Site icon Vistara News

Viral News: ಬನಿಯನ್‌ನಲ್ಲೇ ವಿಚಾರಣೆಗೆ ಹಾಜರಾದ ಕಕ್ಷಿದಾರ; ಸಿಡಿಮಿಡಿಗೊಂಡ ಸುಪ್ರೀಂಕೋರ್ಟ್‌ ಜಡ್ಜ್‌ ಹೇಳಿದ್ದೇನು?

Viral News

Viral News

ನವದೆಹಲಿ: ನ್ಯಾಯಾಲಯದ ಕಲಾಪ ಎಂದರೆ ಅಲ್ಲೊಂದು ಗಂಭೀರ ವಾತಾವರಣ ನಿರ್ಮಾಣವಾಗಿರುತ್ತದೆ. ಅದಲ್ಲಿಯೂ ಸುಪ್ರೀಂ ಕೋರ್ಟ್‌ನ ವಿಚಾರಣೆ ಎಂದರೆ ಕೇಳಬೇಕೆ? ಪ್ರತಿಯೊಂದು ಅಂಶವೂ ಶಿಸ್ತುಬದ್ಧವಾಗಿ ನಡೆಯುತ್ತದೆ. ನ್ಯಾಯಮೂರ್ತಿ, ವಕೀಲರಿಂದ ಹಿಡಿದು, ಜವಾನ, ಕಕ್ಷಿದಾರ ಎಲ್ಲರೂ ಶಿಷ್ಟಾಚಾರ ಪಾಲಿಸಬೇಕಾಗುತ್ತದೆ. ಆದರೆ ವಿಚಾರಣೆ ಸಂದರ್ಭ ಕಕ್ಷಿದಾರ ಬನಿಯನ್‌ನಲ್ಲಿ ಹಾಜರಾದರೆ ಅಲ್ಲಿ ಎಂತಹ ಮುಜುಗರದ ಸನ್ನಿವೇಶ ಸೃಷ್ಟಿಯಾಗಬಹುದು ಎಂದು ಊಹಿಸಿ. ಇಂತಹ ಸನ್ನಿವೇಶ ಸುಪ್ರೀಂ ಕೋರ್ಟ್‌ (Supreme Court) ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರಿಗೆ ಎದುರಾಗಿದೆ. ಈ ಕುರಿತಾದ ವಿವರ ಇಲ್ಲಿದೆ (Viral News).

ಜುಲೈ 8ರಂದು ಈ ಘಟನೆ ನಡೆದಿದೆ. ಕೋರ್ಟ್‌ 11ರ ವಿಚಾರಣೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯುತ್ತಿತ್ತು. ಈ ವೇಳೆ ಕಕ್ಷಿದಾರನೊಬ್ಬ ಬನಿಯನ್‌ ಧರಿಸಿ ವಿಚಾರಣೆಗೆ ಹಾಜರಾಗಿದ್ದ. ಆ ವ್ಯಕ್ತಿಯನ್ನು ನೋಡುತ್ತಿದ್ದಂತೆ ಸಿಡಿಮಿಡಿಗೊಂಡ ಜಡ್ಜ್‌ ನಾಗರತ್ನಾ ಅವರು ಆತನನ್ನು ಹೊರ ಹಾಕುವಂತೆ ಆದೇಶ ನೀಡಿದರು.

ಘಟನೆ ವಿವರ

ವಿಚಾರಣೆಗಾಗಿ ಎರಡೂ ಕಡೆಯವರನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂಪರ್ಕಿಸಲಾಗಿತ್ತು. ಈ ವೇಳೆ ಬನಿಯನ್‌ ಧರಿಸಿ ವ್ಯಕ್ತಿಯೊಬ್ಬ ಹಾಜರಾಗಿದ್ದ. ಇದನ್ನು ನೋಡುತ್ತಲೇ ಕೋಪಗೊಂಡ ನಾಗರತ್ನಾ ಅವರು, ʼʼಬನಿಯನ್‌ ಧರಿಸಿ ಬಂದವರು ಯಾರು?ʼʼ ಎಂದು ಅಸಮಾಧಾನದಿಂದ ಪ್ರಶ್ನಿಸಿದರು. ಜಸ್ಟಿಸ್‌ ದತ್ತ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ʼʼಈತ ಕೇಸ್‌ಗೆ ಸಂಬಂಧಪಟ್ಟ ವ್ಯಕ್ತಿಯೇ ಅಥವಾ ಹೊರಗಿನವೇ?ʼʼ ಎಂದು ಕೇಳಿದರು.

