ಡಿಸ್ಪುರ: ಅಸ್ಸಾಂನಲ್ಲಿ ಲವ್ ಜಿಹಾದ್ ಪ್ರಕರಣಗಳು ಜಾಸ್ತಿಯಾಗುತ್ತಿವೆ, ಲವ್ ಜಿಹಾದ್ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂಬ ಆಕ್ರೋಶ ವ್ಯಕ್ತವಾಗುತ್ತಿರುವ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೂ ಲವ್ ಜಿಹಾದ್ ವಿರುದ್ಧ ಮಾತನಾಡುತ್ತಿರುವ ಬೆನ್ನಲ್ಲೇ, ಲವ್ ಜಿಹಾದ್ ವಿರುದ್ಧ ಹೋರಾಡಲು ಬಜರಂಗದಳವು ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸಿದ ವಿಡಿಯೊ ವೈರಲ್ ಆಗಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ ರಾಷ್ಟ್ರೀಯ ಬಜರಂಗದಳದಿಂದ ಶಸ್ತ್ರಾಸ್ತ್ರಗಳ ಬಳಕೆ ಕುರಿತು ತರಬೇತಿ ಶಿಬಿರ ಆಯೋಜಿಸಲಾಗಿದೆ. ಸುಮಾರು 350 ಯುವಕರಿಗೆ ಬಂದೂಕುಗಳನ್ನು ಬಳಸುವ ಕುರಿತು ತರಬೇತಿ ನೀಡಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಬಜರಂಗದಳವೇ ಈ ಶಿಬಿರ ಆಯೋಜಿಸಿ, ಗುಂಡು ಹಾರಿಸುವುದನ್ನು ಕಲಿಸಿದೆ ಎಂಬ ಆರೋಪ ಕೇಳಿಬಂದಿದೆ.
ವೈರಲ್ ವಿಡಿಯೊ
ವಿಡಿಯೊ ವೈರಲ್ ಆಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಯಾಗಿದೆ. “ಮಣಿಪುರದಂತಹ ಹಿಂಸಾಚಾರ ಅಸ್ಸಾಂನಲ್ಲಿ ಭುಗಿಲೇಳುವ ಮೊದಲು ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು, “ಲವ್ ಜಿಹಾದ್ ವಿರುದ್ಧ ಹೋರಾಡಲು ಇಂತಹ ಕ್ರಮ ಅಗತ್ಯ” ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನು ಪ್ರತಿಪಕ್ಷಗಳ ನಾಯಕರು ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲು
ಇದನ್ನೂ ಓದಿ: Udupi Toilet Case : ಉಡುಪಿ ಟಾಯ್ಲೆಟ್ ವಿಡಿಯೊ ಪ್ರಕರಣಕ್ಕೆ ಭಯೋತ್ಪಾದನೆ, ಲವ್ ಜಿಹಾದ್ ಟ್ವಿಸ್ಟ್
“ರಾಷ್ಟ್ರೀಯ ಬಜರಂಗದಳದ ಹಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಗಲದಾಯಿಯಲ್ಲಿರುವ ಮಹರ್ಷಿ ವಿದ್ಯಾಮಂದಿರದಲ್ಲಿ ತರಬೇತಿ ನಡೆಸಿದ ವಿಡಿಯೊಗೆ ಸಂಬಂಧಿಸಿದಂತೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ” ದರಾಂಗ್ ಪೊಲೀಸರು ಮಾಹಿತಿ ನೀಡಿದ್ದಾರೆ. ದರಾಂಗ್ ಜಿಲ್ಲೆ ಮಾತ್ರವಲ್ಲ ರಾಜ್ಯಾದ್ಯಂತ ಇಂತಹ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿದುಬಂದಿದೆ.