Site icon Vistara News

Viral News: ಇನ್‌ಸ್ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ ʼಅನಾಗರಿಕ ನಡೆʼಗೆ ನೆಟ್ಟಿಗರಿಂದ ಟೀಕೆ; ಆಗಿದ್ದೇನು?

surath

surath

ಸೂರತ್‌: ಜನರು ಎಷ್ಟೇ ಮುಂದುವರಿದಿದ್ದರೂ ಹಳೆಯ ಗೊಡ್ಡು ಸಂಪ್ರದಾಯಗಳಿಗೆ, ಮೂಢ ನಂಬಿಕೆಗೆ ಜೋತು ಬೀಳುತ್ತಾರೆ ಎನ್ನುವುದಕ್ಕೆ ಉತ್ತಮ ಉದಾರಣೆ ಇಲ್ಲಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಫ್ಯಾಷನ್, ಸೌಂದರ್ಯ ಮತ್ತು ಪ್ರಯಾಣದ ವಿಡಿಯೊಗಳನ್ನು ಪೋಸ್ಟ್ ಮಾಡುವ ಪ್ರಭಾವಶಾಲಿಯೊಬ್ಬರು (Influencer) ಮಗಳ ಮುಟ್ಟಿನ ವಿಷಯದಲ್ಲಿ ಅನುಸರಿಸಿದ ನಡೆ ಟೀಕೆಗೆ ಕಾರಣವಾಗಿದೆ. ಋತುಬಂಧಕ್ಕೊಳಗಾದ ಮಗಳನ್ನು ದೂರ ಇಟ್ಟು ಕುಟುಂಬ ಸದಸ್ಯರೆಲ್ಲ ಒಟ್ಟಿಗೆ ಊಟಕ್ಕೆ ಕುಳಿತಿದ್ದು, ಸದ್ಯ ಈ ವಿಚಾರ ವೈರಲ್‌ ಆಗಿದೆ (Viral News) .

ಏನಿದು ಘಟನೆ?

ಸೂರತ್ ಮೂಲದ ರೂಪಲ್ ಮಿತುಲ್ ಶಾ ಕಳೆದ ತಿಂಗಳು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರ ಕುಟುಂಬವು ತಮ್ಮ ಹೊಸ ಮನೆಯಲ್ಲಿ ವೈಭವೋಪೇತ ಊಟದ ಮೇಜಿನ ಮೇಲೆ ಆಹಾರ ಸೇವಿಸುತ್ತಿರುವುದು ಕಂಡು ಬರುತ್ತದೆ. ಹೊಸ ಮನೆಯಲ್ಲಿ ಇದು ಮೊದಲ ಊಟ ಎಂದು ಅವರು ಹೇಳಿಕೊಂಡಿದ್ದರು.

ಈ ಮಧ್ಯೆ ನೆಟ್ಟಿಗರ ಗಮನ ಸೆಳೆದದ್ದು ರೂಪಲ್ ಮಿತುಲ್ ಶಾ ಅವರ ಮಗಳು ತನ್ನ ತಟ್ಟೆಯೊಂದಿಗೆ ನೆಲದ ಮೇಲೆ ಕುಳಿತಿದ್ದ ದೃಶ್ಯ. ಕುಟುಂಬವು ಹರಟೆಯಲ್ಲಿ ತೊಡಗಿಕೊಂಡು ಊಟ ಮಾಡುತ್ತಿದ್ದರೆ ಈ ಹುಡುಗಿ ಏಕಾಂಗಿಯಾಗಿ ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವುದು ಕಂಡು ಬಂದಿತ್ತು. ಮುಟ್ಟಾಗಿದ್ದ ಮಗಳು ಆ ಸಮಯದಲ್ಲಿ ನೆಲದ ಮೇಲೆ ಕುಳಿತಿದ್ದಳು ಮತ್ತು ಆ ದಿನಗಳಲ್ಲಿ ಇತರ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ ಎಂದು ಶಾ ವಿವರಿಸಿದ್ದರು. ಹಲವು ವರ್ಷಗಳಿಂದ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿರುವುದಾಗಿ ಅವರು ಹೇಳಿದ್ದರು.