ಇದಾದ ಬಳಿಕ ನ್ಯಾಯಮೂರ್ತಿ ನಾಗರತ್ನಾ ಅವರು ಸಿಟ್ಟಿನಿಂದ ಬನಿಯನ್‌ ಧರಿಸಿ ಬಂದ ವ್ಯಕ್ತಿಯನ್ನು ಹೊರ ಹಾಕುವಂತೆ ಕೋರ್ಟ್‌ ಮಾಸ್ಟರ್‌ಗೆ ಆದೇಶ ಹೊರಡಿಸಿದರು. ʼʼಇದು ಹೇಗೆ ಸಂಭವಿಸಿತು? ಅವರನ್ನು ವಿಡಿಯೊ ಕಾನ್ಫರೆನ್ಸ್‌ನಿಂದ ಹೊರಗೆ ಹಾಕಿʼʼ ಎಂದು ಸೂಚಿಸಿದರು. ಬಳಿಕ ಆತನನ್ನು ಹೊರ ಹಾಕಲಾಯಿತು.

ಹಿಂದೆಯೂ ನಡೆದಿತ್ತು

ಷರ್ಟ್‌ ಧರಿಸದೆ ವಿಚಾರಣೆ ಹಾಜರಾದ ಪ್ರಕರಣ ಹಿಂದೆಯೂ ನಡೆದಿತ್ತು. 2021ರಲ್ಲಿ ಈ ಘಟನೆ ದೆಹಲಿ ಹೈಕೋರ್ಟ್‌ನ ಆನ್‌ಲೈನ್‌ ವಿಚಾರಣೆ ಸಂದರ್ಭದಲ್ಲಿ ನಡೆದಿತ್ತು. ಅಂದು ಬನಿಯನ್‌ ಧರಿಸಿ ವಿಚಾರಣೆಗೆ ಹಾಜರಾದ ವ್ಯಕ್ತಿಗೆ ದೆಹಲಿ ಹೈಕೋರ್ಟ್‌ 10 ಸಾವಿರ ರೂ. ದಂಡ ವಿಧಿಸಿತ್ತು. ಜತೆಗೆ ಇಂತಹ ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿತ್ತು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ʼʼವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯುತ್ತಿದ್ದರೂ ಅವರು ಸೂಕ್ತ ಧಿರಿಸಿನಲ್ಲಿ ಹಾಜರಾಗಬೇಕಿತ್ತು. ಇದನ್ನು ಉಲ್ಲಂಘಿಸಿದ ಕಾರಣಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗುವುದುʼʼ ಎಂದು ಹೈಕೋರ್ಟ್‌ ಆದೇಶ ಹೊರಡಿಸಿತ್ತು.

ಪತಿ ವಿರುದ್ಧ ಪತ್ನಿ ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾ. ರಜನೀಶ್ ಭಟ್ನಾಗರ್ ನೇತೃತ್ವದ ಪೀಠದಲ್ಲಿ ನಡೆದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗೆ ಗುರುತು ಹಚ್ಚಲು ಅಗತ್ಯವಿದ್ದ ಕಾರಣಕ್ಕೆ ಐದನೇ ಅರ್ಜಿದಾರನೊಬ್ಬ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸಿದ್ದ. ಆದರೆ ಈ ವೇಳೆ ಆತ ಬನಿಯನ್‌ನಲ್ಲಿ ವರ್ಚುವಲ್‌ ವಿಚಾರಣೆಯಲ್ಲಿ ಪಾಲ್ಗೊಂಡಿದ್ದು ನ್ಯಾಯಾಲಯವನ್ನು ಕೆರಳಿಸಿತ್ತು

Exit mobile version