಲ್ ಕಪೂರ್ ಅವರ ಚಲನಚಿತ್ರ ʼರಾಮ್ ಲಖನ್’ನ ʼಏ ಜೀ ಊ ಜೀ’ ಟ್ರ್ಯಾಕ್ ಹಿನ್ನಲೆಯಲ್ಲಿ ಪ್ಲೇ ಆಗುತ್ತಿತ್ತು.
ಮೂರು ದಿನಗಳ ಹಿಂದೆ ಬುನ್‌ಶಾ ಹಂಚಿಕೊಂಡ ಈ ವೀಡಿಯೊ Instagram ಬಳಕೆದಾರರಿಂದ ತಿಳಿಹಾಸ್ಯದ ಪ್ರತಿಕ್ರಿಯೆಗಳನ್ನು ಹೊರಹೊಮ್ಮಿಸಿ ವೈರಲ್ ಆಗಿದೆ. ಈ ವೀಡಿಯೊ ಪಾರ್ಲೆ-ಜಿಯ ಗಮನವನ್ನು ಸೆಳೆದಿದೆ. ಬಿಸ್ಕತ್ ತಯಾರಕ ಕಂಪನಿ ಹಾಸ್ಯದ ಕಾಮೆಂಟ್‌ನೊಂದಿಗೆ ಈ ವಿನೋದದಲ್ಲಿ ಪಾಲ್ಗೊಂಡಿತು. “ಬುನ್‌ಶಾ ಜೀ, ನೀವು ನಮ್ಮನ್ನು OG ಎಂದು ಕರೆಯಬಹುದು” ಎಂದು ಕಾಮೆಂಟ್ ಮಾಡಿದೆ. ಜತೆಗೆ, ಪಾರ್ಲೆ-ಜಿ ಬಿಸ್ಕೆಟ್ ಹೊದಿಕೆಯ ಮೇಲೆ ಮುದ್ದು ಹುಡುಗಿಯ ಚಿತ್ರದ ಬದಲಿಗೆ ಬುನ್‌ಶಾ ಅವರ ನಗುತ್ತಿರುವ ಚಿತ್ರವನ್ನು ಸಹ ಮುದ್ರಿಸಿ ಪ್ರಕಟಿಸಿತು. “ಪಾರ್ಲೆ-ಜಿ ಮಾಲೀಕರನ್ನು ಏನೆಂದು ಕರೆಯಬೇಕೆಂದು ನೀವು ಲೆಕ್ಕಾಚಾರ ಮಾಡುವಾಗ, ಒಂದು ಕಪ್ ಚಾಯ್‌ನೊಂದಿಗೆ ಆನಂದಿಸಲು ನಿಮ್ಮ ನೆಚ್ಚಿನ ಬಿಸ್ಕತ್ತು ಎಂದು ನೀವು ನಮಗೆ ಕರೆಯಬಹುದು. ಏನು ಹೇಳುತ್ತೀರಿ ಬುನ್‌ಶಾ ಜೀ?” ಎಂದು ಕ್ಯಾಪ್ಷನ್ ನೀಡಿತು.
ಪಾರ್ಲೆಜಿಯ ಪ್ರತಿಕ್ರಿಯೆಯಿಂದ ಆನಂದಿತರಾದ ಬುನ್‌ಶಾ ಅವರು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. “ಯಾವುದೇ ವಿಹಾರ, ಪಾರ್ಟಿ, ಕೂಟ, ಬಯಕೆ, ಫ್ಯಾನ್ಸಿ ಕೇಕ್‌ಗಳಲ್ಲಿ ಕೂಡ ಬಾಲ್ಯದಲ್ಲಿ ಪಾರ್ಲೆ ಜಿ ಯಾವಾಗಲೂ ನನ್ನ ಜೊತೆಗೇ ಇತ್ತು. ನಾನು ಚಿಕ್ಕವನಿದ್ದಾಗ ಬಿಸ್ಕತ್ತುಗಳನ್ನು ತಿನ್ನುತ್ತ ನಾನು ಬುದ್ಧಿವಂತನಾಗುತ್ತೇನೆ ಎಂದು ಭಾವಿಸಿದೆ. ಅದನ್ನು ನೀವು ಸಾಬೀತುಪಡಿಸಿದಿರಿ” ಎಂದು ಅವರು ಬರೆದಿದ್ದಾರೆ.