“ಮನೆ ಸ್ಥಳಾಂತರಗೊಂಡ ನಂತರ ಮೊದಲ ಕುಟುಂಬ ಭೋಜನ… ಇನ್ನೂ ಅನ್‌ಲಾಕ್‌ ಮಾಡಬೇಕಾದ ವಿಷಯ ಬಹಳಷ್ಟಿದೆ. ಹೌದು…ಋತುಮತಿಯರಾದವರನ್ನು ಆ ದಿನಗಳಲ್ಲಿ ನಾವು ಪ್ರತ್ಯೇಕ ಇರಿಸುತ್ತೇವೆ. ನಮ್ಮ ಕುಟುಂಬ ಬಹಳಷ್ಟು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಆ ಸಂಪ್ರದಾಯವನ್ನು ಮುಂದುವರಿಸಲು ಇಷ್ಟಪಡುತ್ತೇವೆ. ನನ್ನ ಕುಟುಂಬವು ತೆಗೆದುಕೊಂಡ ನಿರ್ಧಾರವನ್ನು ನಾವು ಹಿಂದಿನಿಂದಲೂ ಗೌರವಿಸುತ್ತೇವೆ ಮತ್ತು ಇಂದಿಗೂ ನಾವು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ!ʼʼ ಎಂದು ರೂಪಲ್ ಮಿತುಲ್ ಶಾ ಬರೆದುಕೊಂಡಿದ್ದರು. ಮಗಳನ್ನು ದೂರ ಇಟ್ಟಿದ್ದಕ್ಕೆ ಕಾರಣ ವಿವರಿಸಿದ್ದರು. ನವೆಂಬರ್‌ 6ರಂದು ಪೋಸ್ಟ್‌ ಮಾಡಲಾದ ಈ ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಆದರೆ ಕಮೆಂಟ್‌ ವಿಭಾಗವನ್ನು ಮುಚ್ಚಲಾಗಿತ್ತು.

ಕೆಲವು ನೆಟ್ಟಿಗರು ಈ ಕ್ಲಿಪ್ ಅನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼಸೋಷಿಯಲ್‌ ಮೀಡಿಯಾ ಪ್ರಭಾವಶಾಲಿಗಳು ತಮ್ಮ ಐಷರಾಮಿ ಮನೆಯ ರೀಲ್‌ಗಳನ್ನು ಶೇರ್‌ ಮಾಡಿದ್ದಾರೆ. ಕುಟುಂಬ ಸದಸ್ಯರೆಲ್ಲ ಡೈನಿಂಗ್‌ ಟೇಬಲ್‌ನಲ್ಲಿ ಊಟ ಮಾಡುತ್ತಿದ್ದರೆ ಹುಡುಗಿಯೊಬ್ಬಳು ದೂರದಲ್ಲಿ ನೆಲದ ಮೇಲೆ ಕುಳಿತು ಆಹಾರ ಸೇವಿಸುತ್ತಿದ್ದಾಳೆ. ಅವಳು ಋತುಮತಿಯಾದ ಕಾರಣ ಈ ನಡೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆʼʼ ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದಾರೆ.

ಇದನ್ನೂ ಓದಿ: Viral Video: ಹಿಂದೂ ದೇವಾಲಯವನ್ನು ಪ್ರಾಣಿಗಳ ದೊಡ್ಡಿ ಮಾಡಿದ ಪಾಪಿ ಪಾಕಿಗಳು

“ನೆಲದ ಮೇಲೆ ಮಗಳನ್ನು ಕೂರಿಸಿ ಅವರು ಹೆಮ್ಮೆ ಪಡುತ್ತಾರೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. “ನಮ್ಮ ಕುಟುಂಬವು ಈ ರೀತಿಯ ಆಚರಣೆಗಳನ್ನು ಹೊಂದಿಲ್ಲ ಎಂದು ಸಂತಸದಿಂದ ಹೇಳುತ್ತೇನೆʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. “ಇದು ಭಾರತದ ಅತ್ಯಂತ ಸಾಂಪ್ರದಾಯಿಕ ಮತ್ತು ಸಂಕುಚಿತ ಮನಸ್ಸಿನ ಜನರ ಮಧ್ಯೆ ಮಾತ್ರ ಸಂಭವಿಸುತ್ತದೆ. ಆದರೆ ಎಲ್ಲರೂ ಸಮಯದೊಂದಿಗೆ ಬದಲಾಗಲಿದೆ ಎನ್ನುವ ನಂಬಿಕೆ ಇದೆʼʼ ಎಂದು ಮಗದೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version