ಹೈದರಾಬಾದ್: ಆಗ ತಾನೆ ಮದುವೆಯಾದವರು ಹೇಗಿರುತ್ತಾರೆ? ಗಂಡ-ಹೆಂಡತಿ ಅಂಟಿಕೊಂಡೇ ಇರುತ್ತಾರೆ, ಹನಿಮೂನ್‌ಗೆ ಎಲ್ಲಿ ಹೋಗಬೇಕು, ಮನೆಯಲ್ಲಿ ಎರಡು ನಿಮಿಷ ಯಾರೂ ಇರದಿದ್ದರೆ ಸಿಹಿಮುತ್ತು ನೀಡಬೇಕು ಎಂದು ಹಾತೊರೆಯುತ್ತಿರುತ್ತಾರೆ. ಆದರೆ, ತೆಲಂಗಾಣದಲ್ಲಿ ಯುವತಿಯೊಬ್ಬಳು ಮದುವೆಯಾದ ಮರುದಿನವೇ ಹೆಣ್ಣುಮಗುವಿಗೆ ಜನ್ಮ (Viral News) ನೀಡಿದ್ದಾಳೆ. ನೂರು ಕನಸು ಕಟ್ಟಿಕೊಂಡಿದ್ದ ಆಕೆಯ ಗಂಡನು ಪೆಚ್ಚುಮೋರೆ ಹಾಕಿಕೊಂಡು ಕೂರುವಂತಾಗಿದೆ.
ಹೌದು, ಸಿಕಂದಬಾದ್‌ನ ಯುವತಿ ಹಾಗೂ ನೊಯ್ಡಾ ಮೂಲದ ಯುವಕನು ಕಳೆದ ಸೋಮವಾರ ಮದುವೆಯಾಗಿದ್ದಾರೆ. ಮದುವೆಯಾದ ರಾತ್ರಿಯೇ ಮಹಿಳೆಯು ತನಗೆ ಹೊಟ್ಟೆ ನೋವು ಎಂದು ಅಳಲು ಶುರು ಮಾಡಿದ್ದಾಳೆ. ಇದಾದ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿಯಿಡೀ ಹೊಟ್ಟೆನೋವಿನಿಂದ ಬಳಲಿದ ಮಹಿಳೆಯನ್ನು ತಪಾಸಣೆ ನಡೆಸಿದ ವೈದ್ಯರು, ಆಕೆ ಗರ್ಭಿಣಿ ಎಂದು ಹೇಳಿದ್ದಾರೆ. ಅಲ್ಲದೆ, ಇದಾದ ಕೆಲವೇ ಗಂಟೆಗಳಲ್ಲಿ ಮಹಿಳೆಯು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
ಮಹಿಳೆಯ ಮನೆಯವರಿಗೆ ಮೊದಲೇ ಗೊತ್ತಿತ್ತು
ಮದುವೆಯಾದ ಮಹಿಳೆಯು ಏಳು ತಿಂಗಳ ಗರ್ಭಿಣಿ ಎಂಬುದು ಆಕೆಯ ಕುಟುಂಬಸ್ಥರಿಗೆ ಗೊತ್ತಿತ್ತು. ಆದರೆ, ಈ ಕುರಿತು ಮದುವೆಯಾಗುವ ವ್ಯಕ್ತಿಗೆ ಹೇಳಿರಲಿಲ್ಲ. ವಧುವಿನ ಹೊಟ್ಟೆ ಏಕೆ ಉಬ್ಬಿದೆ ಎಂಬುದಕ್ಕೆ, ಕಿಡ್ನಿ ಸ್ಟೋನ್ ಸರ್ಜರಿ ಆಗಿದೆ. ಹಾಗಾಗಿ, ಹೊಟ್ಟೆ ಊದಿಕೊಂಡಿದೆ ಎಂಬುದಾಗಿ ಸಬೂಬು ಹೇಳಿದ್ದಾರೆ. ಹೀಗೆ, ಒಂದರ ಹಿಂದೆ ಒಂದರಂತೆ ಸುಳ್ಳು ಹೇಳಿ ನೊಯ್ಡಾ ಯುವಕನಿಗೆ ತಮ್ಮ ಮಗಳನ್ನು ಕೊಟ್ಟು ಪೋಷಕರು ಮದುವೆ ಮಾಡಿಸಿದ್ದಾರೆ. ಆದರೆ, ಮದುವೆಯಾದ ಮರುದಿನವೇ ಆಕೆ ಗರ್ಭಿಣಿ ಎಂಬ ವಿಚಾರ ವರನ ಕಡೆಯವರಿಗೆ ಗೊತ್ತಾಗಿದೆ.
ಇದನ್ನೂ ಓದಿ: Viral Video: ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿದ ನದಿ; ಆತಂಕದ ಮಧ್ಯೆಯೇ ಕಾರಣ ಹೇಳಿದ ಬಿಯರ್ ಫ್ಯಾಕ್ಟರಿ
ಕೊನೆಗೂ ಆಯಿತು ಸಂಧಾನ
ಮದುವೆಯಾದ ಮಹಿಳೆಯು ಮೊದಲೇ ಗರ್ಭಿಣಿಯಾಗಿದ್ದಳು ಎಂಬ ವಿಷಯ ತಿಳಿದ ವರನ ಕಡೆಯವರು ಈ ಮದುವೆ ಅಮಾನ್ಯ ಎಂದಿದ್ದಾರೆ. ವರ ಕೂಡ ಮಹಿಳೆಯನ್ನು ತಿರಸ್ಕರಿಸಿದ್ದಾನೆ. ಕೊನೆಗೆ ವಧುವಿನ ಕಡೆಯವರು ಮಹಿಳೆ ಹಾಗೂ ಆಕೆಯ ಮಗುವನ್ನು ಕರೆದುಕೊಂಡು ಸಿಕಂದರಾಬಾದ್‌ಗೆ ಮರಳಿದ್ದಾರೆ. ಸಂಧಾನ ಮಾಡಿಕೊಂಡ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂದು ತಿಳಿದುಬಂದಿದೆ. ಆದರೆ, ಮದುವೆ ಬಗ್ಗೆ ನೂರು ಕನಸು ಕಂಡಿದ್ದ ವ್ಯಕ್ತಿಗೆ ಭಾರಿ ನಿರಾಸೆಯಾಗಿದೆ ಎಂದು ತಿಳಿದುಬಂದಿದೆ.