ಲಖನೌ: ಮುಸ್ಲಿಂ ಶಾಸಕಿಯೊಬ್ಬರು ಭೇಟಿ ನೀಡಿದ ನಂತರ ದೇವಸ್ಥಾನವನ್ನು ʼಗಂಗಾಜಲʼ (Gangajal) ಸಿಂಪಡಿಸಿ ʼಶುದ್ಧೀಕರಿಸಿದʼ (Purification) ಘಟನೆ ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ನಡೆದಿದೆ.
ಉತ್ತರಪ್ರದೇಶದ ಸಿದ್ಧಾರ್ಥನಗರಕ್ಕೆ ಡೊಮರಿಯಾಗಂಜ್‌ನ ಎಸ್‌ಪಿ ಶಾಸಕಿ ಸೈಯಾದಾ ಖಾತೂನ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದಾಗ ಅಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರು ಬಂದು ಹೋದ ಬಳಿಕ ಜಿಲ್ಲೆಯ ಹಲವಾರು ಹಿಂದೂ ಸಂಘಟನೆಗಳ ಸದಸ್ಯರು ಬಂದ ದೇವಸ್ಥಾನದ ಮೇಲೆ ʼಗಂಗಾಜಲʼ ಸಿಂಪಡಿಸಿ ಆವರಣವನ್ನು ʼಶುದ್ಧೀಕರಿಸಿದರುʼ ಎಂದು ವರದಿಯಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ ಎಂದು ಶಾಸಕರು ಬಳಿಕ ತಿಳಿಸಿದ್ದಾರೆ. ಅವರು ಬಂದು ಹೋದ ಮರುದಿನ ಸ್ಥಳೀಯ ಪಂಚಾಯತ್ ಅಧ್ಯಕ್ಷರು, ಜೊತೆಗೆ
ವಿವಿಧ ಹಿಂದೂ ಸಂಘಟನೆಗಳ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಗಂಗಾಜಲ ಚಿಮುಕಿಸಿ, ಹನುಮಾನ್ ಚಾಲೀಸಾ ಪಠಿಸಿ, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.
“ಸಮ್ಯಾ ಮಾತಾ ಮಂದಿರವು ಭಕ್ತರ ನಂಬಿಕೆಯ ಕೇಂದ್ರವಾಗಿದೆ. ಇಲ್ಲಿ ಸಾಕಷ್ಟು ಜನರು ಸೇರುತ್ತಾರೆ. ಸ್ಥಳೀಯ ಶಾಸಕರು ಇಲ್ಲಿ ಬಂದು ಅಗೌರವ ತೋರಿದ್ದಾರೆ. ಶಾಸಕರು ಮಾಂಸಾಹಾರಿ ಮತ್ತು ಆಕೆ ಭೇಟಿ ನೀಡಿರುವುದು ಸ್ಥಳದ ಪಾವಿತ್ರ್ಯದ ಮೇಲೆ ಪರಿಣಾಮ ಬೀರಿದೆʼʼ ಎಂದು ಬರ್ಹ್ನಿ ಚಾಫಾ ನಗರ ಪಂಚಾಯತಿ ಅಧ್ಯಕ್ಷ ಧರ್ಮರಾಜ್ ವರ್ಮಾ ಹೇಳಿದ್ದಾರೆ. ವಿವಿಧ ಹಿಂದೂ ಸಂಘಟನೆಗಳ ಹಲವಾರು ಸದಸ್ಯರ ಜತೆ ಸೇರಿ ದೇವಾಲಯವನ್ನು “ಶುದ್ಧೀಕರಿಸಲು” ಗಂಗಾಜಲ ಸಿಂಪಡಿಸಿದುದನ್ನು ಅವರು ಒಪ್ಪಿದ್ದಾರೆ.
ಡೊಮರಿಯಾಗಂಜ್ ವೃತ್ತದ ಪೊಲೀಸ್ ಅಧಿಕಾರಿ ಸುಜಿತ್ ಕುಮಾರ್ ರೈ ಅವರು ಯಾವುದೇ ಸಂಭಾವ್ಯ ಘರ್ಷಣೆಯನ್ನು ತಡೆಗಟ್ಟಲು ಬಿಗಿ ಭದ್ರತೆ ಒದಗಿಸಲಾಗಿದೆ. ಯಾವುದೇ ದೂರು ಈ ಕುರಿತಂತೆ ದಾಖಲಾಗಿಲ್ಲ ಎಂದಿದ್ದಾರೆ. “ನಾವು ಘಟನೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಮತ್ತು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ” ಎಂದು ಸಿದ್ಧಾರ್ಥ್ ನಗರ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ.
ಎಸ್‌ಪಿ ಶಾಸಕರು, “ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಮೇಲಾಗಿ, ನಾನು ಸಾರ್ವಜನಿಕ ಪ್ರತಿನಿಧಿ. ದೇವಸ್ಥಾನ ಅಥವಾ ಮಸೀದಿ, ಯಾವುದೇ ಇರಲಿ, ನನ್ನನ್ನು ಆಹ್ವಾನಿಸಿದರೆ ನಾನು ಖಂಡಿತವಾಗಿಯೂ ಅಲ್ಲಿಗೆ ಹೋಗುತ್ತೇನೆ. ನಾನು ಹಲವಾರು ದೇವಾಲಯಗಳ ಜೀರ್ಣೋದ್ಧಾರಕ್ಕೂ ಹಣ ನೀಡಿದ್ದೇನೆʼʼ ಎಂದು ಶಾಸಕಿ ಸೈಯಾದಾ ಖಾತೂನ್ ಅವರು ಹೇಳಿದ್ದಾರೆ.
ಈಂಥ ಘಟನೆ ಉತ್ತರ ಪ್ರದೇಶದಲ್ಲಿ ಹೊಸದಲ್ಲ. 2018ರಲ್ಲಿ ಹಮೀರ್‌ಪುರ ಜಿಲ್ಲೆಯ ದೇವಸ್ಥಾನವನ್ನು ʼದಲಿತರ ಪ್ರವೇಶʼದ ನಂತರ ಗಂಗಾಜಲದಿಂದ ಶುದ್ಧೀಕರಣಗೊಳಿಸಲಾಗಿತ್ತು. ಭಾರತೀಯ ಜನತಾ ಪಕ್ಷಕ್ಕೆ ಸೇರಿದ ದಲಿತ ಮಹಿಳಾ ಶಾಸಕಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ: Viral News: ರೇಮಂಡ್ ಮಾಲೀಕ ಸಿಂಘಾನಿಯಾನ ಕಂಜೂಸ್ ಮುಖ ಬಯಲು ಮಾಡಿದ ‘ಮೋದಿ’