ಲಖನೌ: ಉತ್ತರ ಪ್ರದೇಶದ ಬಿಜೆಪಿಯ ಮಾಜಿ ನಾಯಕರೊಬ್ಬನನ್ನು ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿದ್ದು, ʼಪಾರ್ಥೀವ ಶರೀರʼವನ್ನು ಮನೆಗೆ ಕೊಂಡೊಯ್ದ ಬಳಿಕ ಅವರು ಎಚ್ಚೆತ್ತಿದ್ದಾರೆ!
ಆಗ್ರಾದಲ್ಲಿ ನಡೆದ ಘಟನೆ ಇದು. ಮಹೇಶ್ ಬಾಘೇಲ್ ಎಂಬುದು ಈ ಮಾಜಿ ಬಿಜೆಪಿ ನಾಯಕರ ಹೆಸರು. ಮಹೇಶ್ ಬಘೇಲ್ ಅವರ ಆರೋಗ್ಯವು ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಘೋಷಿಸಿದರು. ವೈದ್ಯರು ಅವರ ಸಾವನ್ನು ದೃಢಪಡಿಸಿದ ನಂತರ, ಬಾಘೇಲ್ ಅವರ ಕುಟುಂಬದವರು ದೇಹವನ್ನು ಮನೆಗೆ ತಂದರು. ಅರ್ಧ ಘಂಟೆಯ ಬಳಿಕ ದೇಹದಲ್ಲಿನ ಚಲನೆಯನ್ನು ಕುಟುಂಬದವರು ಗಮನಿಸಿದರು. ಅವರನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ತಲುಪಿದಾಗ ಅವರು ಜೀವಂತವಾಗಿದ್ದುದು ಕಂಡುಬಂತು.
ಮಹೇಶ್ ಬಘೇಲ್ ಅವರ ಕುಟುಂಬ ಸದಸ್ಯರ ಪ್ರಕಾರ, ಪುಷ್ಪಾಂಜಲಿ ಆಸ್ಪತ್ರೆಗೆ ಅವರನ್ನು ಕೊಂಡೊಯ್ಯಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಅವರನ್ನು ಸರಾಯ್ ಖ್ವಾಜಾದಲ್ಲಿರುವ ನಿವಾಸಕ್ಕೆ ಕರೆತರಲಾಯಿತು. ಸಂಬಂಧಿಕರು ಸಾವಿನ ದುಃಖದಲ್ಲಿದ್ದಾಗಲೇ ಬಘೇಲ್ ಕಣ್ಣು ತೆರೆದು ನೋಡಿದರು, ದೇಹದಲ್ಲಿ ಚಲನೆ ಕಂಡುಬಂತು. ಚಲನವಲನ ನೋಡಿದ ಸಂಬಂಧಿಕರು ಬಘೇಲ್ ಅವರನ್ನು ನ್ಯೂ ಆಗ್ರಾದ ಆಸ್ಪತ್ರೆಗೆ ಕರೆದೊಯ್ದರು. ಈಗ ಮರುಜೀವ ಪಡೆದಿರುವ ಬಾಘೇಲ್ ಆಗ್ರಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮೊದಲು ಬಾಘೇಲ್ ಸತ್ತಿದ್ದಾರೆ ಎಂದು ಪ್ರಚಾರವಾಗಿತ್ತು. ಹೀಗಾಗಿ ಅವರ ಮನೆಗೆ ಬಂಧುಗಳು ಪಾರ್ಥಿವ ಶರೀರ ದರ್ಶನಕ್ಕೆ ಧಾವಿಸಿ ಬಂದಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಸಂತಾಪದ ಪೋಸ್ಟ್‌ಗಳು ಹರಿದಾಡಿದವು. ಇದೀಗ ಬಂಧುಗಳಿಗೆ ಸಂತಸವಾಗಿದೆ; ಆದರೆ ಅವರು ಸತ್ತಿದ್ದಾರೆ ಎಂದು ಘೋಷಿಸಿದ ವೈದ್ಯಾಧಿಕಾರಿಗೆ ಕೊರಳಿಗೆ ಪ್ರಕರಣ ಸುತ್ತಿಕೊಂಡಿದೆ.
ಇದನ್ನೂ ಓದಿ: Rachita Ram: ಫೋಟೊಶೂಟ್ ವೇಳೆ ಜಾರಿ ಬಿದ್ದ ರಚಿತಾ ರಾಮ್; ವಿಡಿಯೊ ವೈರಲ್!