Site icon Vistara News

Viral Video: ವೃದ್ಧೆಯನ್ನು ರೈಲು ಬೋಗಿವರೆಗೆ ಹೊತ್ತು ಸಾಗಿದ ಅಧಿಕಾರಿ; ಸದ್ದಿಲ್ಲದೆ ಮಾನವೀಯತೆ ಗದ್ದುಗೆ ಏರಿದೆ

Cop Carries Elderly Woman

Viral Video: Cop Carries Elderly Woman In His Arms Upto Her Coach At Borivali Station In Mumbai

ಮುಂಬೈ: ಅಪಘಾತದಿಂದ ರಸ್ತೆ ಬಿದ್ದು ಒದ್ದಾಡುತ್ತಿದ್ದರೂ ತಮ್ಮ ಪಾಡಿಗೆ ತಾವು ಹೋಗುವವರು, ಹೆತ್ತ ತಾಯಿಯೂ ಎಂಬುದನ್ನು ನೋಡದೆ ವೃದ್ಧಾಶ್ರಮಕ್ಕೆ ಸೇರಿಸುವವರು, ವಿಶೇಷ ಚೇತನರು ಅಂಗಲಾಚಿದರೂ ಒಂದು ರೂಪಾಯಿ ದಾನ ಮಾಡದವರನ್ನು ನೋಡಿದಾಗ ಕೋಪ ಬರುತ್ತದೆ. ನಮ್ಮ ಜನರಲ್ಲಿ ಮಾನವೀಯತೆ ಎಂಬುದು ಸತ್ತು ತುಂಬ ವರ್ಷವಾಗಿದೆಯಲ್ಲ ಎನಿಸುತ್ತದೆ. ಆದರೆ, ಮಹಾರಾಷ್ಟ್ರದ ಮುಂಬೈನಲ್ಲಿರುವ ಬೋರಿವಲಿ ರೈಲು ನಿಲ್ದಾಣದಲ್ಲಿ ವೃದ್ಧೆಯೊಬ್ಬರನ್ನು ಬೋಗಿಯವರೆಗೆ ಅಧಿಕಾರಿಯು ಹೆಗಲ ಮೇಲೆ ಹೊತ್ತುಕೊಂಡು (Viral Video) ಹೋಗಿ ಬಿಟ್ಟಿರುವುದನ್ನು ನೋಡಿದರೆ, ಮಾನವೀಯತೆ ಇನ್ನೂ ಇದೆ ಎಂದು ಎನಿಸುತ್ತದೆ.

ಹೌದು, ರೈಲ್ವೆ ರಕ್ಷಣಾ ಪಡೆಯಲ್ಲಿ (RPF) ಅಸಿಸ್ಟಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಆಗಿರುವ ಮಾನ್‌ ಸಿಂಗ್‌ ಅವರು ನಡೆಯಲು ಆಗದ ಮಹಿಳೆಯೊಬ್ಬರನ್ನು ಅವರು ಸೀಟ್‌ ರಿಸರ್ವ್‌ ಮಾಡಿದ ಬೋಗಿಯವರೆಗೆ ಹೊತ್ತುಕೊಂಡು ಹೋಗಿ ಬಿಟ್ಟಿದ್ದಾರೆ. ರೈಲು ನಿಲ್ದಾಣದಲ್ಲಿ ವ್ಹೀಲ್‌ ಚೇರ್‌ ಇರದ ಕಾರಣ ಮಹಿಳೆಯನ್ನು ಮಾನ್‌ ಸಿಂಗ್‌ ಅವರು ಹೊತ್ತುಕೊಂಡು ಹೋಗಿದ್ದಾರೆ. ಇವರು ಮಾನವೀಯತೆ ಪ್ರದರ್ಶಿಸಿರುವ ವಿಡಿಯೊ ವೈರಲ್‌ ಆಗಿದೆ.

ಅಸಿಸ್ಟಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಮಾನ್ ಸಿಂಗ್‌ ಅವರು ಮಹಿಳೆಯನ್ನು ಹೊತ್ತುಕೊಂಡು ಹೋಗಿ, ಬೋಗಿಗೆ ಬಿಡುವ ವಿಡಿಯೊವನ್ನು ಮುಂಬೈ ನ್ಯೂಸ್‌ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ವಿಡಿಯೊವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ಸಾವಿರಾರು ಜನ ಮಾನ್‌ ಸಿಂಗ್‌ ಅವರ ಮಾನವೀಯತೆಗೆ ಸೆಲ್ಯೂಟ್‌ ಎಂದಿದ್ದಾರೆ.

ಇದನ್ನೂ ಓದಿ: Viral Video: ‌ಹೌ ಡೇರ್‌ ಯೂ… ವಿಮಾನದಲ್ಲಿ ಮಗಳನ್ನು ಮುಟ್ಟಿದ ಪುಂಡನ ಚಳಿ ಬಿಡಿಸಿದ ತಂದೆ; ವಿಡಿಯೊ ವೈರಲ್

“ನಿಮ್ಮ ಕೆಲಸಕ್ಕಿಂತ ಶ್ರೇಷ್ಠವಾದ ಕೆಲಸವೇ ಜಗತ್ತಿನಲ್ಲಿ ಇಲ್ಲ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಪೊಲೀಸ್‌ ಅಧಿಕಾರಿಗೆ ತುಂಬ ಧನ್ಯವಾದಗಳು. ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇವರೇ ಸಾಕ್ಷಿ. ನೀವು ಎಲ್ಲ ಅಧಿಕಾರಿಗಳಿಗೂ ಮಾದರಿ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಜನರ ಸೇವೆ ಮಾಡುವುದು ದೇವರ ಸೇವೆ ಮಾಡುವುದಕ್ಕೆ ಸಮ. ನಿಮಗೆ ಸೆಲ್ಯೂಟ್‌” ಎಂದು ಇನ್ನೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ, ಸಾವಿರಾರು ಜನ ಪೊಲೀಸ್‌ ಅಧಿಕಾರಿಯ ಮಾನವೀಯತೆಗೆ ಮೆಚ್ಚುಗೆ ಸೂಚಿಸಿದ್ದಾರೆ.

Exit mobile version