Site icon Vistara News

Viral News: ಪುಸ್ತಕಗಳಿಗಾಗಿ 1 ಕೋಟಿ ರೂಪಾಯಿ ಖರ್ಚು ಮಾಡಿದ ಶಿಕ್ಷಕ!

book lovers

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚಕ್ದಾಹ್‌ನ ಶಿಕ್ಷಕರೊಬ್ಬರು ಕೋಲ್ಕತ್ತಾ ಪುಸ್ತಕ ಮೇಳದಿಂದ (Kolkata book fair) 3 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಸುದ್ದಿಯಾಗಿದ್ದಾರೆ (viral news). ಇವರ ಮನೆಯಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ ಪುಸ್ತಕಗಳಿವೆ!

“ಹೌದು, ಇದು ನಿಜ. ಈ ವರ್ಷ ನಾನು ಕೋಲ್ಕತ್ತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಿಂದ 3.36 ಲಕ್ಷ ರೂಪಾಯಿಗಳ ಪುಸ್ತಕಗಳನ್ನು ಖರೀದಿಸಿದ್ದೇನೆ” ಎಂದು ಶಿಕ್ಷಕ ದೇಬಾರತ ಚಟ್ಟೋಪಾಧ್ಯಾಯ ಹೇಳಿದ್ದಾರೆ. “ಪುಸ್ತಕಗಳನ್ನು ಖರೀದಿಸಲು ನನ್ನ ವಿದ್ಯಾರ್ಥಿಗಳೊಂದಿಗೆ ಎಂಟು ಬಾರಿ ಮೇಳಕ್ಕೆ ಭೇಟಿ ನೀಡಿದ್ದೇನೆ. ಪ್ರಾಮಾಣಿಕವಾಗಿ, ಎಷ್ಟು ಪುಸ್ತಕಗಳನ್ನು ಖರೀದಿಸಿದ್ದೇನೆ ಎಂಬುದು ನನಗೆ ನಿಜವಾಗಿಯೂ ತಿಳಿದಿಲ್ಲ” ಎಂದು ಅವರು ಹೇಳಿದ್ದಾರೆ!

ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾದ ಚಟ್ಟೋಪಾಧ್ಯಾಯ ಪುಸ್ತಕಗಳ ಮೇಲೆ ಹಣ ಚೆಲ್ಲುತ್ತಿರುವುದು ಇದೇ ಮೊದಲಲ್ಲ. ಅವರು ಕೋಲ್ಕತ್ತಾದ ಕಾಲೇಜ್ ಸ್ಟ್ರೀಟ್‌ನ ನಿಯಮಿತ ಅತಿಥಿ. ಇದು ಹೊಸ ಮತ್ತು ಹಳೆಯ ಪುಸ್ತಕಗಳ ಸಂಗ್ರಹಕ್ಕೆ ಹೆಸರುವಾಸಿಯಾದ ಪ್ರದೇಶ. ಇಡೀ ವರ್ಷ ಉಳಿಸಿದ ಹಣವನ್ನು ಅವರು ಪುಸ್ತಕ ಮೇಳದಲ್ಲಿ ಶಾಪಿಂಗ್ ಮಾಡುತ್ತಾರೆ. ಭಾರಿ ಪ್ರಮಾಣದಲ್ಲಿ ಪುಸ್ತಕಗಳನ್ನು ಖರೀದಿಸುವುದು ಅವರ ನೆಚ್ಚಿನ ಚಟುವಟಿಕೆ.

“ಕಾಲೇಜ್ ಸ್ಟ್ರೀಟ್‌ನಲ್ಲಿ ಪುಸ್ತಕಗಳ ನಡುವೆ ಗಂಟೆಗಳನ್ನು ಕಳೆಯುವುದು ನನ್ನ ನೆಚ್ಚಿನ ಕೆಲಸ. ಕೋಲ್ಕತ್ತಾ, ದೆಹಲಿ, ಮುಂಬೈ ಮತ್ತು ಇತರ ಮೆಟ್ರೋ ನಗರಗಳ ಪ್ರಕಾಶಕರು ನನ್ನ ಸ್ನೇಹಿತರು. ಅವರು ಹೊಸ, ಅಪರೂಪದ ಪುಸ್ತಕಗಳನ್ನು ಪಡೆಯಲು ಮತ್ತು ಹೊಸ ಲೇಖಕರನ್ನು ಹುಡುಕಲು ನನಗೆ ಸಹಾಯ ಮಾಡುತ್ತಾರೆ” ಎನ್ನುತ್ತಾರೆ ಚಟ್ಟೋಪಾಧ್ಯಾಯ.

ದೇಬಾರತ ಬಳಿ ನಿಜವಾಗಿಯೂ ಎಷ್ಟು ಪುಸ್ತಕಗಳು ಇವೆ? “ಚಕ್ಡಾ ಮತ್ತು ರಾಣಾಘಾಟ್‌ನಲ್ಲಿರುವ ನನ್ನ ಮನೆಯಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ 14,000 ಪುಸ್ತಕಗಳಿವೆ. ನನ್ನ ಮನೆಯಲ್ಲಿ ಪುಸ್ತಕಗಳಿಂದ ತುಂಬಿರುವ ಕೋಣೆ ಇದೆ. ಅಲ್ಲಿ ಯಾರು ಬೇಕಿದ್ದರೂ ಬಂದು ಪುಸ್ತಕಗಳನ್ನು ಓದಬಹುದು, ಟಿಪ್ಪಣಿಗಳನ್ನು ಮಾಡಿಕೊಳ್ಳಬಹುದು” ಎನ್ನುತ್ತಾರೆ.

ಅವರು ಓದಲು ಇಷ್ಟಪಡುವ ಪುಸ್ತಕಗಳ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ: “ವಿಜ್ಞಾನ, ಸಾಹಿತ್ಯ, ಇತಿಹಾಸ, ರಾಜಕೀಯ, ತತ್ವಶಾಸ್ತ್ರ, ಸಂಗೀತ, ಕಾದಂಬರಿಗಳು, ಸಣ್ಣ ಕಥೆಗಳು, ಆಧ್ಯಾತ್ಮಿಕತೆ, ಸ್ವಯಂ ಸುಧಾರಣೆಯ ಪುಸ್ತಕಗಳು, ಎಲ್ಲವನ್ನೂ ಓದುತ್ತೇನೆ ಮತ್ತು ಖರೀದಿಸುತ್ತೇನೆ. ನಾನು ವಿಶ್ವಕೋಶಗಳನ್ನು ಓದಲು ಇಷ್ಟಪಡುತ್ತೇನೆ, ಹಾಗಾಗಿ ಅವುಗಳನ್ನು ಖರೀದಿಸುತ್ತೇನೆ.”

ಅವರ ಸಂಗ್ರಹವನ್ನು ಏನು ಮಾಡಲು ಉದ್ದೇಶಿಸಿದ್ದಾರೆ? ಚಟ್ಟೋಪಾಧ್ಯಾಯ ಚಕ್ಡಾದಲ್ಲಿ ಒಂದು ಗ್ರಂಥಾಲಯವನ್ನು ತೆರೆಯಲಿದ್ದಾರಂತೆ. ಅದಕ್ಕಾಗಿ ಆಸ್ತಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. “ಇಂದಿನ ದಿನಗಳಲ್ಲಿ ಕಾಣೆಯಾಗಿರುವ ಓದುವ ಹವ್ಯಾಸವನ್ನು ಯುವಕರಲ್ಲಿ ಪ್ರೋತ್ಸಾಹಿಸುವುದು ನನ್ನ ಆಲೋಚನೆ” ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Sushant Singh Rajput: ಪುಸ್ತಕದ ಮೂಲಕ ಸುಶಾಂತ್‌ ನೆನಪುಗಳನ್ನು ತೆರೆದಿಟ್ಟ ಸಹೋದರಿ!

Exit mobile version